September 19, 2024

ಸೂಕ್ತ ಮಾಹಿತಿ ನೀಡದ ಅಧಿಕಾರಿ ಅಮಾನತಿಗೆ ಸೂಚನೆ

0
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ನಗರ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆ

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ನಗರ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರು ಹಾಗೂ ಯುಜಿಡಿ ಯೋಜನೆಗಳಿಗೆ ಸಂಬಂಧಿಸಿದಂತೆ ಅಸಮರ್ಪಕ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಬುದುವಾರ ನಗರ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸೂಕ್ತ ಮಾಹಿತಿ ನೀಡದೆ ಸಭೆಯಿಂದ ಹೊರಗಡೆನಿಂತ ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಸಸ್ಪಂಡ್ ಗೆ ಹಾಗೂ ಎಇಇ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದರು.

ಸಭೆ ಆರಂಭದಲ್ಲಿ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಅವರು, ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ಎಬಿಚಿ ಡ್ಯಾಮ್ ನಲ್ಲಿ ಅಳವಡಿಸಿರುವ ಎರಡು ಮೋಟಾರ್ ಗಳಲ್ಲಿ ಒಂದು ದುರಸ್ತಿಗೆ ಬಂದಿದೆ. ಇನ್ನು ಮುಗುಳುಗೊಳ್ಳಿಯಲ್ಲಿ ಅಳವಡಿಸಿರುವ ಮೋಟಾರ್ ಗಳು ಸಹ ಹಾಳಾಗಿವೆ ಎಂದು ಸಭೆಯ ಗಮನ ಸೆಳೆದರು.

ಈ ವೇಳೆ ಸಭೆಗೆ ಮಾಹಿತಿ ನೀಡಿದ ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಮೋಟಾರ್ ಗಳು ಪದೇ ಪದೇ ಕೈ ಕೊಡುತ್ತಿರುವುದರಿಂದಾಗಿ ಹೊಸ ಜಾಕ್ ವೆಲ್ ಹಾಗೂ ಹೊಸ ಮೋಟರ್ ಕೂಡ ಅಳವಡಿಕೆಗೆ ಪ್ರಪೋಸಲ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಸಿದ ಸಚಿವ ಭೈರತಿ ಸುರೇಶ್ ಅವರು ಒಟ್ಟು ಯೋಜನಾ ವೆಚ್ಚ ಎಷ್ಟು ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ವಿಫಲರಾದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ೩೫ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಇದರಲ್ಲಿ ಏಳು ಕೋಟಿ ರೂಪಾಯಿ ಹಣವನ್ನು ಚಿಕ್ಕಮಗಳೂರಿನ ವಿವಿಧ ಎತ್ತರದ ಪ್ರದೇಶದಲ್ಲಿರುವ ಬಡಾವಣೆಗಳಿಗೆ ನೀರೊದಗಿಸಲು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಸಿದ ಸಚಿವರು ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗಿಂತಲೂ ಅವರ ಇಲಾಖೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇದೆ. ನೀವುಗಳು ಮುಖಮುಖ ನೋಡುತ್ತಿದ್ದೀರಿ ಎಂದು ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಈ ವೇಳೆ ಮಾತನಾಡಿದ ಶಾಸಕ ತಮ್ಮಯ್ಯ, ೨೦೧೮ರಲ್ಲಿ ಯಗಚಿ ಡ್ಯಾಮ್ ನಲ್ಲಿ ಅಳವಡಿಕೆ ಮಾಡಲು ಹಾಗೂ ಮುಗುಳುವಳಿಯಲ್ಲಿ ಅಳವಡಿಸಲು ಪಂಪುಗಳನ್ನು ಖರೀದಿ ಮಾಡಲಾಗಿತ್ತು. ಆದರೆ ೨೦೧೯ರಲ್ಲಿ ಪಂಪುಗಳ ವಾರಂಟಿ ಮುಗಿದಿದೆ. ವಾರಂಟಿ ಮುಗಿದ ಬಳಿಕ ೨೦೧೯-೨೦ರಲ್ಲಿ ಪಂಪುಗಳನ್ನು ಅಳವಡಿಕೆ ಮಾಡಲಾಗಿದೆ. ಹೀಗಾಗಿ ನಗರಕ್ಕೆ ನೀರು ಒದಗಿಸುವ ಪಂಪುಗಳು ದುರಸ್ತಿಗೆ ಬಂದಲ್ಲಿ ಸ್ಥಳೀಯ ಆಡಳಿತದಿಂದಲೇ ರಿಪೇರಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಪಂಪುಗಳು ಕೈಕೊಟ್ಟಲ್ಲಿ ನಗರಕ್ಕೆ ಕನಿಷ್ಠ ಒಂದು ತಿಂಗಳು ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಾಯವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಇನ್ನು ನಗರದಲ್ಲಿನ ಯುಜಿಡಿ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನೀನಾ ನಾಗರಾಜ್ ನಗರದ ಎಂಟು ವಾರ್ಡ್ಗಳಲ್ಲಿ ಮ್ಯಾನ್ ಹೋಲ್ ಗಳು ಸಂಪೂರ್ಣವಾಗಿ ಕುಸಿದು ಹೋಗಿವೆ. ಇನ್ನುಳಿದ ಕಡೆಗಳಲ್ಲಿ ಮ್ಯಾನ್ ಹೋಲ್ ಗಳಲ್ಲಿ ನೀರು ರಸ್ತೆ ಮೇಲೆಯೇ ಉಕ್ಕುತ್ತಿದೆ. ನಗರದಲ್ಲಿನ ಯುಜಿಡಿ ವ್ಯವಸ್ಥೆ ಸರಿಪಡಿಸಲು ತಜ್ಞರ ಸಲಹೆ ಪಡೆಯುವುದು ಅನಿವಾರ್ಯವಾಗಿದೆ ಎಂದು ಡಿಸಿ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಎಚ್. ಡಿ.ತಮ್ಮಯ್ಯ, ೨೦೧೨ರಲ್ಲಿ ನಗರದಲ್ಲಿ ಯುಜಿಡಿ ಕಾಮಗಾರಿ ಆರಂಭ ಮಾಡಲಾಗಿತ್ತು. ೨೦೧೯ರಲ್ಲಿ ಕಾಮಗಾರಿ ಕಮಿಷನ್ ಮಾಡಲಾಗಿದೆ. ಇದೀಗ ಯುಜಿಡಿ ಸಮಸ್ಯೆ ಕಾಣಿಸಿಕೊಂಡಿದ್ದ ಆದರೆ ನಗರಸಭೆಯ ಬಳಿಯಾಗಲಿ ಅಥವಾ ಅಧಿಕಾರಿಗಳ ಬಳಿಯಾಗಲಿ, ಯುಜಿಡಿ ಕಾಮಗಾರಿಯ ಮಾಸ್ಟರ್ ಪ್ರಿಂಟ್ ಡ್ರಾಯಿಂಗ್ ಇಲ್ಲ. ಹೀಗಿರುವಾಗ ಸ್ಟ್ರೈಟ್ ಲೈನ್ ಎಲ್ಲಿ ಹಾದು ಹೋಗಿದೆ ಬೆಂಡ್ ಎಲ್ಲಿದೆ ಎಂಬುದು ನಗರ ಸಭೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಎಲ್ಲಾ ಅಂಶಗಳಿಂದ ಕೆಂಡಮಂಡಲರಾದ ಸಚಿವ ಭೈರತಿ ಸುರೇಶ್ ಅವರು, ಇನ್ನು ಮೂರು ತಿಂಗಳ ಒಳಗಾಗಿ ನಗರದ ಯುಜಿಡಿ ವ್ಯವಸ್ಥೆ ಸರಿ ಪಡಿಸಬೇಕು. ಜೊತೆಗೆ ಸಭೆಗೆ ಆಗಮಿಸಿದೆ ಹೊರಗೆ ಇದ್ದ ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಸಸ್ಪಂಡ್ ಮಾಡಬೇಕು ಹಾಗೂ ಸಭೆಗೆ ಸಮರ್ಪಕ ಮಾಹಿತಿ ನೀಡಿದ ಇಲಾಖೆ ಎಇಇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ ಪಟ್ಟಣಗಳಲ್ಲಿಯೂ ತುರ್ತಾಗಿ ಯುಜಿಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಕೆ.ಎಸ್. ಆನಂದ್, ಜಿ.ಎಚ್.ಶ್ರೀನಿವಾಸ್, ನಯನಾ ಮೋಟಮ್ಮ, ಟಿ.ಡಿ.ರಾಜೇಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಎಸ್ ಪಿ ವಿಕ್ರಮ್ ಅಮಟೆ, ಜಿಪಂ ಸಿಇಒ ಡಾ.ಗೋಪಾಲಕೃಷ್ಣ ಮತ್ತಿತರರಿದ್ದರು.

Notice for suspension of officer who does not provide proper information

About Author

Leave a Reply

Your email address will not be published. Required fields are marked *

You may have missed