September 8, 2024

ಸಿಡಿಎ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡದಿದ್ದರೆ ಕಾಂಗ್ರೆಸ್ ವಿರುದ್ಧ ಉಗ್ರ ಚಳುವಳಿ

0
ದಲಿತ ಪ್ರಗತಿಪರ ಚಿಂತಕರ ವೇದಿಕೆ ಮುಖಂಡ ಮರ್ಲೆ ಅಣ್ಣಯ್ಯ ಸುದ್ದಿಗೋಷ್ಠಿ

ದಲಿತ ಪ್ರಗತಿಪರ ಚಿಂತಕರ ವೇದಿಕೆ ಮುಖಂಡ ಮರ್ಲೆ ಅಣ್ಣಯ್ಯ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮೊದಲ ಅವಧಿಗೆ ದಲಿತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನವನ್ನು ಮೀಸಲಿಟ್ಟು ಆಯ್ಕೆಮಾಡಬೇಕು ಇಲ್ಲವಾದರೆ ಕಾಂಗ್ರೆಸ್ ವಿರುದ್ಧ ಉಗ್ರ ಚಳುವಳಿ ನಡೆಸಲು ದಲಿತ ಪ್ರಗತಿಪರ ಚಿಂತಕರ ವೇದಿಕೆ ತೀರ್ಮಾನಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೇದಿಕೆ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ, ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ದಲಿತ, ಹಿಂದೂ, ಅಲ್ಪಸಂಖ್ಯಾತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ವೇದಿಕೆಯನ್ನು ರಚಿಸಿಕೊಂಡಿದ್ದು, ಸಾಮಾಜಿಕ ನ್ಯಾಯ ಕೊಡುವುದಾದರೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತಿರುವ ಹಿರೇಮಗಳೂರು ರಾಮಚಂದ್ರರವರಿಗೆ ಸಿಡಿಎ ಮೊದಲ ಅವಧಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಸ್ವತಂತ್ರ್ಯಾ ನಂತರದ ರಾಜಕಾರಣದಲ್ಲಿ ಪ.ಜಾ ಮತ್ತು ಪ.ಪಂ ಸಮುದಾಯದವರನ್ನು ಕಾಂಗ್ರೆಸ್ ಪಕ್ಷ ಒಟ್‌ಬ್ಯಾಂಕ್ ಆಗಿ ಬಳಸಿಕೊಂಡು ಬಿಂಬಿಸಲಾಗುತ್ತಿದೆ. ಎಲ್ಲಾ ಚುನಾವಣೆಗಳನ್ನು ಗೆಲ್ಲಲು ಈ ಸಮುದಾಯದ ಕೊಡುಗೆ ಸಿಂಹಪಾಲು ಇದ್ದು, ಅಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡದಿದ್ದರೆ ಮುಂಬರುವ ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಸಮುದಾಯ ತಮ್ಮದೇ ಆದ ನಿರ್ಧಾರ ಕೈಗೊಳ್ಳುತ್ತದೆಂದು ಎಚ್ಚರಿಸಿದರು.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರಿಗೆ ಹಾಗೂ ಜಿಲ್ಲೆಯ ಎಲ್ಲಾ ಐದು ಶಾಸಕರಿಗೆ ಮತ್ತು ಪಕ್ಷದ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ಅವರಿಗೆ ಈಗಾಗಲೇ ಮನವಿ ಮಾಡಿದ್ದು, ಹಿರೇಮಗಳೂರು ರಾಮಚಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಕೋರಲಾಗಿದೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರುಕಳಿಸುವ ಇತಿಹಾಸ ಸೃಷ್ಟಿಮಾಡುವಲ್ಲಿ ದಲಿತ ಸಮುದಾಯದ ದೊಡ್ಡ ಪಾತ್ರವಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೋರಾಟಕ್ಕೆ ದಲಿತ ಸಮುದಾಯ ಹೆಚ್ಚು ಶಕ್ತಿ ತುಂಬಿದ ಪರಿಣಾಮ ದೇಶದ ರಾಜಕಾರಣದಲ್ಲಿ ಬದಲಾವಣೆಯ ಸಂಕೇತವಾಗಿ ಕಾಂಗ್ರೆಸ್ ಚೇತರಿಸಿಕೊಳ್ಳುವಂತಾಗಲು ದಲಿತ ಸಮೂಹ ಶ್ರಮಿಸಿದೆ ಎಂದರು.

ಈ ಎಲ್ಲಾ ಅಂಶಗಳ ಆಧಾರವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಸರ್ಕಾರ ವಿವಿಧ ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ವಿವಿಧ ಅಭಿವೃದ್ಧಿ ಪ್ರಾಧಿಕಾರಗಳಿಗೆ ನೇಮಕಾತಿ ಮಾಡುವಾಗ ಸರ್ಕಾರಕ್ಕೆ ದಲಿತ ಸಮುದಾಯ ನೀಡಿರುವ ಬೆಂಬಲಕ್ಕೆ ತಕ್ಕಂತೆ ಅಗತ್ಯ ಪ್ರಮಾಣದಲ್ಲಿ ಪ್ರಾತಿನಿಧ್ಯ ನೀಡುವಲ್ಲಿ ಸಿಡಿಎ ಗೆ ದಲಿತ ಮುಖಂಡರಿಗೆ ಮೊದಲ ಅವಧಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾದ ಈವರೆಗೆ ದಲಿತ ಸಮುದಾಯದ ಮುಖಂಡರಿಗೆ ಅಧ್ಯಕ್ಷ ಸ್ಥಾನ ನೀಡಿರುವುದಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಕಳೆದ ೩೬ ವರ್ಷಗಳಿಂದ ಸಕ್ರಿಯ ನಿಷ್ಠಾವಂತ ಕಾರ್ಯಕರ್ತರಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಹಿರೇಮಗಳೂರು ರಾಮಚಂದ್ರ ಅವರ ಹಿರಿತನವನ್ನು ಪರಿಗಣಿಸಿ ಅಧ್ಯಕ್ಷರನ್ನಾಗಿ ಆಯ್ಕೆಮಾಡಬೇಕೆಂದು ಆಗ್ರಹಿಸಿದರು.

ಇನ್ನೋರ್ವ ಮುಖಂಡ ಕೆ.ಸಿ ವಸಂತ ಕುಮಾರ್ ಮಾತನಾಡಿ, ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ೧೩ ಎಕರೆ ಜಾಗ ಮಂಜೂರು ಮಾಡಬೇಕು, ನಗಮ ಮಂಡಳಿಗೆ ದಲಿತ ಸಂಘಟನೆಗಳ ಮುಖಂಡರನ್ನು ಆಯ್ಕೆಮಾಡುವಂತೆ ಶಾಸಕರಿಗೆ ಮನವಿ ಮಾಡಿದ್ದೇವೆ ಎಂದರು.

ಹುಣಸೇಮಕ್ಕಿ ಲಕ್ಷ್ಮಣ ಮಾತನಾಡಿ, ದಲಿತರು ಕಾಂಗ್ರೆಸ್ ಪಕ್ಷದ ಹಸು-ಕರು ಗುರುತ್ತಿದ್ದಾಗಿನಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ ಆದರೆ ಈ ಸಮುದಾಯಕ್ಕೆ ಅಧಿಕಾರ ಹಂಚಿಕೆ ಮತ್ತು ಸೌಲಭ್ಯ ಕೊಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೊನ್ನಪ್ಪ, ಯು.ಸಿ ರಮೇಶ್, ನಿವೃತ್ತ ಶಿಕ್ಷಕ ಹರಿಯಪ್ಪ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Violent movement against Congress if the post of CDA President is not given to Dalit community

About Author

Leave a Reply

Your email address will not be published. Required fields are marked *

You may have missed