September 19, 2024

ಫುಡ್‌ಕೋರ್ಟ್ ಶೀಘ್ರ ಸಾರ್ವಜನಿಕರಿಗೆ ಸಮರ್ಪಣೆ

0
ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್

ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್

ಚಿಕ್ಕಮಗಳೂರು: ನಗರಸಭೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಫುಡ್ ಕೋರ್ಟ್ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಇದೇ ತಿಂಗಳ ೨೦ರೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದೆಂದು ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.

ಅವರು ನಗರಸಭೆ ಕಚೇರಿಯಲ್ಲಿ ಭೇಟಿ ಮಾಡಿದ ಮಲೆನಾಡು ಐಸಿರಿಯೊಂದಿಗೆ ಮಾತನಾಡಿ, ಫುಡ್‌ಕೋರ್ಟ್ ಕಾಮಗಾರಿ ಶೇ.೯೫ ರಷ್ಟು ಮುಕ್ತಾಯ ಹಂತದಲ್ಲಿದ್ದು, ಸುಣ್ಣಬಣ್ಣ, ಇಂಟರ್‌ಲಾಕ್, ಆಸನಗಳ ವ್ಯವಸ್ಥೆ, ಗ್ರಾನೆಟ್ ಅಳವಡಿಕೆ, ಅಲಂಕಾರಿಕ ಲೈಟ್ ಅಳವಡಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಳೆದ ೩೦ ತಿಂಗಳ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಬಹುತೇಕ ನನ್ನ ಅಧಿಕಾರಾವಧಿ ಜುಲೈ ಮಾಹೆಯಲ್ಲಿ ಮುಕ್ತಾಯಗೊಳ್ಳಲಿದ್ದು, ಈ ಅವಧಿಯೊಳಗೆ ಫುಡ್‌ಕೋರ್ಟ್ ಸೇರಿದಂತೆ ಎಲ್ಲವನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಶಾಸಕ ತಮ್ಮಯ್ಯರೊಂದಿಗೆ ತಾವು, ಕೆಯುಡಬ್ಲೂಎಸ್ ಅಧಿಕಾರಿಗಳು ಹಾಗೂ ನಗರಸಭೆ ಮುಖ್ಯ ಇಂಜಿನಿಯರ್ ಚಂದ್ರಪ್ಪ ಸಹಿತ ಯಗಚಿ, ಮುಗಳವಳ್ಳಿ ಪಿಕಪ್‌ಗೆ ಭೇಟಿನೀಡಿ ಪರಿಶೀಲಿಸಿದ್ದು, ಇಲ್ಲಿ ಅಳವಡಿಸಲಾಗಿದ್ದ ಮೋಟಾರ್ ಹಾಳಾಗಿದ್ದು ಹೊಸ ಮೋಟಾರ್ ಖರೀದಿಸಿ ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಸುಮಾರು ೩.೫೦ ಕೋಟಿ ರೂ ವೆಚ್ಚದಲ್ಲಿ ಯಗಚಿ ಡ್ಯಾಂ ನಲ್ಲಿರುವ ಜಾಕ್‌ವೆಲ್ ಹೊಸದಾಗಿ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದ ಅವರು ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಕೆಲವು ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರ ಕೋರಿಕೆಯಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ನಗರದ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದ ಹಿನ್ನೆಲೆಯಲ್ಲಿ ಕಸದ ಗುಡ್ಡವೇ ನಿರ್ಮಾಣವಾಗಿ ಇಂದಾವರದ ಸುತ್ತಮುತ್ತಲ ಊರುಗಳಿಗೆ ಕಂಟಕವಾಗಿರುವ ಕಸ ಡಂಪಿಂಗ್ ಯಾರ್ಡ್‌ಗೆ ಸದ್ಯದಲ್ಲೇ ಮುಕ್ತಿ ದೊರೆಯಲಿದೆ ಎಂದು ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.

ನಗರದ ಕಸ ದಿನೇ ದಿನೆ ಹೆಚ್ಚಾದಂತೆ ನಗರಸಭೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ೧೦ ವರ್ಷದ ಹಿಂದೆ ನಗರದ ಇಂದಾವರದ ಬಳಿ ಕಸ ಡಂಪಿಂಗ್ ಯಾರ್ಡ್ ನಿರ್ಮಿಸಲಾಯಿತು. ಅಲ್ಲಿ ಹಸಿ ಮತ್ತು ಒಣಕಸ ಬೇರ್ಪಡಿಸಿ ಸಂಸ್ಕರಣೆ ಮಾಡಲು ಯಂತ್ರೋಪಕರಣಗಳು, ಮಾನವ ಶಕ್ತಿಗೆ ಕೋಟ್ಯಂತರ ರೂ.ವ್ಯಯಿಸಿದ್ದರೂ ಕೂಡ ಯೋಜನೆ ಸಫಲತೆ ಕಾಣಲಿಲ್ಲ ಎಂದರು.

ಸಗ್ರಿಗೇಶನ್ ಸಮರ್ಪಕವಾಗಿ ಮಾಡದ ಹಿನ್ನೆಲೆ ಕಸದ ರಾಶಿಯಿಂದ ಕೊಳಚೆ ನೀರು ಇಂದಾವರ ಗ್ರಾಮದಲ್ಲಿ ಹರಿದು ಪರಿಸರ ಹದಗೆಟ್ಟುಹೋಗಿದೆ. ಊರು ಸೊಳ್ಳೆಗಳ ಆವಾಸ ಸ್ಥಾನವಾಗಿ, ರೋಗರುಜಿನಗಳಿಗೆ ದಾರಿ ಮಾಡಿಕೊಟ್ಟಿದೆ. ಇದರಿಂದ ನಗರಸಭೆ ಸಿಬ್ಬಂದಿ ಮತ್ತು ಇಂದಾವರ ಗ್ರಾಮಸ್ಥರ ನಡುವೆ ವಾರಕ್ಕೊಮ್ಮೆ ಸಂಘರ್ಷ ನಡೆಯುವುದೂ ಇಂದಿಗೂ ತಪ್ಪಿಲ್ಲ. ಈ ಎಲ್ಲ ಅವಾಂತರಗಳಿಗೆ ಕಡಿವಾಣ ಹಾಕಲು ನಗರಸಭೆ ವೈಜ್ಞಾನಿಕ ಕಸ ಸಂಸ್ಕರಣೆಗೆ ಗುತ್ತಿಗೆ ನೀಡಲಾಗಿದ್ದು ಕಸದ ಗುಡ್ಡಕ್ಕೆ ಸದ್ಯದಲ್ಲೇ ಮುಕ್ತಿ ದೊರೆಯಲಿದೆ ಎಂದು ತಿಳಿಸಿದರು.

ಈ ಕಸದ ಗುಡ್ಡವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಕರಗಿಸಿ ನಂತರ ಮರುಬಳಕೆ ಅಥವಾ ಬೇರೆಡೆಗೆ ಸಾಗಿಸಲು ತಮಿಳುನಾಡು ಮೂಲದ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನೀಡಲಾಗಿದೆ. ತಮಿಳುನಾಡಿನ ಮೆ. ಬೇರಿ ಸೆಲ್ಯೂಷನ್ ಕಂಪನಿಯ ಮಣಿಶಂಕರನ್ ಎಂಬುವರಿಗೆ ೪.೧೨ ಕೋಟಿ ರೂ.ಗಳಿಗೆ ಗುತ್ತಿಗೆ ನೀಡಿ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಕಾರ್ಯ ಶುರುವಾಗಿರಲಿಲ್ಲ. ಸದ್ಯದಲ್ಲೇ ಯಂತ್ರೋಪಕರಣಗಳನ್ನು ಜೋಡಿಸಿ ಕಸದ ಗುಡ್ಡವನ್ನು ವೈಜ್ಞಾನಿವಾಗಿ ಸಂಸ್ಕರಿಸಿ ತೆರವು ಮಾಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದು ತಿಳಿಸಿದರು.

The food court will soon be open to the public

About Author

Leave a Reply

Your email address will not be published. Required fields are marked *

You may have missed