September 8, 2024

ಮಲೆನಾಡು ಭಾಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ವಿಫಲ

0
ಬೆಳೆಗಾರರ ಹಿತರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಹೊಲದ ಗದ್ದೆ ಗಿರೀಶ್

ಬೆಳೆಗಾರರ ಹಿತರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಹೊಲದ ಗದ್ದೆ ಗಿರೀಶ್

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯನ್ನು ಅವೈಜ್ಞಾನಿಕವಾಗಿ ಅನುಷ್ಠಾನಗೊಳಿಸುತ್ತಿರುವುದರಿಂದ ಮಹತ್ವಾಕಾಂಕ್ಷೆಯ ಯೋಜನೆ ವಿಫಲಗೊಳ್ಳುತ್ತಿರುವುದರ ಜೊತೆಗೆ ಕೆಲವು ಕಂಟ್ರಾಕ್ಟರ್‌ಗಳು ಜೇಬು ತುಂಬಿಸಿಕೊಳ್ಳುವ ದಂಧೆಯಾಗಿ ಪರಿಣಮಿಸಿದೆ ಎಂದು ಬೆಳೆಗಾರರ ಹಿತರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಹೊಲದ ಗದ್ದೆ ಗಿರೀಶ್ ಆರೋಪಿಸಿದ್ದಾರೆ.

ಈ ಬಗ್ಗೆ ಹೇಳಿಕ ನೀಡಿರುವ ಅವರು, ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು ಕೊಡುವ ಈ ಯೋಜನೆಗೆ ನೈಸರ್ಗಿಕ ಜಲಮೂಲಗಳಿಂದ ನೀರು ಪಡೆಯಲು ಅವಕಾಶವಿದೆ. ಮಲೆನಾಡು ಭಾಗದಲ್ಲಿ ಇಂತಹ ಜಲ ಮೂಲಗಳು ಸಾಕಷ್ಟಿವೆ. ಆದರೂ ಕಂಟ್ರಾಕ್ಟರ್‌ಗಳು ಮತ್ತು ಇಂಜಿನೀಯರುಗಳು ಕೊಳವೆ ಬಾವಿಗಳನ್ನು ಕೊರೆದು ನೀರು ಪೂರೈಸಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ಇಡೀ ಯೋಜನೆಯೇ ವಿಫಲವಾಗುತ್ತಿದೆ ಎಂದು ದೂರಿದ್ದಾರೆ.

ಮಲೆನಾಡು ಭಾಗದಲ್ಲಿ ಗುಡ್ಡಗಾಡು, ಬೆಟ್ಟ, ಗುಡ್ಡಗಳು ಹೆಚ್ಚಿದ್ದು ಇಳಿಜಾರು ಪ್ರದೇಶಗಳಲ್ಲಿ ನೀರು ನಿಲ್ಲದೆ ನದಿ, ಹಳ್ಳ ಕೊಳ್ಳಗಳಿಗೆ ಹರಿದು ಹೋಗುವುದರಿಂದ ಅಂತರ್ಜಲ ಸಿಗುವುದಿಲ್ಲ. ಈ ಕಾರಣಕ್ಕೆ ಬೋರ್‌ವೆಲ್‌ಗಳು ಇಲ್ಲಿ ಯಶಸ್ವಿಯಾಗುವುದಿಲ್ಲ. ಇದು ಸಾಮಾನ್ಯ ಜನರಿಗೂ ಗೊತ್ತಿರುವ ವಿಚಾರವಾದರೂ ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್‌ಗಳು ಬೋರ್‌ವೆಲ್ ಕೊರೆಯಲು ಮೊದಲ ಆಧ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಕಮಿಷನ್ ಇನ್ನಿತರೆ ರೂಪದಲ್ಲಿ ಹಣದ ಅವ್ಯವಹಾರಕ್ಕೂ ಕಾರಣವಾಗುತ್ತಿದೆ. ಇತ್ತ ಯೋಜನೆಯ ಲಾಭವೂ ಯಾರಿಗೂ ಸಿಗದಂತಾಗುತ್ತಿದೆ ಎಂದಿದ್ದಾರೆ.

ಈಗಾಗಲೇ ಆವತಿ, ಮಲ್ಲಂದೂರು, ಹೊಲದಗದ್ದೆ ಇನ್ನಿತರೆ ಕಡೆಗಳಲ್ಲಿ ಬೋರ್‌ವೆಲ್ ಕೊರೆಯುವ ಅವೈಜ್ಞಾನಿಕ ಕೆಲಸದಿಂದ ನೀರು ಲಭಿಸದೆ ಯೋಜನೆ ವಿಫಲವಾಗುತ್ತಿದೆ ಎಂದು ದೂರಿದ್ದಾರೆ.

ಕೇವಲ ಬೋರ್‌ವೆಲ್ ಕೊರೆಯಲು ವೆಚ್ಚ ಮಾಡಿದ ಅನುದಾನವಷ್ಟೇ ಅಲ್ಲದೆ ಪೈಪ್‌ಲೈನ್ ಅಳವಡಿಕೆ, ಮನೆ ಮನೆ ಸಂಪರ್ಕದ ನಲ್ಲಿಗಳ ಅಳವಡಿಕೆ ಇನ್ನಿತರೆ ಕಾಮಗಾರಿಗೆ ವೆಚ್ಚ ಮಾಡಿದ ಲಕ್ಷಾಂತರ ರೂ. ಅನುದಾನವೂ ವ್ಯರ್ಥವಾಗುತ್ತಿದೆ. ಇದರಿಂದ ಸರ್ಕಾರಕ್ಕೂ ಧೋಡ್ಡ ಮಟ್ಟದ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಗಮನ ಹರಿಸಿ ಮಲೆನಾಡಿನಲ್ಲಿ ನೈಸರ್ಗಿಕ ಜಲ ಮೂಲಗಳಿರುವ ಕಡೆಗಳಲ್ಲಿ ಮಾತ್ರ ನೀರು ಬಳಸಿಕೊಳ್ಳಲು ಮುಂದಾಗಬೇಕು. ಬೋರ್‌ವೆಲ್ ಕೊರೆಸುವುದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಹಾಗಾದಲ್ಲಿ ಮಾತ್ರ ಯೋಜನೆ ಯಶಸ್ಸಾಗಲು ಸಾದ್ಯ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನ ಹರಿಸಿ ಯೋಜನೆಯ ಅನುಷ್ಠಾನಾಧಿಕಾರಿಗಳು ಹಾಗೂ ಕಂಟ್ರಾಕ್ಟರುಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಗುಡ್ಡದಿಂದ ಹರಿದು ಬರುವ ಮತ್ತು ಇತರೆ ನದಿ, ತೊರೆ, ಹಳ್ಳ, ಕೊಳ್ಳಗಳಲ್ಲಿ ಲಭ್ಯವಿರುವ ನೈಸರ್ಗಿಕ ಜಲ ಮೂಲಗಳಿಂದ ನೀರು ಪೂರೈಸಿ ಯೋಜನೆಯ ಲಾಭ ಸಾಮಾನ್ಯ ಜನರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

The Jal Jeevan Mission project failed in the hill country

About Author

Leave a Reply

Your email address will not be published. Required fields are marked *

You may have missed