September 16, 2024

ತಾಂತ್ರಿಕ ಶಿಕ್ಷಣ ಪಡೆದವರಿಗೆ ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚು

0
ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಕಾಲೇಜಿನ ಪದವೀಧರರ ದಿನಾಚರಣೆ

ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಕಾಲೇಜಿನ ಪದವೀಧರರ ದಿನಾಚರಣೆ

ಚಿಕ್ಕಮಗಳೂರು:  ಕೋವಿಡ್ ನಂತರದ ದಿನಗಳಲ್ಲಿ ಲ್ಯಾಬ್, ಡಯಾಲಿಸಿಸ್, ಫಿಸಿಯೋಥೆರಪಿ ಮತ್ತಿತರ ತಾಂತ್ರಿಕ ಶಿಕ್ಷಣ ಪಡೆದವರಿಗೆ ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶದ ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ಕರ್ನಾಟಕ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಪ್ರಾಧಿಕಾರದ ವಿಶೇಷ ಅಧಿಕಾರಿ ಡಾ.ವಿಜಯಕುಮಾರ್ ಹೇಳಿದರು.

ಶನಿವಾರ ನಗರದ ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಕಾಲೇಜಿನ ಪದವೀಧರರ ದಿನಾಚರಣೆ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯೆಯಿಂದ ತಮಗೆ ಇವತ್ತು ಈ ಸ್ಥಾನಮಾನ, ಅವಕಾಶಗಳು ಲಭ್ಯವಾಗಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧನೆ ಮಾಡಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಡೀನ್ ಎಂ.ಆರ್.ಹರೀಶ್ ಮಾತನಾಡಿ, ಒಂದು ಸಿನಿಮಾದ ಯಶಸ್ವಿಗೆ ಇಡೀ ತಂಡ ಪರಿಶ್ರಮ ಕಾರಣವಾಗುವಂತೆ ಒಂದು ಆಸ್ಪತ್ರೆ ಅಥವಾ ಆರೋಗ್ಯ ಸಂಸ್ಥೆ ಸಾಧನೆ ಮಾಡಲು ಹಾಗೂ ಮೇಲ್ದರ್ಜೆಗೇರಲು ವೈದ್ಯರು ಮಾತ್ರವಲ್ಲ, ಇಡೀ ತಂಡದ ಪರಿಶ್ರಮ ಕಾರಣವಾಗುತ್ತದೆ. ಶಿಕ್ಷಣದ ನಂತರ ಸೇವೆಗೆ ಬಂದ ಬಳಿಕ ಬಡವ, ಶ್ರೀಮಂತ ಎಂಬ ತಾರತಮ್ಯವಿಲ್ಲದೆ ರೋಗಿಗಳನ್ನು ನಿಮ್ಮ ಕುಟುಂಬದ ಸದಸ್ಯರಂತೆ ಆರೈಕೆ ಮಾಡುವುದು ಅಗತ್ಯ ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ದಿಸೆಯಲ್ಲಿ ಬೋಧಕರು ಹೇಳಿಕೊಟ್ಟಂತೆ ಕಲಿಕೆಯಲ್ಲಿ ಏಕಾಗ್ರತೆ ವಹಿಸಿ ಅಭ್ಯಾಸ ಮಾಡುವ ಮೂಲಕ ಗುರಿ ತಲುಪುವುದಲ್ಲದೆ, ಸಮಾಜಕ್ಕೆ, ಆಸ್ಪತ್ರೆಗೆ ಹಾಗೂ ತಾವು ವ್ಯಾಸಂಗ ಮಾಡಿದ ಕಾಲೇಜಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್ ಕುಮಾರ್ ಮಾತನಾಡಿ, ಕರ್ತವ್ಯದಲ್ಲಿ ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರಯೋಗಾಲಯದ ವರದಿ ಆಧರಿಸಿಯೇ ವೈದ್ಯರು ಚಿಕಿತ್ಸೆ ನೀಡುವುದರಿಂದ ತಾಂತ್ರಿಕ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದು, ಚಿಕ್ಕಮಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಪ್ರಯೋಗಾಲಯಗಳು ಆರಂಭವಾಗಿವೆ. ಇದರಿಂದಾಗಿ ಉದ್ಯೋಗ ಸೃಷ್ಟಿಯ ಜೊತೆಗೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿವೆ ಎಂದು ತಿಳಿಸಿದರು.

ಸ್ವಾಗತಿಸಿದ ಕಾಲೇಜಿನ ಕಾರ್ಯದರ್ಶಿ ನಳಿನಾ ಡೀಸಾ ಮಾತನಾಡಿ, ಹೊರ ಜಿಲ್ಲೆಗಳಿಂದ ಸಹ ವಿದ್ಯಾರ್ಥಿಗಳು ಪದವಿ ಪಡೆಯಲು ಈ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಹೀಗಾಗಿ ಬೆರಳೆಣಿಕೆಯಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ೪೦೦ಕ್ಕೇರಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು, ನಮ್ಮ ಕಾಲೇಜಿನ ಐವರು ವಿದ್ಯಾರ್ಥಿಗಳು ರ್‍ಯಾಂಕ್ ಪಡೆದು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದರು.

ಫೋರೆನ್ಸಿಕ್ ವಿಭಾಗ ಮುಖ್ಯಸ್ಥ ಹಾಗೂ ನೋಡಲ್ ಅಧಿಕಾರಿ ಡಾ.ಆರ್.ಲೋಹಿತ್‌ಕುಮಾರ್, ಸಹ್ಯಾದ್ರಿ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಸತೀಶ್, ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಸೈನ್ಸಸ್‌ನ ಚೇತನ್ ಡೀಸಾ, ಸಹ್ಯಾದ್ರಿ ವಾಣಿಜ್ಯ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಇ.ಜಿ.ಉಲ್ಲಾಸ್, ಟ್ರಸ್ಟಿಗಳಾದ ಉಷಾ ಸತೀಶ್, ಡಾ.ಗಿಲಿಯನ್ ರೊಗ ವೇದಿಕೆಯಲ್ಲಿದ್ದರು. ಫಾತಿಯಾ ನಿರೂಪಣೆ, ಅಪೇಕ್ಷಾ ವಂದನಾರ್ಪಣೆ ನೆರವೇರಿಸಿದರು.

Technical educators are more likely to be employed in the country and abroad

About Author

Leave a Reply

Your email address will not be published. Required fields are marked *