September 7, 2024
ಪೂರ್ವಿ ನಾದೋಪಾಸನಾ ಪ್ರಶಸ್ತಿ ಪ್ರದಾನ ಸಮಾರಂಭ

ಚಿಕ್ಕಮಗಳೂರು: ಸಾಧಕ ವೇದನೆ ಇಲ್ಲದೇ ಯಾವುದೇ ಸಾಧನೆ ಮಾಡಲಾರ ಎಂದು ವಾಗ್ಮಿ, ಕೋದಂಡರಾಮಚಂದ್ರಸ್ವಾಮಿ ದೇವಸ್ಥಾನದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಸುಗಮ ಗೀತ ಆಚಾರ್ಯತ್ರಯರಾದ ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವತ್ಥ್ ಸ್ಮರಣೆ ಹಾಗೂ ಪೂರ್ವಿ ನಾದೋಪಾಸನಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು `ಪೂರ್ವಿ ಗಾನಯಾನ ೧೦೦’ರ ಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಸಂಗೀತ ಕಲೆಯಾಗಿ ಅರಳಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ನಮ್ಮ ಬದುಕಿನ ಮುಡಿಯೇರಬೇಕು. ಸಂಗೀತ ಕಿವಿಗೆ ಸುಧೆಯಾಗಬೇಕು. ಆ ಗಾನಾಮೃತದಿಂದ ಮನಕೆ ಸಂತರ್ಪಣೆಯಾಗಬೇಕು. ಬರೆದಂತಹ ಸಾಹಿತಿಗೆ ಸಂಭ್ರಮಕ್ಕೆ ಸಂಭ್ರಮವು ಸಂಘಟಿಸಿದಂತೆ ಹಾಡುಗಾರನ ಮತ್ತು ಲೇಖಕನ ನಡುವೆ ಕೇಳುಗನ ಕಿವಿಗೆ ಕಲ್ಲುಸಕ್ಕರೆಗೆ ಜೇನುತುಪ್ಪ ಬೆರೆಸಿದಂತೆ ನಮ್ಮ ಬದುಕು ಸಿಹಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರಲ್ಲದೆ, ಎಂ.ಎಸ್.ಸುಧೀರ್ ಕೂಡ ಸಾಕಷ್ಟು ಪರಿಶ್ರಮ ವಹಿಸಿ ಸಂಗೀತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಸಾರಥ್ಯದಲ್ಲಿ `ಪೂರ್ವಿ ಗಾನಯಾನ ೧೦೦’ರ ಪಥದಲ್ಲಿ ಸಾಗಿರುವುದು ಅದ್ವಿತೀಯ ಸಾಧನೆ ಎಂದು ಅವರು ಹೇಳಿದರು.

ಸಾಹಿತಿ ರಮೇಶ್ ಬೊಂಗಾಳೆ ಸಂಪಾದಕತ್ವದ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಕುರಿತ `ನೆನಪು ನಿನಾದ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಪೂರ್ವಿಗಾನ ಯಾನ ಸುಮಾರು ಹತ್ತು ವರ್ಷಗಳ ಒಂದು ಸುದೀರ್ಘ ಪಯಣ. ಈ ಸಾಧನೆಯ ಹಾದಿಯಲ್ಲಿ ಎಂ.ಎಸ್.ಸುಧೀರ್ ಅವರ ಶ್ರಮ ಸಾಕಷ್ಟಿದೆ. ಚಿಕ್ಕಮಗಳೂರಿನಲ್ಲಿರುವ ಸಂಗೀತ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಇದು ಪೀಳಿಗೆಗೆ ಕೊಡುಗೆಯೂ ಆಗಲಿದೆ. ಇದರಲ್ಲಿ ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಅವರ ಪಾತ್ರವೂ ದೊಡ್ಡದು. ಈ ನಿಟ್ಟಿನಲ್ಲಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಸ್ವಂತ ಕಟ್ಟಡ ಹೊಂದುವಂತಾಗಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಮಾತನಾಡುವುದೇ ಸಾಧನೆಯಾಗಬಾರದು; ನಮ್ಮ ಸಾಧನೆಗಳು ನಮ್ಮ ಪರವಾಗಿ ಮಾತನಾಡಬೇಕು. ಹಾಗೆಯೇ ಪೂರ್ವಿ ತಂಡ ಸಾಧನೆ ಮಾಡುವ ಮೂಲಕ ಹೊಸ ಪ್ರತಿಭೆಗಳನ್ನು ಆವಿಷ್ಕಾರ ಮಾಡಿ ವೇದಿಕೆ ನೀಡುವ ಮೂಲಕ ಗಾನಯಾನವನ್ನು ೧೦೦ಕ್ಕೆ ತಲುಪಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಗಾಯಕಿ ಶಿವಮೊಗ್ಗದ ಸುರೇಖಾ ಹೆಗಡೆ ಅವರನ್ನು ಪೂರ್ವಿ ನಾದೋಪಾಸನಾ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು. ಕೀಬೋರ್ಡ್ ವಾದಕ, ಸಂಗೀತ ನಿರ್ದೇಶಕ ಬೆಂಗಳೂರಿನ ಎನ್.ಆರ್.ಕೃಷ್ಣ ಉಡುಪ ಹಾಗೂ ಗಾಯಕಿ ಸೌಮ್ಯ ಕೃಷ್ಣ ಹಾಗೂ ರಮೇಶ್ ಬೊಂಗಾಳೆ ಅವರನ್ನು ಅಭಿನಂದಿಸಲಾಯಿತು. ಗಾಯಕಿ ಸುರೇಖಾ ಹೆಗಡೆ ಮಾತನಾಡಿದರು. ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಸೆಂಟ್ ಮೇರಿಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಲೋಬೋ, ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ರಮೇಶ್ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುಗಮ ಸಂಗೀತ ಗಂಗಾ, ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಲಯನ್ಸ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕದಮನೆ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತಿಸಿದರು. ಗಾಯಕ ರಾಯನಾಯಕ್ ವಂದಿಸಿದರು. ಸುಮಾಪ್ರಸಾದ್ ಹಾಗೂ ರೂಪ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಪೂರ್ವಿ ತಂಡದ ಗಾಯಕರಾದ ಹಾಸನದ ಚೇತನ್‌ರಾಮ್, ರಾಯನಾಯಕ್, ದರ್ಶನ್, ಕವಿತಾ ನಿಯತ್, ಅನುರಾಧ, ಪಂಚಮಿ ಚಂದ್ರಶೇಖರ್, ಶ್ವೇತ ಭಾರದ್ವಾಜ್, ಬೆಂಗಳೂರಿನ ಶೃತಿ ಮಹೇಶ್, ಮಹೇಶ್ ಪ್ರಿಯದರ್ಶನ್, ಅನುರಾಧ ಭಟ್, ತುಮಕೂರಿನ ಪೂಜ್ಯ ಎಂ., ರುಕ್ಸಾನಾ ಕಾಚೂರ್, ಪ್ರಣಮ್ಯ, ಲಾಲಿತ್ಯ ಅಣ್ವೇಕರ್, ರೂಪ ಅಶ್ವಿನ್, ಅನುಷ, ಪೃಥ್ವಿಶ್ರೀ, ಸುರೇಂದ್ರನಾಯ್ಕ, ಸಾತ್ವಿಕ್, ಸುಂದರಲಕ್ಷ್ಮೀ ಹಾಗೂ ಚೈತನ್ಯ ಸುಗಮ ಸಂಗೀತ ಗಾಯನ ಸುಧೆ ಹರಿಸಿದರು.

ಶಿವಮೊಗ್ಗದ ಸುರೇಖಾ ಹೆಗಡೆ, ಮಂಗಳೂರಿನ ಮಾಲಿನಿ ಕೇಶವಪ್ರಸಾದ್, ಬೆಂಗಳೂರಿನ ರಮ್ಯ ಪ್ರಸನ್ನ ಗಾಯನದಲ್ಲಿ ಭಾಗವಹಿಸಿದ್ದು ವಿಶೇಷ. ಪಕ್ಕವಾದ್ಯದಲ್ಲಿ ಎನ್.ಆರ್.ಕೃಷ್ಣ ಉಡುಪ (ಕೀಬೋರ್ಡ್), ಜಿ.ಎಲ್.ರಮೇಶ್ ಕುಮಾರ್ (ಕೊಳಲು), ತುಕಾರಾಂ ರಂಗದೋಳ್ (ತಬಲಾ), ವಿಠಲ್ ರಂಗದೋಳ್ (ರಿದಂ ಪ್ಯಾಡ್) ಸಾಥ್ ನೀಡಿದ್ದರು.

Purvi Nadopasana award ceremony

About Author

Leave a Reply

Your email address will not be published. Required fields are marked *

You may have missed