September 19, 2024
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸುದ್ದಿಗೋಷ್ಠಿ

ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ನಿಯಮ ಬಾಹಿರವಾಗಿ ವಿತರಿಸಿರುವ ನಿವೇಶನ ಹಕ್ಕುಪತ್ರ ರದ್ದುಪಡಿಸಿ, ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ನಾಳೆ (ಜು.೧೨) ಮುಡಾ ಕಚೇರಿ ಮುತ್ತಿಗೆ ರಾಜ್ಯ ಬಿಜೆಪಿ ನಿರ್ಧರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಮುಡಾ ಮುತ್ತಿಗೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಇದೇ ತಿಂಗಳ ೧೫ ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ದಲಿತರಿಗೆ ಮುಡಾದಿಂದ ಆಗಿರುವ ವಂಚನೆ, ಮೋಸದ ವಿರುದ್ಧ ಚರ್ಚಿಸುತ್ತೇವೆ, ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಸಾಕ್ಷ್ಯಾಧಾರ ಸಮೇತವಾಗಿ ಆರೋಪ ಮಾಡಿದರೂ ಸಹ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ ನಡೆದಿದೆ. ರೈತರಿಗೊಂದು ನ್ಯಾಯ, ಮುಖ್ಯಮಂತ್ರಿಗಳಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ ಅವರು ಭ್ರಷ್ಟಾಚಾರವನ್ನು ಸಮರ್ಥಿಸುವ ಹೇಳಿಕೆ ನೀಡುತ್ತಿದ್ದಾರೆಂದು ಟೀಕಿಸಿದರು.

ಮನಲಜ್ಜೆ-ಜನಲಜ್ಜೆ ಈ ಎರಡನ್ನೂ ಬಿಟ್ಟ ಸರ್ಕಾರ ಎಸ್‌ಐಟಿ ನಿಯೋಜನೆ ಮಾಡಿ ತನಿಖೆ ಮಾಡುವುದಾಗಿ ಹೇಳುತ್ತಿದೆ, ಇದರಿಂದ ನ್ಯಾಯ ಸಿಗುವುದು ಕನಸಾಗಿದ್ದು, ಕೂಡಲೇ ಈ ಪ್ರಕರಣವನ್ನು ಸಿಬಿಐ ಗೆ ವಹಿಸಿ ಸಮಗ್ರ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ೧೩ ತಿಂಗಳಾಗಿದ್ದು ಆಡಳಿತವನ್ನು ಅವಲೋಕನ ಮಾಡಿದರೆ ಬೆಲೆ ಏರಿಕೆ, ಭ್ರಷ್ಟಾಚಾರ ಹೊರತುಪಡಿಸಿ ಇನ್ನಾವುದರ ಕಡೆಗೂ ಗಮನ ಕೊಟ್ಟಿಲ್ಲ, ಭ್ರಷ್ಟಾಚಾರವನ್ನು ನಿತ್ಯ ಕಾಯಕವನ್ನಾಗಿ ಮಾಡಿ ಖಜಾನೆ ಭರ್ತಿಗೆ ಬೆಲೆ ಏರಿಕೆ ಮಾಧ್ಯಮವನ್ನಾಗಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಪ್ರಮುಖ ಎರಡು ಹಗರಣಗಳು ಚರ್ಚೆಯಲ್ಲಿವೆ, ಪ.ಜಾ ವಾಲ್ಮೀಕಿ ನಿಗಮದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ೧೮೭ ಕೋಟಿ ರೂ ವರ್ಗಾವಣೆ ಮಾಡಿರುವ ಪ್ರಕರಣ ಒಂದಾದರೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾವಿರಾರು ಕೋಟಿ ರೂ ಬೆಲೆಬಾಳುವ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಮಾಡಿ, ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ ಸುಮಾರು ೫ ಸಾವಿರ ಕೋಟಿ ರೂ ಅಂದಾಜಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳು ಬುದ್ದಿವಂತಿಕೆ ಪ್ರದರ್ಶಿಸಿದ್ದಾರೆ. ಪ್ರಾಮಾಣಿಕತೆ ತೋರಿಸಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ೨೦೧೩ ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಫಿಡವಿಟ್ ಸಲ್ಲಿಸುವಾಗ ಈ ಸದರಿ ಜಮೀನಿನ ಉಲ್ಲೇಖವಿಲ್ಲ, ೨೦೧೮ ರಲ್ಲಿ ಉಲ್ಲೇಖ ಮಾಡಿ ಸಾರ್ವಜನಿಕ ಸ್ವತ್ತಿನ ಲೆಕ್ಕದಲ್ಲಿ ೨೫ ಲಕ್ಷ ರೂ ಎಂದು ಕೃಷಿಭೂಮಿ ಎಂದು ತೋರಿಸಿದ್ದಾರೆ. ೨೦೨೩ ರ ಚುನಾವಣೆಗೆ ೮ ಕೋಟಿಗೆ ಹೆಚ್ಚಳ ಮಾಡಲಾಗಿದೆ. ಈಗ ೬೦ ಕೋಟಿ ರೂ ಪರಿಹಾರ ಕೇಳುತ್ತಿದ್ದಾರೆ, ಇದು ಪ್ರಾಮಾಣಿಕವಾದುದ್ದಲ್ಲ, ನಿಜ ಸಮಾಜವಾದಿ ತಾತ್ವಿಕ ಒಳಗೊಂಡಿಲ್ಲ. ಭ್ರಷ್ಟಾಚಾರವನ್ನು ಬಂಡತನದಿಂದ ಸಮರ್ಥಿಸುತ್ತಿದ್ದಾರೆಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜು, ಜಿಲ್ಲಾ ವಕ್ತಾರ ಸೋಮಶೇಖರ್ ಉಪಸ್ಥಿತರಿದ್ದರು.

Muda office siege in Mysore today

About Author

Leave a Reply

Your email address will not be published. Required fields are marked *

You may have missed