September 19, 2024

ಸಾಮಾಜಿಕ ಚಟುವಟಿಕೆಗಳ ಮೂಲಕ ಹುಟ್ಟುಹಬ್ಬ ಆಚರಣೆ ಸಮಾಜಕ್ಕೆ ಪೂರಕ

0
ಹಿರೇಮಗಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

ಹಿರೇಮಗಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

ಚಿಕ್ಕಮಗಳೂರು:  ಜನಪರವಾದ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಯಾರದೇ ಹುಟ್ಟುಹಬ್ಬ ಆಚರಣೆ ಮಾಡಿದರೆ ಅದು ಸಮಾಜಕ್ಕೆ ಪೂರಕವಾಗುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ಹುಟ್ಟೂರಾದ ಹಿರೇಮಗಳೂರಿನಲ್ಲಿ ಹೆಚ್.ಡಿ ತಮ್ಮಯ್ಯ ಅಭಿಮಾನಿ ಬಳಗ ಏರ್ಪಡಿಸಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಭಿನಂದನೆ, ಆಶೀರ್ವಾದ ಪಡೆದು ನಂತರ ಹಿರೇಮಗಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆಂಬ ಕೀಳರಿಮೆ ವಿದ್ಯಾರ್ಥಿಗಳಲ್ಲಿ ಬರಬಾರದು, ಖಾಸಗಿ ಶಾಲೆಗಿಂತ ಉತ್ತಮ ಶಿಕ್ಷಣ, ಉತ್ತಮ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲೇ ಇದ್ದಾರೆ, ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯುವಂತೆ ಕರೆ ನೀಡಿದರು.

ಹಿರೇಮಗಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಸಮಾಜದ ಮುನ್ನೆಲೆಗೆ ಬಂದಿದ್ದಾರೆ, ಈ ನಿಟ್ಟಿನಲ್ಲಿ ಇಂದು ನೀಡುತ್ತಿರುವ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಶ್ರಮಪಟ್ಟು ಶಿಕ್ಷಣ ಪಡೆಯಬೇಕೆಂದು ಕಿವಿಮಾತು ಹೇಳಿದರು.

ವಿದ್ಯಾವಂತರಾಗಿ ನೌಕರಿ ಪಡೆದರೆ ಸಾಲದು, ಸಂಸ್ಕಾರ ಪಡೆಯುವ ಮೂಲಕ ಶಾಲೆ, ಗ್ರಾಮಕ್ಕೆ, ಪೋಷಕರಿಗೆ ಕೀರ್ತಿ ತರಬೇಕು, ವಿಶ್ವದಲ್ಲೇ ಭಾರತ ಒಂದು ಸುಸಂಸ್ಕೃತ-ಸಂಸ್ಕಾರವಂತ ರಾಷ್ಟ್ರವಾಗಿದ್ದು, ನೀವು ಸಹ ಇದಕ್ಕೆ ಪೂರಕವಾಗಿ ಸಂಸ್ಕಾರವಂತರಾಗಬೇಕು. ಸ್ವಾಮಿ ವಿವೇಕಾನಂದ, ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಹಲವಾರು ಮಹಾ ಪುರಷರ ತತ್ವಾದರ್ಶಗಳು ಮಾದರಿಯಾಗಲಿ ಎಂದು ತಿಳಿಸಿದರು.

೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯೊಂದಿಗೆ ನನ್ನ ಹುಟ್ಟುಹಬ್ಬವನ್ನು ಹಿತೈಷಿಗಳು, ಸ್ನೇಹಿತರು ಸರಳವಾಗಿ ಆಚರಿಸುತ್ತಿದ್ದಾರೆಂದು ಶ್ಲಾಘಿಸಿದ ಅವರು ನನ್ನನ್ನು ಆಹ್ವಾನಿಸಿ ಹುಟ್ಟುಹಬ್ಬ ಆಚರಿಸುತ್ತಿರುವ ಹಿರೇಮಗಳೂರು ಜನತೆಗೆ ಸದಾ ಚಿರರುಣಿಯಾಗಿರುತ್ತೇನೆಂದು ಹೇಳಿದರು.

ತಾವು ವ್ಯಾಸಂಗ ಮಾಡಿದ ಹಿರೇಮಗಳೂರು ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಗುರಿ ಹೊಂದಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಅನುದಾನದ ಕೊರತೆ ಇದ್ದು ಈ ಸಂಬಂಧ ಅಧಿಕಾರವಧಿ ಮುಗಿಯುವುದರೊಳಗೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಸಹಕಾರ ಪಡೆದು ಮಾದರಿ ಶಾಲೆಯನ್ನಾಗಿ ಮಾಡುವುದಾಗಿ ಘೋಷಿಸಿದರು.

ತಮ್ಮ ಹುಟ್ಟುಹಬ್ಬದ ಅಂಗವಾಗಿ ಹಿರೇಮಗಳೂರು ಶಾಲೆಗೆ ಮಿಕ್ಸಿ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ನಂತರ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣು-ಹಂಪಲು ವಿತರಣೆ ಹಾಗೂ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಿದ್ದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಿಗೆ ಅಭಿನಂದಿಸಿದರು.

ಶಾಸಕ ಹೆಚ್.ಡಿ ತಮ್ಮಯ್ಯ ರವರ ಅಭಿಮಾನಿ ಸಂಘದ ರಾಜು, ಸಂಜಯ್, ಚಂದ್ರು, ಹಾಲೇಶ್, ದರ್ಶನ್, ರಾಮಚಂದ್ರ, ಜಗ್ಗಣ್ಣ ಮತ್ತಿತರರು ಉಪಸ್ಥಿತರಿದ್ದರು.

Free note book distribution in Hiremagaluru Senior Primary School

About Author

Leave a Reply

Your email address will not be published. Required fields are marked *

You may have missed