September 19, 2024

ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ರದ್ದುಪಡಿಸಬೇಕು

0
ಬಿಎಸ್‌ಪಿ ಜಿಲ್ಲಾಧ್ಯಕ್ಷ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಕೆ.ಟಿ.ರಾಧಕೃಷ್ಣ ಪತ್ರಿಕಾಗೋಷ್ಠಿ

ಬಿಎಸ್‌ಪಿ ಜಿಲ್ಲಾಧ್ಯಕ್ಷ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಕೆ.ಟಿ.ರಾಧಕೃಷ್ಣ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಪಡಿಸಬೇಕು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಕೆ.ಟಿ.ರಾಧಕೃಷ್ಣ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ ಡ್ರೈವ್ ಪ್ರಕರಣವನ್ನು ಒಂದು ವರ್ಷದ ಹಿಂದೆಯೇ ಬಿಜೆಪಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ ಎಂದು ದೇವರಾಜಗೌಡ ಬಹಿರಂಗಪಡಿಸಿದ್ದಾರೆ. ಆದರೂ ಆರೋಪಿಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ಹಾಸನ ಲೋಕಸಭಾ ಚುನಾವಣೆಯನ್ನು ಆಯೋಗ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿ ಯಾರು ಎಂದು ಈಗಾಗಲೇ ಗೊತ್ತಾಗಿದೆ. ಬಂಧಿಸಲು ತಡವೇಕೆ ಎಂದು ಪ್ರಶ್ನಿಸಿದ ಅವರು ಈ ಮಧ್ಯೆ ಕಾಂಗ್ರೆಸ್ ಬಿಜೆಪಿ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ. ಆರೋಪಿಯ ಕುಟುಂಬವನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣ ಮೊದಲೇ ಗೊತ್ತಿದ್ದರಿಂದ ಹೆದರಿ ರಕ್ಷಣೆಗಾಗಿ ಬಿಜೆಪಿ ಜತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಇದು ಸಾಮಾನ್ಯ ಪ್ರಕರಣವಲ್ಲ. ಇಡೀ ದೇಶದ ಜನತೆ ತಲೆ ತಗ್ಗಿಸುವಂತಾಗಿದೆ. ಈ ಸರಕಾರದಿಂದ ಶಾಸಕ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ನಮಗಿಲ್ಲ. ಹೀಗಾಗಿ ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ವಹಿಸಿರುವುದನ್ನು ಸ್ವಾಗತಿಸುತ್ತೇವೆ ಜೊತೆಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಸವಣ್ಣ, ಕುವೆಂಪು, ಸಂತಶಿಶುನಾಳ ಶರೀಫ, ಕನಕದಾಸ, ಅಕ್ಕಮಹಾದೇವಿ, ಯೋಗಿ ವೇಮಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್‌ರಂತಹ ಸಂತ ಶ್ರೇಷ್ಠರು, ರಾಜರ್ಷಿಗಳು, ತತ್ವಜ್ಞಾನಿಗಳು ಮತ್ತು ಆದರ್ಶವಾದಿ ಮಹಾನೀಯರು ಹುಟ್ಟಿದ ಭವ್ಯ ಕರ್ನಾಟಕದ ಶ್ರೇಷ್ಠ ಸಂಸ್ಕೃತಿಗೆ ಈ ಘಟನೆ ಮಸಿ ಬಳಿಯುವಂತಹ ಅಪಮಾನಕರ ಘಟನೆಯಾಗಿದೆ ಎಂದು ಟೀಕಿಸಿದರು.

ಸಮಾಜಕ್ಕೆ ಸನ್ಮಾರ್ಗ ತೋರಬೇಕಾದ ಸ್ವಾಮೀಜಿಗಳು ಮತ್ತು ಸಮಾಜವನ್ನು ಮುನ್ನಡೆಸಬೇಕಾದ ರಾಜಕಾರಣಿಗಳೇ ಇಂದು ಅನೈತಿಕ ದಾರಿಯನ್ನು ತುಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಲೇವಡಿ ಮಾಡಿದರು.

ಬಿಎಸ್‌ಪಿ ಮುಖಂಡ ಪರಮೇಶ್ವರ್ ಮಾತನಾಡಿ, ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೋಲೀಸರು ಹಾಕಿರುವ ೪ ಸೆಕ್ಷನ್‌ಗಳು ಜಾಮೀನು ತೆಗೆದುಕೊಳ್ಳುವಂತಹ ಕೇಸುಗಳಾಗಿವೆ. ಹಾಸನದ ಮಹಿಳೆ ನೀಡಿರುವ ಪ್ರಕರಣದಲ್ಲಿ ರಾಜ್ಯ ಸರಕಾರ ಜಾಮೀನು ಸಹಿತ ಪ್ರಕರಣ ದಾಖಲು ಮಾಡುವ ಮೂಲಕ ರೇವಣ್ಣ, ಪ್ರಜ್ವಲ್ ಇಬ್ಬರನ್ನೂ ರಕ್ಷಣೆ ಮಾಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಕರಣ ಗೊತ್ತಿದ್ದರೂ ಮೋದಿ ಪ್ರಜ್ವಲ್ ಪರ ಪ್ರಚಾರ ನಡೆಸಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ಹಣ, ರಾಜಕೀಯ ಬಲವಿದ್ದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಪ್ರಜ್ವಲ್ ರೇವಣ್ಣ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಣಿಪುರ ಮಹಿಳಾ ದೌರ್ಜನ್ಯ, ಕ್ರೀಡಾಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಣ್ಣಿಗೆ ಕಾಣಲಿಲ್ಲವೆ ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಯು.ಬಿ.ಮಂಜಯ್ಯ, ಕುಮಾರ್, ವಸಂತ, ರತ್ನ, ವಿಜಯ್, ಮಂಜುಳಾ, ಪಿ.ಕೆ.ಮಂಜುನಾಥ ಇದ್ದರು.

The election of Hassan Lok Sabha constituency contested by Prajwal Revanna should be cancelled

About Author

Leave a Reply

Your email address will not be published. Required fields are marked *

You may have missed