September 16, 2024

ಅಜ್ಜಂಪುರ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ

0
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಅಜ್ಜಂಪುರ ಕೊಬ್ಬರಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ರೈತರು ಬೆಳೆದು ತಂದ ಕೊಬ್ಬರಿಯನ್ನು ಸರ್ಕಾರ ನಿಗಧಿಪಡಿಸಿರುವ ಬೆಲೆಯಲ್ಲಿ ಎಪಿಎಂಸಿ ನಾಫೆಡ್ ಅಧಿಕಾರಿ ಕೊಂಡುಕೊಳ್ಳದೆ ದಲ್ಲಾಳಿಗಳು ನೀಡಿದ ಲಂಚವನ್ನು ಪಡೆದು ಅವರುಗಳು ತಂದಿರುವ ಕೊಬ್ಬರಿಯನ್ನು ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ರೈತರು ಬೆಳೆದ ಕೊಬ್ಬರಿಯನ್ನು ನಾಫೆಡ್ ಮುಖಾಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಇದಕ್ಕಾಗಿಯೇ ಮಾರುಕಟ್ಟೆ ಸಮಿತಿ ಗೊಡೋನ್ ವ್ಯವಸ್ಥೆ ಮಾಡಿದೆ. ಆದರೆ ನಾಫೆಡ್‌ನಿಂದ ನಿಯೋಜನೆಗೊಂಡಿರುವ ಅಧಿಕಾರಿ ರೈತರಿಗೆ ಕಂಟಕವಾಗಿದ್ದಾರೆ ಎಂದು ದೂರಿದರು.

ಪ್ರತಿ ಕ್ವಿಂಟಾಲ್ ಕೊಬ್ಬರಿಯನ್ನು ಕೊಳ್ಳಲು ೨೦೦ ರೂ ನಂತೆ ೧೫ ಕ್ವಿಂಟಾಲ್‌ಗೆ ೩೦೦೦ ರೂ ಗಳನ್ನು ಕೊಡಬೇಕು. ಇಲ್ಲದಿದ್ದರೆ ಗುಣಮಟ್ಟದ ಕಾರಣ ಹೇಳಿ ತಿರಸ್ಕರಿಸಲಾಗುತ್ತಿದೆ. ಪ್ರತಿದಿನ ೩೫ ರಿಂದ ೪೦ ಗಾಡಿಗಳು ಸರದಿಯಲ್ಲಿ ಇದ್ದರು ಕೇವಲ ೮ ರಿಂದ ೧೦ ಗಾಡಿಯಲ್ಲಿ ಖರೀದಿ ಮಾಡಲಾಗುತ್ತದೆ ಎಂದರು.

ಈಗಾಗಲೇ ೭-೮ ದಿನಗಳಿಂದ ರೈತರು ಸರದಿಯಲ್ಲಿ ಕಾಯುತ್ತಿದ್ದಾರೆ. ಇಲ್ಲಿ ರೈತರಿಗೆ ಉಳಿದುಕೊಳ್ಳಲಿಕ್ಕಾಗಲಿ, ಗಾಡಿಗಳಿಗೆ ರಕ್ಷಣೆಗಾಗಿ ವ್ಯವಸ್ಥೆ ಇಲ್ಲ. ಬೇರೆ ಎಪಿಎಂಸಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಅಂತಹ ಯಾವುದೇ ಸವಲತ್ತು ಅಜ್ಜಂಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಲ್ಲ ಎಂದು ಹೇಳಿದರು.

ಇಲ್ಲಿ ೨ ಗೊಡೋನ್ ಮಾಡಿಕೊಳ್ಳಲಾಗಿದ್ದು ರೈತರ ಉತ್ಪನ್ನಗಳನ್ನು ಒಂದರಲ್ಲಿ ಖರೀದಿ ಮಾಡಲಾಗುತ್ತದೆ ಮತ್ತೊಂದು ಗೊಡೋನ್‌ನಲ್ಲಿ ದಲ್ಲಾಳಿಗಳು ಹಾಗೂ ಹಣ ಜಾಸ್ತಿ ಕೊಟ್ಟವರ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಕೊಳ್ಳಲಾಗುತ್ತದೆ ಎಂದು ಆರೋಪಿಸಿದರು.

ಪ್ರಶ್ನೆ ಮಾಡಿದರೆ ವಹಿವಾಟನ್ನು ನಿಲ್ಲಿಸುವ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಅಧಿಕಾರಿ ಯಾವಾಗಲೂ ಅಮಲಿನಲ್ಲಿ ತೇಲಾಡುತ್ತಿದ್ದು ಕಚೇರಿಯಲ್ಲಿ ಇರುವುದೇ ಕಡಿಮೆಯಾಗಿದ್ದು ಈ ಅಧಿಕಾರಿಯನ್ನು ಬೇರೆಡೆಗೆ ವರ್ಗಾಹಿಸಲು ಜಿಲ್ಲಾಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾಪ್ರಧಾನ ಕಾರ್ಯದರ್ಶಿ ಡಿ.ಮಹೇಶ್, ಮುಖಂಡರುಗಳಾದ ಆನಂದ್, ಮಂಜುನಾಥ್, ಬಸವರಾಜ್, ಶಿವಣ್ಣ, ವಿಜಯಕುಮಾರ್ ಹಾಗೂ ಕೊಬ್ಬರಿ ಬೆಳೆಗಾರ ಮಲ್ಲಪ್ಪ ಇದ್ದರು.

Misconduct at Ajjampur coconut buying centre

About Author

Leave a Reply

Your email address will not be published. Required fields are marked *