September 19, 2024

ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧ

0
ಸ್ವಚ್ಛ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಗಿಡ ನೆಡುವ ಕಾರ್ಯಕ್ರಮ

ಸ್ವಚ್ಛ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಗಿಡ ನೆಡುವ ಕಾರ್ಯಕ್ರಮ

ಚಿಕ್ಕಮಗಳೂರು – ನಮ್ಮದು ಐದು ನದಿಗಳು ಹುಟ್ಟುವ ಜಿಲ್ಲೆಯಾಗಿದೆ. ಇಲ್ಲಿ ಪರಿಸರ ಉಳಿಸದೇ ಇದ್ದಲ್ಲಿ ನದಿ ಮೂಲಗಳಿಗೂ ತೊಂದರೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಪರಿಸರ ಕಾಳಜಿಯನ್ನು ಹೊಂದಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರ ಬೈಪಾಸ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಜಿಲ್ಲೆ ಪ್ರಪಂಚದಲ್ಲೇ ಭೌಗೋಳಿಕವಾಗಿ ವಿಶಿಷ್ಠವಾದ ಜಿಲ್ಲೆ. ಎರಡನೇ ಸ್ವಿಡ್ಜರ್‌ಲೆಂಡ್ ಎಂದು ಕರೆಯಲಾಗುತ್ತಿದೆ. ಆದರೆ ಇತ್ತೀಚೆಗೆ ಪ್ರವಾಸಿಗರು ಹೆಚ್ಚಾಗಿ ಬಂದು ಪರಿಸರ ಹಾಳಾಗುತ್ತಿದೆ ಎನ್ನುವ ದೂರುಗಳಿವೆ. ಈ ಕಾರಣಕ್ಕೆ ಈಗಾಗಲೇ ಜಿಲ್ಲಾಡಳಿತ, ಹಲವಾರು ಸಂಘ ಸಂಸ್ಥೆಗಳೊಂದಿಗೆ ಚರ್ಚೆ ಮಾಡಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧ ಮಾಡಿದ್ದೆವೆ ಎಂದರು.

ಎಲ್ಲವನ್ನೂ ಸಂಘ ಸಂಸ್ಥೆಗಳು, ಸರ್ಕಾರವೇ ನಡೆಸಲಿ ಎಂದುಕೊಳ್ಳುವುದು ಸರಿಯಲ್ಲ. ಸರ್ಕಾರ, ಸ್ಥಳೀಯ ಸಂಸ್ಥೆಗಳು ಪರಿಸರ ಉಳಿಸುವ ನಿಟ್ಟಿನಲ್ಲಿ ಹೊರಡಿಸುವ ಆದೇಶಗಳನ್ನು ಸಾರ್ವಜನಿಕರು ಕಡ್ಡಯವಾಗಿ ಪಾಲಿಸಬೇಕು ಎಂದು ಕರೆ ನೀಡಿದರು.

ಹೊಸದಾಗಿ ಮನೆ ನಿರ್ಮಿಸಿಕೊಳ್ಳುವವರು ಕಡ್ಡಾಯವಾಗಿ ಮನೆ ಮುಂದೆ ಒಂದು ಸಸಿ ನಡಬೇಕು. ಸೋಲಾರ್ ಅಳವಡಿಸಿಕೊಳ್ಳಬೇಕು. ಮಳೆ ನೀರು ಕೊಯ್ಲು ಅಳವಡಿಸಬೇಕು ಎನ್ನುವ ನಿರ್ಣಯವನ್ನು ತೆಗೆದುಕೊಂಡಿದ್ದರೂ ಜನರೂ ಪಾಲಿಸುತ್ತಿಲ್ಲ. ಅಧಿಕಾರಿಗಳು ಸಹ ಗಮನ ಹರಿಸುತ್ತಿಲ್ಲ. ಮುಂದೆ ಯಾರೇ ಮನೆ ನಿರ್ಮಿಸಿದರೂ ಈ ಮೂರೂ ನಿರ್ಣಯಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು.

ಮಳೆ ನೀರನ್ನು ಹರಿದು ಹೋಗಲು ಬಿಡುವುದು ಸುಲಭ ಆದರೆ ಅದನ್ನು ಶೇಖರಣೆ ಮಾಡಿಕೊಂಡರೆ ಬೋರ್‌ವೆಲ್‌ಗಳು ಮರುಪೂರಣ ಆಗುತ್ತದೆ. ಬೋರ್‌ವೆಲ್ ಕೊರೆಸಲು ತೋರಿಸುವ ಆಸಕ್ತಿ ಮಳೆ ನೀರು ಕೊಯ್ಲು ಅಳವಡಿಸಲು ತೋರುವುದಿಲ್ಲ. ನೀರು ಸಹ ಇಂದು ಆಸ್ತಿ ಇದ್ದಂತಾಗಿದೆ. ಬೇಕಾ ಬಿಟ್ಟಿ ವ್ಯಯ ಆಗಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು.

ಪರಿಸರ ಉಳಿಸಲು ಪ್ರಪಂಚಾದ್ಯಂತ ಆಂಧೋಲನ ನಡೆಯುತ್ತಿದೆ. ಪರಿಸರ ಉಳಿದರೆ ಮಾತ್ರ ನಮ್ಮ ಮುಂದಿನ ಬದುಕು ಹಸನಾಗುತ್ತದೆ. ಉತ್ತಮ ಮಳೆ, ಬೆಳೆ ಸಾಧ್ಯ. ಎಲ್ಲಾ ಮನುಷ್ಯರಿಗೆ ಆಹಾರ ಭದ್ರತೆ ಸಾಧ್ಯವಾಗುತ್ತದೆ ಎಂದರು.

ಪರಿಸರದ ಬಗ್ಗೆ ಕಾಳಜಿ ಎಲ್ಲರಲ್ಲೂ ಇರಬೇಕು. ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳೇನು ಎನ್ನುವುದನ್ನು ನೋಡುತ್ತಿದ್ದೇವೆ. ದೇಶದಲ್ಲಿ ಶೇ.೭೦ ರಷ್ಟು ಕುಟುಂಬಗಳು ಕೃಷಿಯನ್ನು ಅವಲಂಬಿಸಿವೆ. ವೈದ್ಯರು, ಇಂಜಿನೀರುಗಳು ಏನೇ ಆಗಿದ್ದರೂ ಅವರ ಕುಟುಂಬದ ಮೂಲ ಕೃಷಿಯೇ ಆಗಿರುತ್ತದೆ ಎಂದರು.

ಸ್ವಚ್ಛ ಟ್ರಸ್ಟ್‌ನ ಅಧ್ಯಕ್ಷೆ ಡಾ.ಶುಭ ವಿಜಯ್ ಮಾತನಾಡಿ, ಇಡೀ ನಗರವನ್ನು ಹಸಿರೀಕರಣ ಮಾಡಬೇಕು ಎನ್ನುವುದು ಟ್ರಸ್ಟ್‌ನ ಉದ್ದೇಶವಾಗಿದೆ. ಬೈಪಾಸ್‌ನ ಒಂದೂವರೆ ಕಿ.ಮೀ.ನಷ್ಟು ಉದ್ದದ ರಸ್ತೆಯಲ್ಲಿ ಸುಮಾರು ೩೦೦ ರಿಂದ ೪೦೦ ಗಿಡಗಳನ್ನು ನೆಡಬೇಕು ಎಂದು ತೀರ್ಮಾನಿಸಿದ್ದೇವೆ. ಗಿಡಗಳ ನಿರ್ವಹಣೆಗೆ ಅಕ್ಕ ಪಕ್ಕದ ಅಂಗಡಿ ಮುಂಗಟ್ಟುಗಳ ವರ್ತಕರ ಸಹಕಾರ ಕೋರಿದ್ದೇವೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಗಾಗ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಗೆ ಮನವಿ ಮಾಡುತ್ತೇವೆ ಎಂದರು.

ಸ್ವಚ್ಛ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಗೀತಾ ವೆಂಕಟೇಶ್, ಟ್ರಸ್ಟೀಗಳಾದ ಶುಭಾ ರಾಮೇಗೌಡ, ಪ್ರಣೂಪ ನಾಗರಾಜ್, ಉಮಾ ನಾಗೇಶ್, ಲಕ್ಷ್ಮೀದೇವಮ್ಮ, ಅನುಪಮಾಮನ್ಸೂರ್, ವಸಂತ ರಾಮಚಂದ್ರ, ಕೃಷ್ಣವೇಣಿ, ಸೌಜನ್ಯ, ಅಶ್ವಿನ್, ವಸಂತ ಮಂಜುನಾಥ್ ಇತರರು ಇದ್ದರು.

Mandatory ban on the use of plastic in the Western Ghat region

About Author

Leave a Reply

Your email address will not be published. Required fields are marked *

You may have missed