September 19, 2024

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆ

0
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ

ಚಿಕ್ಕಮಗಳೂರು:  ನಗರಸಭೆಯ ಸಾಮಾನ್ಯ ಸಭೆ ಆರಂಭವಾಗಿ ಸಭಾ ನಡವಳಿಯ ಎರಡು ವಿಚಾರ ಪ್ರಸ್ತಾಪಿಸಿ ೩ನೇ ವಿಷಯಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಅಧ್ಯಕ್ಷರು ಸಭೆಯನ್ನೇ ಬರಖಾಸ್ತು ಗೊಳಿಸಿದ ಅಪರೂಪದ ಘಟನೆಗೆ ಇಲ್ಲಿನ ನಗರಸಭೆಯಲ್ಲಿ ನಡೆಯಿತು.

ಇಂದು ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಈ ನಡುವೆ ಸದಸ್ಯ ಎ.ಸಿ.ಕುಮಾರೇಗೌಡ ಅವರು ಇಂದಿನ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯುವ ಎಲ್ಲ ವಿಷಯಗಳಿಗೂ ನಮ್ಮ ವಿರೋಧವಿದೆ. ಅನುಮೋದನೆ ಪಡೆಯಲು ಬಹುಮತ ಸಾಬೀತುಪಡಿಸಿ ಎಂದು ಅಧ್ಯಕ್ಷರನ್ನು ಆಗ್ರಹಿಸಿದರು.

ಇದಕ್ಕೆ ಪ್ರತಿಪಕ್ಷದ ಸದಸ್ಯರು ದನಿಗೂಡಿಸಿದರು. ಸಭೆ ತಮ್ಮ ಹಿಡಿತ ಕೈತಪ್ಪಿಹೋಗುತ್ತಿದೆ ಎಂದು ಭಾವಿಸಿದ ಅಧ್ಯಕ್ಷರು ಹೀಗೆ ಮುಂದುರಿಯಲು ಬಿಟ್ಟಲ್ಲಿ ನಮ್ಮ ಯಾವುದೇ ವಿಷಯಗಳಿಗೂ ಅನುಮೋದನೆ ದೊರೆಯುವುದು ಕಷ್ಟ ಎಂಬುದನ್ನು ಅರಿತ ಅಧ್ಯಕ್ಷ ವೇಣುಗೋಪಾಲ್, ಕೂಡಲೇ ಇಂದಿನ ಸಭೆಯಲ್ಲಿ ೧ ರಿಂದ ೬೮ ರವರೆಗಿನ ಎಲ್ಲ ವಿಷಯಗಳಿಗೆ ಅನುಮೋದನೆ ದೊರೆತಿದೆ. ಇಲ್ಲಿಗೆ ಸಭೆ ಮುಕ್ತಾಯವಾಗಲಿದೆ ಎಂದು ಘೋಷಿಸಿ ಹೊರನಡೆದರು.

ಇದರಿಂದ ಕುಪಿತರಾದ ಪ್ರತಿಪಕ್ಷದ ಸದಸ್ಯರು ನಗರಸಭೆ ಸಭಾಂಗಣದಲ್ಲೇ ಧರಣಿ ಕುಳಿತು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಅಧಿಕಾರಿ ವೆಂಕಟೇಶ್ ಅವರು ನಮ್ಮ ಜಿಲ್ಲೆ ಡೆಂಗ್ಯೂನಲ್ಲಿ ಎರಡನೆ ಸ್ಥಾನ ಪಡೆದಿದೆ, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಮಾಹಿತಿ ನೀಡಲಿದ್ದಾರೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡರು.

ಇದರಿಂದ ಅಸಮಾಧಾನಗೊಂಡ ಸದಸ್ಯ ಟಿ.ರಾಜಶೇಖರ, ಜಿಲ್ಲೆ ಮತ್ತು ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಡೆಂಗ್ಯೂ ನಿಯಂತ್ರಣ ಸಂಬಂಧ ಎಷ್ಟು ಸಭೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಮಾತನಾಡಿ, ಜೂನ್ ಮಾಹೆಯಿಂದ ಜುಲೈ ೧೦ ರವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ೪೮ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು,ಹೌಸಿಂಗ್ ಬೋರ್ಡ್‌ನಲ್ಲಿ ೭, ಕಲ್ಯಾಣ ನಗರದಲ್ಲಿ ೪, ವಿಜಯಪುರ ೩, ದಂಟರಮಕ್ಕಿ ೭, ಜ್ಯೋತಿನಗರ ೩, ಬಸವನಹಳ್ಳಿ ೧, ಗೌರಿಕಾಲುವೆ ೨, ನುರಾನಿ ಮಸೀದಿ ೨, ಹಿರೇಮಗಳೂರು ೪, ದೋಣಿಕಣ ೬, ಜಯನಗರ ೧, ಕ್ರಿಶ್ಚಿಯನ್ ಕಾಲೋನಿ ೪, ಶಂಕರಪುರ ೨, ಶಾಂತಿನಗರ ೨ ಒಟ್ಟು ೪೮ ಪ್ರಕರಣಗಳು ದೃಢಪಟ್ಟಿದೆ ಎಂದು ಸಭೆಗೆ ಮಾಹಿತಿ ನೀಡಿದರು

ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ೫ ಸಭೆಯನ್ನು ಡೆಂಗ್ಯೂ ಜಾಗೃತಿ ಬಗ್ಗೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಗಂಟೆ ಗಾಡಿಗಳು ೪ ದಿನವಾದರೂ ಕಸ ಸಂಗ್ರಹಿಸಲು ಬರುತ್ತಿಲ್ಲ, ಇದರಿಂದಲೇ ಡೆಂಗ್ಯೂ ಹೆಚ್ಚಳವಾಗಿದೆ ಎಂದು ಸದಸ್ಯರುಗಳಾದ ಶಾದಬ್ ಆಲಂ ಖಾನ್, ಲಕ್ಷ್ಮಣ ದೂರಿದರು.

ಕಸದ ಗಂಟೆ ಗಾಡಿಯವರು ಸರಿಯಾಗಿ ನಿರ್ವಹಣೆಮಾಡುತ್ತಿಲ್ಲ ಎಂದಾದಲ್ಲಿ ಅವರನ್ನು ಬದಲಾಯಿಸಿ ಬೇರೆಯವರಿಗೆ ಟೆಂಡರ್ ಕೊಡಿ ಅಥವಾ ನಗರಸಭೆಯವರೇ ನಿರ್ವಹಣೆ ಮಾಡಿ ಎಂದು ಟಿ.ರಾಜಶೇಖರ ಸಲಹೆ ನೀಡಿದರು. ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಒಮ್ಮತದಿಂದ ಈ ಬಗ್ಗೆ ಶೀಘ್ರ ಪರ್ಯಾಯ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದರು.

ಈ ಮಧ್ಯೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ ಅವರು ೨೪ ತಿಂಗಳಿಂದ ನಗರಸಭೆ ಅಧ್ಯಕ್ಷನಾಗಿ ಆಡಳಿತ ನಡೆಸಲು ಎಲ್ಲ ಸದಸ್ಯರು, ಜಿಲ್ಲೆಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಕೂಡ ಸಹಕರಿಸಿದ್ದಾರೆ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದರು.

ಈ ಮಧ್ಯೆ ಎ.ಸಿ.ಕುಮಾರೇಗೌಡ, ಅಧ್ಯಕ್ಷರು ಸಿಬ್ಬಂದಿ ಇಲ್ಲದಿದ್ದರೆ ತಾವೇ ಚರಂಡಿಗಿಳಿದು ಸ್ವಚ್ಛತೆ ಮಾಡಿದ್ದಾರೆ. ವಿರೋಧದ ನಡುವೆಯೂ ಕಾನೂನು ಬಾಹಿರವಾಗಿ ಫುಡ್‌ಕೋರ್ಟ್, ನಗರಸಭೆ ಉದ್ಯಾನವನ ನಿರ್ಮಿಸುತ್ತಿದ್ದಾರೆ. ನಗರಸಭೆ ಹಗರಣಗಳ ಬಗ್ಗೆ ಕೇಳಿದವರ ವಿರುದ್ಧ ಕೇಸು ಹಾಕಿಸಿದ್ದಾರೆ ಹೀಗಾಗಿ ಅವರಿಗೆ ಬೀಳ್ಕೊಡುಗೆ ನೀಡಿ ಅಭಿನಂಸಬೇಕು ಎಂದು ಕಾಲೆಳೆದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ್ ಉಪಸ್ಥಿತರಿದ್ದರು.

Protest against the chairman in the general meeting of the municipal council

About Author

Leave a Reply

Your email address will not be published. Required fields are marked *

You may have missed