September 16, 2024

ಡೆಂಗ್ಯೂ ಜ್ವರದ ಪ್ರಕರಣ : ಶಾಸಕ ಎಚ್.ಡಿ.ತಮ್ಮಯ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ

0
ಶಾಸಕ ಎಚ್.ಡಿ.ತಮ್ಮಯ್ಯ ಅವರು ಇಂದು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ಭೇಟಿ

ಶಾಸಕ ಎಚ್.ಡಿ.ತಮ್ಮಯ್ಯ ಅವರು ಇಂದು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ಭೇಟಿ

ಚಿಕ್ಕಮಗಳೂರು:  ಡೆಂಗ್ಯೂ ಜ್ವರದ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಆತಂಕ ತಲೆದೋರಿರುವ ಹಿನ್ನೆಲೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಅವರು ಇಂದು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ವಾರ್ಡ್‌ಗಳಿಗೆ ತೆರಳಿ ಜ್ವರದಿಂದ ದಾಖಲಾಗಿರುವ ರೋಗಿಗಳ ಯೋಗಕ್ಷೇಮ ವಿಚಾರಿಸಿದ ಅವರು, ಸೂಕ್ತ ಔಷದೋಪಚಾರ, ವೈದ್ಯಕಿಯ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ಜಿಲ್ಲಾ ಸರ್ಜನ್ ಡಾ.ಮೋಹನ್‌ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸೀಮ, ಡಾ. ಭರತ್, ಡಾ. ಚಂದ್ರಶೇಖರ್ ಮತ್ತಿತರರೊಂದಿಗೆ ಸಭೆ ನಡೆಸಿ ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಲಾರ್ವಾಗಳ ಸಮೀಕ್ಷೆ, ಸ್ವಚ್ಛತೆ ಕಾಪಾಡುವ ಜೊತೆಗೆ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮನೆಗಳ ಸುತ್ತ ನೀರು ನಿಲ್ಲದಂತೆ ಹಾಗೂ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸುವಂತೆ ಸೂಚಿಸಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ ಕಳೆದ ಕೆಲವು ದಿನಗಳಿಂದ ಡೆಂಗ್ಯೂಜ್ವರದ ಪ್ರಕರಣಗಳು ಇಳಿಮುಖಗೊಂಡಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆಗೆ ಆಧ್ಯತೆ ಕೊಡಬೇಕು ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ ಮುಂಜಾಗ್ರತೆ ವಹಿಸಲು ಅರಿವು ಮೂಡಿಸುತ್ತಿದ್ದಾರೆ. ನಗರಸಭೆ ವತಿಯಿಂದ ನಗರದ ವ್ಯಾಪ್ತಿಯಲ್ಲಿ ನಾಲ್ಕು ಯಂತ್ರಗಳನ್ನು ಬಳಸಿ ಫಾಗಿಂಗ್ ಮಾಡಲಾಗುತ್ತಿದೆ. ಮತ್ತೆರಡು ಯಂತ್ರಗಳನ್ನು ತರಿಸಿಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಿ, ಮಾತ್ರೆಗಳು, ವೈದ್ಯರ ಲಭ್ಯತೆ ಇದೆ. ಹಾಸಿಗೆಗಳಿಗೆ ಒಂದಷ್ಟು ಬೇಡಿಕೆ ಹೆಚ್ಚಿದೆ. ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾ ಸರ್ಜನ್‌ರಿಗೆ ತಿಳಿಸಿದ್ದೇವೆ. ಜ್ವರದ ಪ್ರಕರಣಗಳು ಹೆಚ್ಚಾಗಿ ವರದಿಯಾದಲ್ಲಿ ಬೇಲೂರು ರಸ್ತೆ ಸಮೀಪದ ಲೋಕೋಪಯೋಗಿ ಇಲಾಖೆ ಹಳೇ ಕಟ್ಟಡವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಡೆಂಗ್ಯೂ ಪ್ರಕರಣಗಳು ಉಲ್ಬಣಗೊಂಡಿದ್ದರೂ ಉಸ್ತುವಾರಿ ಸಚಿವರು, ಚುನಾಯಿತ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಚುನಾವಣೆ ನೀತಿಸಂಹಿತೆ ಇದ್ದಾಗಲೂ ನಾವು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ.

ವೈದ್ಯಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದೇವೆ. ಆದರೆ ನೀತಿ ಸಂಹಿತೆ ಸಂದರ್ಭದಲ್ಲಿ ವೈದ್ಯರು, ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಲು ಅವಕಾಶ ಇರುವುದಿಲ್ಲ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಉತ್ತರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ ಬಾಬು ಮಾತನಾಡಿ, ಈ ವರ್ಷ ಜನವರಿಯಿಂದ ಈ ವರೆಗೆ ಜಿಲ್ಲೆಯಲ್ಲಿ ಒಟ್ಟು ೩೮೫ ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ಜೂನ್, ಜುಲೈನಲ್ಲೇ ೧೭೦ ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಇದೀಗ ಇಡೀ ಜಿಲ್ಲೆಯಲ್ಲಿ ೨೫ ಸಕ್ರೀಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.

ಎಲ್ಲಾ ಜ್ವರದ ಪ್ರಕರಣಗಳು ಡೆಂಗ್ಯೂ ಪ್ರಕರಣಗಳಾಗಿರುವುದಿಲ್ಲ. ಕಾರ್ಡ್ ಪರೀಕ್ಷೆ ನಂತರ ಎಲಿಸಾ ಪರೀಕ್ಷೆಯಲ್ಲೂ ದೃಢಪಟ್ಟರೆ ಮಾತ್ರ ಅದನ್ನು ಡೆಂಗ್ಯೂ ಎಂದು ಪರಿಗಣಿಸಲಾಗುತ್ತದೆ. ಉಳಿದವು ಸಾಮಾನ್ಯ ಜ್ವರದ ಪ್ರಕರಣಗಳಾಗಿರುತ್ತವೆ ಈ ಹಿನ್ನೆಲೆಯಲ್ಲಿ ಯಾರೂ ಆತಂಕ ಪಡಬಾರದು ಎಂದು ದೈರ್ಯ ತುಂಬಿದರು.

ತುಂಬಾ ಬಿಸಿಲು ನಂತರ ಏಕಾ ಏಕಿ ಜೋರಾಗಿ ಮಳೆ ಸುರಿದ ಪರಿಣಾಮ ವಾತಾವರಣದಲ್ಲಾದ ವ್ಯತ್ಯಾಸದಿಂದಾಗಿ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ನಗರ ಪ್ರದೇಶದ ಹೊರವಲಯದಲ್ಲಿ ಕೈಗಾರಿಕಾ ಪ್ರದೇಶಗಳು, ಜನವಸತಿ ಸೇರಿ ಸೆಮಿ ಅರ್ಬನ್ ಪ್ರದೇಶಗಳು ಹೆಚ್ಚಿರುವುದರಿಂದ ಅಲ್ಲಲ್ಲಿ ನೀರು ಸಂಗ್ರಹ ಹೆಚ್ಚಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಆಗುತ್ತಿದೆ ಎಂದರು.

ಇದೀಗ ಡೆಂಗ್ಯೂ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದೆ. ೩೮೫ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾದರೂ ಯಾರೊಬ್ಬರೂ ಜೀವ ಕಳೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಮಾತನಾಡಿ, ಜಿಲ್ಲಾ ಆಸ್ಪತ್ರೆಗೆ ಪ್ರತಿದಿನ ಜ್ವರದ ಪ್ರಕರಣಗಳು ಬರುತ್ತಿವೆ, ಇದರಲ್ಲಿ ಡೆಂಗ್ಯೂಗಿಂತಲೂ ವಿಷಮ ಶೀತ ಜ್ವರದ ಪ್ರಕರಣಗಳು ಹೆಚ್ಚಿವೆ. ವಾರದ ಹಿಂದೆ ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ ೧೦ ಮಂದಿಗೆ ಪ್ಲೇಟ್‌ಲೆಟ್ ಹಾಕಬೇಕಿತ್ತು. ಹಾಲಿ ದಿನಕ್ಕೆ ಹೆಚ್ಚೆಂದರೆ ಒಬ್ಬರಿಗೆ ಮಾತ್ರ ಪ್ಲೇಟ್‌ಲೆಟ್ ಅಗತ್ಯಬೀಳುತ್ತಿದೆ. ಈಗ ಒಟ್ಟು ೧೦ ಡೆಂಗ್ಯು ಪೀಡಿತರು ಮಾತ್ರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು

MLA HD Tammaiah visited the Mallegowda District Hospital in Nagar

About Author

Leave a Reply

Your email address will not be published. Required fields are marked *