September 19, 2024

ಪ್ರವಾಸಿ ತಾಣಕ್ಕೆ ಆನ್‌ಲೈನ್ ನೊಂದಣಿ ಆದೇಶ ಹಿಂಪಡೆಯಲು ಒತ್ತಾಯ

0
ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸಂಚಾಲಕ ಗೌಸ್ ಮೊಹಿದ್ದೀನ್ ಪತ್ರಿಕಾಗೋಷ್ಠಿ

ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸಂಚಾಲಕ ಗೌಸ್ ಮೊಹಿದ್ದೀನ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಜಿಲ್ಲೆಯ ಗಿರಿಶ್ರೇಣಿಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಕಾಯ್ದಿರಿಸಬೇಕೆಂಬ ಜಿಲ್ಲಾಡಳಿತ ತೀರ್ಮಾನವನ್ನು ಹಿಂಪಡೆಯಬೇಕೆಂದು ಸಂವಿಧಾನ ಉಳಿವಿಗಾಗಿ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

ಸಮಿತಿಯ ರಾಜ್ಯ ಸಂಚಾಲಕ ಗೌಸ್ ಮೊಹಿದ್ದೀನ್ ಹಾಗೂ ಇತರ ಸಂಘಟನೆಗಳ ಮುಖಂಡರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಜಿಲ್ಲೆಯ ಎತ್ತಿನಭುಜ ಸೇರಿದಂತೆ ವಿವಿಧ ಗಿರಿಶ್ರೇಣಿಗಳಿಗೆ ಪ್ರವಾಸಿಗರು ಬರಲು ಆನ್‌ಲೈನ್ ಮೂಲಕ ಕಾಯ್ದಿರಿಸಬೇಕೆಂಬುದು ಜಿಲ್ಲಾಡಳಿತದ ಏಕ ಪಕ್ಷೀಯ ನಿರ್ಧಾರವಾಗಿದ್ದು, ಜಿಲ್ಲೆಗೆ ಪ್ರವಾಸಿಗರು ಬರದಂತೆ ತಡೆಯುವ ಉದ್ದೇಶವಾಗಿದೆ ಎಂದು ದೂರಿದರು.

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನೇಕ ಧಾರ್ಮಿಕ ಸ್ಥಳಗಳಿದ್ದು, ಆನ್‌ಲೈನ್ ಮೂಲಕ ನೋಂದಣಿ ಮಾಡುವ ನಿರ್ಧಾರದಿಂದ ಸ್ಥಳೀಯ ಭಕ್ತರಿಗೆ ತೊಂದರೆಯಾಗಲಿದೆ, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಜಿಲ್ಲೆಗೆ ಬರುವ ಪ್ರವಾಸಿಗರಿಂದ ಸಾಕಷ್ಟು ಹಣ ವಸೂಲಿ ಮಾಡಲಾಗುತ್ತಿದೆ. ಪ್ರವಾಸಿಗರ ಸುರಕ್ಷತೆಗಾಗಿ ರಕ್ಷಣಾ ಸಿಬ್ಬಂದಿ ನೇಮಕ, ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಮುಂತಾದ ಕಡೆಗೆ ಬರುವ ಪ್ರವಾಸಿಗರು ೫ ಲೀಟರ್ ನೀರಿನ ಕ್ಯಾನ್‌ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲಿಯನ್ನು ನಿಷೇಧಿಸಿರುವ ಕ್ರಮ ಪ್ರವಾಸಿಗರಿಗೆ ತೀವ್ರ ಅನಾನುಕೂಲವಾಗಿದೆ. ಎಲ್ಲರೂ ೫ ಲೀಟರ್ ನೀರಿನ ಬಾಟಲ್ ಕೊಂಡೊಯ್ಯಲು ಆಗುವುದಿಲ್ಲ. ಅವರವರಿಗೆ ಅಗತ್ಯವಿರುವಷ್ಟು ನೀರಿನ ಬಾಟಲಿ ಕೊಂಡೊಯ್ಯಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ಪ್ರವಾಸೋದ್ಯಮ ದೃಷ್ಟಿಯಿಂದ ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಜಿಲ್ಲಾಡಳಿತ, ಸ್ಥಳೀಯರು ಸಂಘ-ಸಂಸ್ಥೆಗಳ ಮುಖಂಡರು ರಾಜಕೀಯ ನಾಯಕರುಗಳೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬೇಕು. ಅದರ ಬದಲು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ದೂರಿದರು.

ಈ ಬಗ್ಗೆ ಮರು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹುಣಸೇಮಕ್ಕಿ ಲಕ್ಷ್ಮಣ, ಹೆಚ್.ಎಸ್ ಪುಟ್ಟಸ್ವಾಮಿ, ಟಿ.ಎಲ್ ಗಣೇಶ್, ಹಸನಬ್ಬ, ಮೋಹನ್ ಕುಮಾರ, ದೇವರಾಜ್, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.

Forced to withdraw online registration order for tourist destination

About Author

Leave a Reply

Your email address will not be published. Required fields are marked *

You may have missed