September 16, 2024

ನಗರದ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಜಿಲ್ಲಾ ಸಲಹಾ ಸಮಿತಿ ಭೇಟಿ

0
ನಗರದ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಜಿಲ್ಲಾ ಸಲಹಾ ಸಮಿತಿ ಭೇಟಿ

ನಗರದ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಜಿಲ್ಲಾ ಸಲಹಾ ಸಮಿತಿ ಭೇಟಿ

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ೨ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಇಂದು ಭೇಟಿನೀಡಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಸಂತೋಷ್ ನೇತಾ ಹೇಳಿದರು.

ಅವರು ಇಂದು ಸಲಹಾ ಸಮಿತಿಯ ಪದಾಧಿಕಾರಿಗಳೊಂದಿಗೆ ನಗರದ ಶ್ರೀ ಲಕ್ಷ್ಮಿ ಮೆಡಿಕೇರ್ ಹಾಗೂ ಶ್ರೀ ಶ್ರೀನಿವಾಸ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳು ದಾಖಲಾತಿ, ಸ್ಕ್ಯಾನಿಂಗ್ ಹೇಗೆ ನಡೆಯುತ್ತಿದೆ, ಡಾಟಾ ಎಂಟ್ರಿ, ಹೆಣ್ಣು ಭ್ರೂಣ ಲಿಂಗಪತ್ತೆ ಮಾಡುತ್ತಿರುವ ಬಗ್ಗೆಯೂ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದ್ದು, ಈ ಸಂಬಂಧ ಸಲಹಾ ಸಮಿತಿ ಪದಾಧಿಕಾರಿಗಳು ಸಭೆ ನಡೆಸಿ ರಾಜ್ಯ ಸಲಹಾ ಸಮಿತಿಗೆ ವರದಿ ಸಲ್ಲಿಸುತ್ತೇವೆ ಎಂದರು.

ಕಾನೂನು ರೀತಿ ಇರಬೇಕಾದ ಎಲ್ಲಾ ವಿವರಗಳನ್ನು ಪರಿಶೀಲಿಸಿದ್ದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲು ಸೂಚಿಸಲಾಗಿದೆ. ಸಾರ್ವಜನಿಕರಲ್ಲಿ ಹೆಣ್ಣು ಭ್ರೂಣ ಲಿಂಗಪತ್ತೆ ಬಗ್ಗೆ ಈಗಾಗಲೇ ಸಲಹಾ ಸಮಿತಿ ಬಿಡುಗಡೆ ಮಾಡಿರುವ ದೂರವಾಣಿ ಸಂಖ್ಯೆ ೦೮೨೬೨ ೨೯೫೭೫೦ ಇರುವ ನಾಮಫಲಕವನ್ನು ಅಳವಡಿಸುವಂತೆ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಹೇಳಿದರು.

ದಿನನಿತ್ಯ ಸ್ಕ್ಯಾನಿಂಗ್ ಮಾಡುವಾಗ ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿ ಅನುಸರಿಸುವುದು ಕಷ್ಟವಾಗುತ್ತಿದೆ ಎಂಬ ಬಗ್ಗೆ ಸ್ಕ್ಯಾನಿಂಗ್ ಸೆಂಟರ್ ವೈದ್ಯರಿಂದ ಅಭಿಪ್ರಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಬದಲಾವಣೆ ಮಾಡಲು ಅವಕಾಶವಿದೆಯೇ ಎಂಬ ಬಗ್ಗೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

ರೋಗಿಗಳಿಗೆ ತೊಂದರೆಯಾಗದಂತೆ ಕಾನೂನು ಸಹಿತ ಪಾಲನೆಯಾಗಬೇಕು. ಡಾಕ್ಟರ್‌ಗಳಿಗೂ ದಿನನಿತ್ಯದ ಕೆಲಸಕಾರ್ಯಗಳಿಗೆ ತೊಂದರೆ ಕಡಿಮೆಯಾಗಬೇಕೆಂಬ ದೃಷ್ಟಿಯಿಂದ ಏನೇನು ಸಲಹೆಗಳು ಬೇಕು ಅದನ್ನು ತಿಳಿದುಕೊಂಡು ರಾಜ್ಯ ಸಲಹಾ ಸಮಿತಿಗೆ ವರದಿ ಸಲ್ಲಿಸುತ್ತೇವೆ ಎಂದರು.

ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಕುಟುಂಬಕಲ್ಯಾಣ ಅಧಿಕಾರಿ ಡಾ. ಎಂ. ಶಶಿಕಲಾ ಮಾತನಾಡಿ, ಸರ್ಕಾರದ ನಿಯಮಗಳನ್ನು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸರಿಯಾಗಿ ಪಾಲನೆ ಮಾಡುತ್ತಿದ್ದಾರೆಂಬುದರ ಕುರಿತು ಇಂದು ಲಕ್ಷ್ಮಿ ಮೆಡಿಕೇರ್ ಮತ್ತು ಶ್ರೀನಿವಾಸ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿನೀಡಿ ಪರಿಶೀಲಿಸಿತು. ಸಲಹಾ ಸಮಿತಿ ಮತ್ತು ಮೇಲ್ವಿಚಾರಣ ಸಮಿತಿ ಒಟ್ಟುಗೂಡಿ ಕಾರ್ಯಾಚರಣೆ ಕೈಗೊಂಡಿದ್ದೇವೆಂದು ಹೇಳಿದರು.

ಭೇಟಿನೀಡಿದ ಸಂದರ್ಭದಲ್ಲಿ ಸಣ್ಣಪುಟ್ಟ ನ್ಯೂನತೆಗಳು ಕಂಡುಬಂದಿದ್ದು, ಸರ್ಕಾರದ ನಿಯಮದ ಪ್ರಕಾರ ಫಲಕಗಳನ್ನು ಅಳವಡಿಸಬೇಕು. ಅದರಂತೆ ಫಲಕಗಳನ್ನು ಹಾಕಿರಲಿಲ್ಲ. ಬಿ ಫಾರಂ ಅಪ್ಡೇಟ್ ಮಾಡಿಸಿರಲಿಲ್ಲ. ಈ ಎಲ್ಲದರ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದರು.

ಹೆಣ್ಣು ಭ್ರೂಣ ಲಿಂಗಪತ್ತೆ ಹಾಗೂ ಹತ್ಯೆ ಮಾಡಿರುವ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ಆದರೂ ಸಮಿತಿಯ ಪದಾಧಿಕಾರಿಗಳು ದೂರವಾಣಿ ಸಂಖ್ಯೆಯ ಪೋಸ್ಟರ್‌ನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದ್ದು, ವೈದ್ಯರು ಮತ್ತು ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ ದೂರು ನೀಡಿದರೆ ಅಂತಹ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಇದೆ ತಿಂಗಳಲ್ಲಿ ೩ ಕ್ಲಿನಿಕ್‌ಗಳಿಗೆ ಭೇಟಿನೀಡಿ ಪರಿಶೀಲಿಸಿದ್ದು, ಹೆಣ್ಣು ಭ್ರೂಣ ಹತ್ಯೆ ಎಂಬುದು ವ್ಯಾಪಕವಾಗಿ ನಡೆಯುತ್ತಿದೆ ಆದರೆ ಬೆಳಕಿಗೆ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಲಹಾ ಸಮಿತಿಯ ಮೂಲಕ ಹೆಣ್ಣುಮಕ್ಕಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವುದರಿಂದ ಇಂತಹ ಪ್ರಕರಣಗಳು ಇಳಿಮುಖಗೊಂಡಿವೆ. ಜೊತೆಗೆ ಇದನ್ನು ತಡೆಗಟ್ಟುವಲ್ಲಿ ವೈದ್ಯರು ಮತ್ತು ನಾಗರಿಕರು ಸಲಹಾ ಸಮಿತಿಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಲಹಾ ಸಮಿತಿ ಉಪಾಧ್ಯಕ್ಷರಾದ ರಘುನಂದನ್ ಎಂ.ಎಲ್, ಸದಸ್ಯರಾಗಿ ವಿನಯ್, ಕಾವ್ಯಸಂತೋಷ್, ಪ್ರವೀಣ್ ಬಿ.ಎಲ್, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣ ಸಮಿತಿಯ ಸದಸ್ಯರುಗಳಾದ ಡಾ. ಪಾಂಡುರಂಗಯ್ಯ. ಡಾ. ವಿನಯ್, ಡಾ. ಸಚಿನ್, ರೋಟರಿ ಸಂಸ್ಥೆಯ ರಘುನಂದನ್, ಸುದೀರ್, ಹರ್ಷ ಉಪಸ್ಥಿತರಿದ್ದರು.

District Advisory Committee visits city scanning centers

 

About Author

Leave a Reply

Your email address will not be published. Required fields are marked *