September 19, 2024

ಡೆಂಗ್ಯೂ ಜ್ವರದ ಬಗ್ಗೆ ಆತಂಕ ಭಯಪಡುವ ಅಗತ್ಯ ಇಲ್ಲ

0
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ಸುದ್ದಿಗೋಷ್ಠಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ಸುದ್ದಿಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಿಲ್ಲೆಯಲ್ಲಿ ಜನವರಿಯಿಂದ ಜು.೩ ರವರೆಗೆ ದೃಡೀಕೃತ ೫೨೧ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ೩೯ ಪ್ರಕರಣಗಳು ಮಾತ್ರ ಡೆಂಗ್ಯೂ ಜ್ವರದ ಪ್ರಕರಣಗಳು ದೃಢಪಟ್ಟಿದ್ದು ಡೆಂಗ್ಯೂ ಜ್ವರದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಈಜಿಪ್ಟ್ ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರು, ಮಕ್ಕಳು, ಸೇರಿದಂತೆ ಎಲ್ಲರೂ ಸೊಳ್ಳೆಗಳಿಂದ ಕಚ್ಚದಂತೆ ಪಾರಾಗಲು ಸೊಳ್ಳೆ ನಿರೋಧಕ ವಸ್ತುಗಳಾದ ಸೊಳ್ಳೆಬತ್ತಿ, ಸೊಳ್ಳೆ ಪರದೆ, ಸೊಳ್ಳೆ ಮೆಶ್ ಅಳವಡಿಸಿಕೊಳ್ಳುವ ಮೂಲಕ ಎಚ್ಚರ ವಹಿಸುವಂತೆ ತಿಳಿಸಿದರು.

ಮಳೆಗಾಲವಾಗಿರುವ ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಬರುವುದು ಸಾಮಾನ್ಯ, ಜ್ವರ ಕಂಡುಬಂದ ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲಾ ರೀತಿಯ ಜ್ವರಗಳು ಡೆಂಗ್ಯೂ ಜ್ವರಗಳಾಗಿರುವುದಿಲ್ಲ, ಆದ್ದರಿಂದ ಸಾರ್ವಜನಿಕರು ಡೆಂಗ್ಯೂ ಬಗ್ಗೆ ಆತಂಕ ಭಯ ಪಡುವ ಅಗತ್ಯ ಇಲ್ಲ ಎಂದು ಮನವಿ ಮಾಡಿದರು.

ಕಳೆದ ಜೂನ್ ಮಾಹೆಯಲ್ಲಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಟ್ಟು ೨೯೫೨೭೯ ಮನೆಗಳಿದ್ದು ಎಲ್ಲಾ ಮನೆಗಳ ಲಾರ್ವಾ ಸರ್ವೆ ಮಾಡಲಾಗಿದೆ, ಅದರಲ್ಲಿ ೧೪೭೧೮೦೭ ತಾಣಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಿ ೫೪೦೦ ಮನೆಗಳ ೬೩೭೩ ತಾಣಗಳಲ್ಲಿ ಲಾರ್ವಾ ಕಂಡುಬಂದಿದ್ದು ನಿರ್ಮೂಲನೆ ಮಾಡಲಾಗಿದೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ಷಿಪ್ರ ತಂಡವನ್ನು ರಚಿಸಿಕೊಂಡು ಜ್ವರ ಕಂಡುಬಂದ ಹಳ್ಳಿಗಳಿಗೆ ತಕ್ಷಣವೇ ಭೇಟಿನೀಡಿ ಮುಂಜಾಗ್ರತಾ ಮತ್ತು ನಿಯಂತ್ರಣಾ ಕ್ರಮಗಳ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ನಗರ ಮತ್ತು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ಕಂಡುಬಂದ ಪ್ರಕರಣಗಳ ವಾರ್ಡ್ ತೆರೆಯಲಾಗಿದೆ, ನಗರಸಭೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಧೂಮೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ಜನವರಿಯಿಂದ ಜುಲೈ ೩ ರವರೆಗೆ ೩೩೭೯ ಪ್ರಕರಣಗಳನ್ನು ಪರೀಕ್ಷೆ ಮಾಡಿ ಪತ್ತೆಹಚ್ಚಲಾಗಿದ್ದು, ಇದರಲ್ಲಿ ೫೨೧ ಪ್ರಕರಣಗಳು ಡೆಂಗ್ಯೂ ಜ್ವರ ದೃಢಪಟ್ಟಿದೆ, ೪೮೨ ರೋಗಿಗಳು ಗುಣಮುಖರಾಗಿ ಹೋಗಿದ್ದು, ಹಾಲಿ ೩೯ ಮಾತ್ರ ಡೆಂಗ್ಯೂ ಪ್ರಕರಣಗಳು ಇವೆ ಎಂದು ಹೇಳಿದರು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಮತ್ತು ಸೂಕ್ತ ಚಿಕಿತ್ಸೆಯ ಸೌಲಭ್ಯಗಳು ಲಭ್ಯವಿದ್ದು, ಸರ್ಕಾರ ನಿಗಧಿಪಡಿಸಿರುವಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆಯ ಶುಲ್ಕವನ್ನು ಮೀರಿ ಪಡೆದ ದೂರುಗಳು ಬಂದರೆ ಅಂತಹ ನರ್ಸಿಂಗ್ ಹೋಂಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು ಜಿಲ್ಲೆಯಲ್ಲಿ ಪರವಾನಗಿ ಪಡೆದ ಕ್ಲಿನಿಕ್, ಪಾಲಿ ಕ್ಲಿನಿಕ್, ನರ್ಸಿಂಗ್ ಹೋಂ ಸೇರಿ ೨೮೯ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಮೋಹನ್‌ಕುಮಾರ್, ಡಾ. ಬಾಲಕೃಷ್ಣ, ಡಾ. ಚಂದ್ರಶೇಖರ್, ಡಾ. ಶಶಿಕಲಾ, ಡಾ. ಗೀತಾ, ಲಲಿತಮ್ಮ ಉಪಸ್ಥಿತರಿದ್ದರು.

There is no need to worry about dengue fever

About Author

Leave a Reply

Your email address will not be published. Required fields are marked *

You may have missed