September 19, 2024

ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

0
ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಚಿಕ್ಕಮಗಳೂರು:  ಮುಂಗಾರು ಮಳೆ ಆರಂಭವಾಗಿರುವುದರಿಂದ ಸಾಮಾನ್ಯವಾಗಿ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮೀನಾನಾಗರಾಜ್ ಸಿ.ಎನ್ ತಿಳಿಸಿದರು.

ಅವರು ಇಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಸಹಿತ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜೂನ್ ಮಾಹೆ ಆರಂಭದಿಂದ ಈವರೆಗೆ ೧೫೬ ಜ್ವರದ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ೪೯ ಮಾತ್ರ ಡೆಂಗ್ಯೂ ಪ್ರಕರಣಗಳಾಗಿವೆ. ಉಳಿದ ಪ್ರಕರಣಗಳು ಮಳೆಗಾಲದಲ್ಲಿ ಬರುವ ಸಾಮಾನ್ಯ ಜ್ವರದ ಕೇಸುಗಳಾಗಿವೆ ಎಂದರು.

ಈ ಸಂಬಂಧ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ದಾಖಲಾಗಿರುವ ರೋಗಿಗಳ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ, ಡೆಂಗ್ಯೂ ಪ್ರಕರಣದ ೫೦ ಜನ ರೋಗಿಗಳು ಈಗಾಗಲೇ ಗುಣಮುಖರಾಗಿ ಹೋಗಿದ್ದಾರೆ ಎಂದು ತಿಳಿಸಿದರು.

ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಸಹಿತ ಆಶಾ ಕಾರ್ಯಕರ್ತೆಯರು, ಎಎನ್‌ಎಂ ಗಳು, ದಾದಿಯರು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಲಾರ್ವಾ ಸರ್ವೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆಂದರು.

ಇಲಾಖೆ ಹಾಗೂ ನಗರಸಭೆಯಿಂದ ಫಾಗಿಂಗ್, ಬ್ಲೀಚಿಂಗ್ ಪೌಡರ್, ಚರಂಡಿಗಳ ಸ್ವಚ್ಚತೆ ಮುಂತಾದವುಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ, ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಆರೋಗ್ಯ ಇಲಾಖೆ ತಂಡ ಪರಿಶೀಲಿಸಿ ಜ್ವರದ ಪ್ರಕರಣಗಳು ಕಂಡುಬಂದರೆ ಸೂಕ್ತ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ ಎಂದರು.

ಪರಿಸರ ಸ್ವಚ್ಚತೆ ಜೊತೆಗೆ ನೀರು ಸಂಗ್ರಹಗಾರಗಳನ್ನು ಸರಿಯಾಗಿ ಮುಚ್ಚಿಡಬೇಕು, ಮನೆಯ ಅಕ್ಕಪಕ್ಕದಲ್ಲಿ ಅನಗತ್ಯವಾಗಿ ನೀರು ಸಂಗ್ರಹವಾಗುವುದನ್ನು ಸಾರ್ವಜನಿಕರು ತಡೆಯುವಂತೆ ಮನವಿ ಮಾಡಿದರು.

ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಈ ಸಂಬಂಧ ಸುಸಜ್ಜಿತವಾದ ಸೌಲಭ್ಯಗಳು ಮತ್ತು ಔಷಧಗಳ ಸಂಗ್ರಹ ಇದ್ದು, ಅಗತ್ಯ ಇರುವ ವೈದ್ಯರುಗಳು ರೋಗಗಳ ತಡೆಗೆ ಶ್ರಮಿಸುತ್ತಿದ್ದಾರೆ, ಸಾರ್ವಜನಿಕರು ಆತಂಕಕ್ಕೊಳಗಾಗದೆ ಮಳೆಗಾಲದ ಈ ಸಂದರ್ಭದಲ್ಲಿ ಸ್ವಚ್ಚತೆ ಕಾಪಾಡುವಂತೆ ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ಮಾತನಾಡಿ, ಕಳೆದ ೧೨ ದಿನಗಳಲ್ಲಿ ೧೫೬ ಜ್ವರದ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ೪೯ ಮಾತ್ರ ಡೆಂಗ್ಯೂ ಕೇಸುಗಳಾಗಿದ್ದು ಈ ರೋಗ ಹರಡದಂತೆ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಜೂನ್ ಮತ್ತು ಜುಲೈ ಮಾಹೆಯಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚಾಗುವುದು ಸಹಜ, ನಂತರ ಕಡಿಮೆಯಾಗುತ್ತವೆ. ೨೦೨೪ ರ ಜನವರಿಯಿಂದ ಜೂನ್ ೧೨ ರವರೆಗೆ ೩೪೬ ಜ್ವರದ ಪ್ರಕರಣಗಳು ದಾಖಲಾಗಿದ್ದು ಈಗಾಗಲೇ ಹಲವರು ಗುಣಮುಖರಾಗಿ ಹೋಗಿದ್ದಾರೆ ಎಂದರು.

ನಗರದ ರಾಮನಹಳ್ಳಿ, ಗೌರಿಕಾಲುವೆ ಸೇರಿದಂತೆ ವಿವಿಧ ವಾರ್ಡ್‌ಗಳಿಂದ ಮತ್ತು ಮಲೆನಾಡು ಭಾಗದಿಂದಲೂ ಡೆಂಗ್ಯೂ ಜ್ವರದ ರೋಗಿಗಳು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಈ ಜ್ವರ ಬೆಳಗ್ಗೆ ಕಚ್ಚುವ ಸೊಳ್ಳೆಯಿಂದ ಹರಡುತ್ತಿದ್ದು ಆ ಸಮಯದಲ್ಲಿ ಸೊಳ್ಳೆಯಿಂದ ರಕ್ಷಿಸಿಕೊಳ್ಳಲು ಸೊಳ್ಳೆ ಪರದೆ ಮುಂತಾದವುಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್, ಎಸ್‌ಪಿ ಡಾ. ವಿಕ್ರಂ ಅಮಟೆ ಹಾಗೂ ವೈದ್ಯರುಗಳು ಉಪಸ್ಥಿತರಿದ್ದರು.

The District Collector made a surprise visit to the District Hospital

 

About Author

Leave a Reply

Your email address will not be published. Required fields are marked *

You may have missed