September 8, 2024

ಜೂ.೧೮ ಇಂಧನ ಬೆಲೆ ಹೆಚ್ಚಳ ಖಂಡಿಸಿ ನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

0
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಪತ್ರಿಕಾಗೋಷ್ಠಿ

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಸ್ವಾರ್ಥ ಮತ್ತು ದ್ವೇಷದ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ನಾಳೆ(ಜೂ.೧೮) ರಂದು ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಂಬಾ ನಿರೀಕ್ಷೆ ಇಟ್ಟು ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಆಡಳಿತಕ್ಕೆ ತಂದ ಮತದಾರರಿಗೆ ಬೆಲೆ ಏರಿಕೆಯಿಂದಾಗಿ ನಿರಾಶೆಯಾಗಿದೆ, ಆರ್ಥಿಕ ಪರಿಸ್ಥಿತಿ ಅವಲೋಕನ ಮಾಡದೆ ಗ್ಯಾರಂಟಿ ಯೋಜನೆಗಳನ್ನು ಜಾರಿಮಾಡಿ ಅನುಷ್ಠಾನ ಮಾಡಿದ್ದಾರೆಂದು ದೂರಿದರು.

ಸರ್ಕಾರ ಆಡಳಿತಕ್ಕೆ ಬಂದ ನಂತರ ಒಂದೆಡೆ ಗ್ಯಾರಂಟಿ ಯೋಜನೆಗಳ ಜಾರಿ ಮಾಡಿದರೆ ಇದನ್ನು ಸರಿದೂಗಿಸಲು ಬೆಲೆ ಏರಿಕೆ ಅಸ್ತ್ರವನ್ನು ಬಳಸುತ್ತಿದೆ ಎಂದು ಆರೋಪಿಸಿದ ಅವರು ಇದರಿಂದ ಜನಜೀವನದ ಮೇಲೆ ಬರೆ ಎಳೆದಂತಾಗಿದೆ ಎಂದು ಟೀಕಿಸಿದರು.

ಬರಗಾಲದ ಪರಿಸ್ಥಿತಿಯಿಂದ ತತ್ತರಿಸಿದ್ದ ಜನತೆಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ದರ ಹೆಚ್ಚಳ ಮಾಡುವ ಮೂಲಕ ದಿನ ನಿತ್ಯದ ವಸ್ತುಗಳ ಬೆಲೆಯೂ ಹೆಚ್ಚಳಗೊಂಡಿದ್ದು, ಕೂಡಲೇ ರಾಜ್ಯಸರ್ಕಾರ ಈ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು, ಚುನಾವಣೆಯಲ್ಲಿ ಘೋಷಿಸಿದ್ದ ಭರವಸೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಈ ನೀತಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಮತ ನೀಡಿದ ಪರಿಣಾಮ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಅತ್ಯಧಿಕ ಮತಗಳಿಂದ ಗೆಲ್ಲಲು ಸಹಕಾರಿಯಾಯಿತು ಎಂದು ಹೇಳಿದರು.

ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ, ಯಾವುದೇ ಅಭಿವೃದ್ಧಿಗೆ ಇಲ್ಲಿಯವರೆಗೆ ಅನುದಾನ ಬಿಡುಗಡೆ ಮಾಡಿಲ್ಲ, ಬಡ ಜನರ ಜೀವನದ ಬಗ್ಗೆ ಕಾಳಜಿ ವಹಿಸದೆ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರುಗಳು ಕೇವಲ ಕುರ್ಚಿಗಾಗಿ ಆಡಳಿತ ನಡೆಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು ೧೮೭ ಕೋಟಿ ಹಣ ದುರುಪಯೋಗವಾಗಿರುವುದನ್ನು ಖಂಡಿಸಿದರು.

ಈ ಎಲ್ಲಾ ಕಾರಣಗಳಿಂದ ರಾಜ್ಯದ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಅರ್ಹತೆ ಇಲ್ಲ, ಕೂಡಲೇ ಪದತ್ಯಾಗ ಮಾಡಬೇಕೆಂದು ಒತ್ತಾಯಿಸಿದ ಅವರು ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಜನರು ಬಿಜೆಪಿ ಪರವಾದ ಜನಾದೇಶ ನೀಡಿದ್ದಾರೆಂದರು.

ಬಿಜೆಪಿ ದೇಶದಲ್ಲಿ ಏಕಾಂಗಿಯಾಗಿ ಸುಮಾರು ೨೪೦ ಸ್ಥಾನಗಳಲ್ಲಿ ಗೆದ್ದಿದೆ, ಕಳೆದ ಮೂರು ಅವದಿಯಿಂದ ಇಂಡಿಯಾ ಮೈತ್ರಿಕೂಟ ಈ ಬಾರಿ ೨೩೬ ಸ್ಥಾನ ಗೆದ್ದಿದ್ದಾರೆ. ಇದರಿಂದ ಜನರಿಗೆ ಕಾಂಗ್ರೆಸ್ ಬೇಡ ಎನ್ನುವ ತೀರ್ಮಾನ ಮಾಡಿ, ಬಿಜೆಪಿ ಪರ ಮತ ನೀಡಿದ್ದಾರೆಂದು ಶ್ಲಾಘಿಸಿದರು.

ರಾಜ್ಯ ಸರ್ಕಾರದ ಈ ಜನವಿರೋಧಿ ಕ್ರಮಗಳನ್ನು ಖಂಡಿಸಿ, ರಾಜ್ಯಾದ್ಯಂತ ಬಿಜೆಪಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದೆ. ಜೊತೆಗೆ ಬೆಲೆ ಏರಿಕೆ ಆದೇಶವನ್ನು ವಾಪಸ್ ಪಡೆದುಕೊಳ್ಳುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ಕಲ್ಮರುಡಪ್ಪ, ವಕ್ತಾರರಾದ ಸೋಮಶೇಖರ್, ಹೆಚ್.ಎಸ್ ಪುಟ್ಟಸ್ವಾಮಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್ ಉಪಸ್ಥಿತರಿದ್ದರು.

June 18 BJP massive protest in the city condemning the increase in fuel prices

About Author

Leave a Reply

Your email address will not be published. Required fields are marked *

You may have missed