September 19, 2024

ಡಾ.ಸಿ.ಎಸ್ ದ್ವಾರಕಾನಾಥ್‌ರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಆಗ್ರಹ

0
ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ದಿವಾಕರ ಹೆಚ್.ಎಲ್ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ದಿವಾಕರ ಹೆಚ್.ಎಲ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕರ್ನಾಟಕದ ಆದಿವಾಸಿ ಮತ್ತು ಅಲೆಮಾರಿಗಳೆಲ್ಲಾ ಸೇರಿ ಸುಮಾರು ೧೨೦ ಸಮುದಾಯಗಳು ಸಂಘಟಿತರಾಗಿ ಡಾ. ಸಿ.ಎಸ್ ದ್ವಾರಕಾನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ದಿವಾಕರ ಹೆಚ್.ಎಲ್ ಒತ್ತಾಯಿಸಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸೃಷ್ಟಿ ಆದಾಗಿನಿಂದಲೂ ಅಲೆಮಾರಿ/ಆದಿವಾಸಿ ಸಮುದಾಯದ ಪ್ರತಿನಿಧಿಗಳಿಗೆ ಎರಡೂ ಸದನಗಳಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಕಾರಣಕ್ಕೆ ನಮ್ಮ ನೋವು, ಅಸಹಾಯಕತೆ ಮತ್ತು ಸಮಸ್ಯೆಗಳ ಕುರಿತಂತೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಈವರೆಗೂ ಯಾವುದೇ ಚರ್ಚೆಯಾಗಿಲ್ಲ. ಸಮಸ್ಯೆಗಳ ಕುರಿತು ಯಾರಿಗೂ ಅರಿವಿಲ್ಲ, ಆದ್ದರಿಂದ ನಾವು ಇಂದಿಗೂ ನಿರ್ಗತಿಕರಾಗಿಯೇ ಉಳಿದಿದ್ದೇವೆ ಎಂದು ತಿಳಿಸಿದರು.

ಶಾಸನವನ್ನು ರೂಪಿಸುವ ಜಾಗಕ್ಕೆ ನೀವು ಹೋಗದ ಹೊರತು ನಿಮ್ಮ ಸಮಸ್ಯೆಗಳು ಪರಿಹಾರವಾಗಲಾರವು ಎಂದು ಡಾ. ಅಂಬೇಡ್ಕರ್ ರವರು ಹೇಳುತ್ತಾರೆ. ಆದರೆ ಹಣಬಲ, ಜಾತಿಬಲ, ಸಂಘಟನೆಯ ಬಲ ಯಾವುದು ಇಲ್ಲದ ನಾವು ವಿಧಾನಸಭೆ, ವಿಧಾನ ಪರಿಷತ್ ಗಳಿಗೆ ಹೇಗೆ ಹೋಗಲು ಸಾಧ್ಯ? ಆದ್ದರಿಂದ ಕನಿಷ್ಟ ವಿಧಾನಪರಿಷತ್ತಿಗೆ ಸಮುದಾಯದ ಡಾ. ಸಿ.ಎಸ್ ದ್ವಾರಕಾನಾಥ್‌ರವರನ್ನು ಪ್ರತಿನಿಧಿಯಾಗಿ ನಾಮನಿರ್ದೇಶನ ಮಾಡಬೇಕೆಂದು ಆಗ್ರಹಿಸಿದರು.

ದ್ವಾರಕಾನಾಥ್ ಅವರು ಕಳೆದ ಮೂರುನಾಲ್ಕು ದಶಕಗಳಿಂದ ಅಲೆಮಾರಿ ಮತ್ತು ಆದಿವಾಸಿ ಸಮಸ್ಯೆಗಳ ಕುರಿತಂತೆ ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ನಮ್ಮ ಎಲ್ಲಾ ಸಮುದಾಯಗಳ ಬಗ್ಗೆ ಅವರಿಗೆ ಅಪಾರ ಮಾಹಿತಿ ಇದೆ. ಸುಮಾರು ೪೮ ಸಮುದಾಯಗಳ ಸಂಶೋಧನಾ ಕೃತಿಗಳಿಗೆ ಮಾರ್ಗದರ್ಶಕರಾಗಿ ಸರ್ಕಾರದ ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆಗೆ ಕೆಲಸ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಹಿಂದುಳಿದ ವರ್ಗಗಳ ಪ್ರವರ್ಗ-೧ರಲ್ಲಿರುವ ೪೬ ಅಲೆಮಾರಿ ಸಮುದಾಯಗಳಿಗೆ ಅಸ್ಮಿತೆ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೊಟ್ಟಮೊದಲ ಸಲ ಅಲೆಮಾರಿ ಪಟ್ಟಿ ಪ್ರಕಟಿಸಲು ಕಾರಣರಾಗಿದ್ದಾರೆ. “ಅಲೆಮಾರಿ ಕೋಶ”, “ಅಲೆಮಾರಿ ಅಭಿವೃದ್ಧಿ ನಿಗಮ” ಮತ್ತು ಈಗ ಬಜೆಟ್‌ನಲ್ಲಿ ಪ್ರಕಟವಾದ “ಅಲೆಮಾರಿ ಆಯೋಗ” ರಚಿಸಲು ಕೂಡ ದ್ವಾರಕಾನಾಥ್ ಅವರೇ ಮೂಲ ಕಾರಣಕರ್ತರಾಗಿದ್ದಾರೆ. ನಾಡಿನಾದ್ಯಂತ ಮೂಲೆ ಮೂಲೆಗಳಿಂದ ದಿಕ್ಕಿಲ್ಲದೆ ಬರುವ ಅಲೆಮಾರಿಗಳ ಜಾತಿ ಸರ್ಟಿಫಿಕೇಟ್, ಸಾಲಸೋಲ, ನಿವೇಶನ, ಭೂಮಿ, ಅನುದಾನ, ಸವಲತ್ತು ಕೊಡಿಸಲು ತಮ್ಮ ಲಾಯರ್ ಆಫೀಸನ್ನೇ ಮೀಸಲಾಗಿ ಇಟ್ಟಿದ್ದಾರೆ ಎಂದರು.

ದ್ವಾರಕಾನಾಥ್ ಅವರು ಮಾತ್ರ ಎಲ್ಲಾ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಕುರಿತ ಪ್ರೀತಿ, ಕಾಳಜಿ, ಅರಿವು ಮತ್ತು ಜ್ಞಾನ ಉಳ್ಳವರು, ಅವರು ನಮ್ಮ ಎಲ್ಲಾ ೧೨೦ ಸಮುದಾಯಗಳನ್ನು ವಿಧಾನಪರಿಷತ್‌ನಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರು. ಈ ಕಾರಣಕ್ಕೆ ದ್ವಾರಕಾನಾಥ್ ಅವರನ್ನು ನಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಅಖಿಲ ಭಾರತ ಕಾಂಗ್ರೆಸ್ ಅಧಿನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ನೇರ ಮತ್ತು ನಿಷ್ಠುರತೆಗೆ ಹೆಸರಾದ ಡಿ.ಕೆ ಶಿವಕುಮಾರ್ ಅವರಿಗೆ ಅತ್ಯಂತ ವಿನಮ್ರವಾಗಿ ಮನವಿ ಮಾಡುತ್ತೇವೆ ಎಂದರು.

Demand to make Dr. CS Dwarkanath a member of Legislative Council

About Author

Leave a Reply

Your email address will not be published. Required fields are marked *

You may have missed