September 8, 2024
ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳ ಜನ್ಮದಿನ

ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳ ಜನ್ಮದಿನ

ಚಿಕ್ಕಮಗಳೂರು:  ಛಲವಿದ್ದವರು ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಬಾಲಗಂಗಾಧರನಾಥ ಮಹಾ ಸ್ವಾಮಿಗಳು ಕೈಗೊಂಡ ಸಾಧನೆ ಸೂರ್ಯಚಂದ್ರರಿರುವತನಕ ಇರುತ್ತದೆ ಎಂದು ಅಂಧಮಕ್ಕಳ ಶಾಲೆಯ ಸಂಸ್ಥಾಪಕ ಹಾಗೂ ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ ಕೃಷ್ಣೇಗೌಡ ಅಭಿಪ್ರಾಯಿಸಿದರು.

ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಹಿಳಾ ಒಕ್ಕಲಿಗರ ಸಂಘ ಏರ್ಪಡಿಸಿದ್ದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳ ಜನ್ಮದಿನ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಮತ್ತು ಕಾರ್ಯಕ್ರಮದ ಅಂಗವಾಗಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಆದಿ ಎಂದರೆ ಜಗತ್ತಿನಲ್ಲೇ ಮೊದಲು ಎಂದರ್ಥ. ೨ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಆದಿಚುಂಚನಗಿರಿ ಮಠದ ಸ್ಥಾಪನೆಯಾಗಿದ್ದು, ಈಗ ಜಗದ್ವಿಖ್ಯಾತಿ ಹೊಂದಿದೆ ಎಂದು ತಿಳಿಸಿದರು.

ಪದ್ಮ ಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಈ ಮಠಕ್ಕೆ ೭೧ ನೇ ಸ್ವಾಮೀಜಿಯಾಗಿದ್ದರು. ೭೨ನೇ ಗುರುಗಳಾಗಿ ಡಾ. ಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಿರಿಯ ಶ್ರೀಗಳು ೪೭೦ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಅವರ ಕಾಲಮಾನದಲ್ಲಿ ಸ್ಥಾಪನೆ ಮಾಡಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ ಎಂದು ಹೇಳಿದರು.

ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ತಂದೆ ನರಸೇಗೌಡ, ತಾಯಿ ನಂಜಮ್ಮ ಎಂಬ ದಂಪತಿಗಳ ಮಗನಾಗಿ ೧೯೬೯ ರಲ್ಲಿ ಜನಿಸಿದ ನಿರ್ಮಲಾನಂದನಾಥ ಶ್ರೀಗಳು ದಂಪತಿಗಳಿಗೆ ಆರನೇ ಮಗನಾಗಿದ್ದು, ೨ ಎಕರೆ ಖುಷ್ಕಿ ಜಮೀನು ಹೊಂದಿದ್ದ ಬಡ ಕುಟುಂಬ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಪಡೆದ ನಂತರ ಏನು ಮಾಡುವುದು ಎಂಬ ಚಿಂತನೆಯಲ್ಲಿದ್ದಾಗ ಆಧ್ಯಾತ್ಮದೆಡೆಗೆ ಪ್ರಭಾವಿತರಾಗಿ ಸನ್ಯಾಸ ಸ್ವೀಕಾರ ಮಾಡುತ್ತಾರೆ. ನಂತರ ಬಾಲಗಂಗಾಧರನಾಥ ಶ್ರೀಗಳ ಜೊತೆ ೨೫ ವರ್ಷಗಳ ಕಾಲ ನಿರಂತರವಾಗಿ ಮಠದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದಾಗ ಬಾಲಗಂಗಾಧರನಾಥ ಶ್ರೀಗಳಿಗೆ ಆರೋಗ್ಯದಲ್ಲಿ ಏರುಪೇರಾಗಿ ಆ ಸಂದರ್ಭದಲ್ಲಿ ವಿಲ್ ಒಂದನ್ನು ಬರೆದಿಟ್ಟು ವಿವಿದೆಡೆ ೧೫ ಶಾಖಾ ಮಠಗಳನ್ನು ಸ್ಥಾಪನೆ ಮಾಡಿದ್ದರೆಂದು ಹೇಳಿದರು.

ಬಾಲಗಂಗಾಧರನಾಥ ಶ್ರೀಗಳು ಲಿಂಗೈಕ್ಯರಾದ ನಂತರ ವಿಲ್ ತೆರೆದು ನೋಡಿದಾಗ ನಿರ್ಮಲಾನಂದನಾಥ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವಂತೆ ಸೂಚಿಸಲಾಗಿರುತ್ತದೆ. ಧರ್ಮ ಮತ್ತು ಧಾರ್ಮಿಕತೆ ಒಟ್ಟಿಗೆ ಇರಬೇಕೆಂದು ಬಿಜಿಎಸ್ ಆಶಯವಾಗಿತ್ತು. ಅದರಂತೆ ಉತ್ತರಾಧಿಕಾರಿಯಾದ ಶ್ರೀಗಳು ನಡೆದುಕೊಂಡು ಬರುತ್ತಿದ್ದಾರೆಂದು ಬಣ್ಣಿಸಿದರು.

ಜನ, ಜಲ, ಜಂಗಲ್, ಜಮೀನು, ಜಾನುವಾರು ಇಟ್ಟುಕೊಂಡು ಬಾಲಗಂಗಾಧರನಾಥ ಶ್ರೀಗಳು ಅದ್ಭುತವಾದ ಸಾಧನೆ ಮಾಡಿ ಆದಿಚುಂಚನಗಿರಿ ಮಠ ಸ್ಥಾಪನೆ ಮಾಡಿದ್ದು, ಇಂದು ಕೋಟ್ಯಾಂತರ ಭಕ್ತರು ದೇಶ ವಿದೇಶಗಳಲ್ಲಿ ಇದ್ದಾರೆ. ಹಿಂದುವಾಗಿ ಜನಿಸಿದವರೆಲ್ಲ ಒಂದು ಬಾರಿಯಾದರು ಕಾಶಿ ವಿಶ್ವನಾಥನ ಸನ್ನಿಧಿಗೆ ಹೋಗಬೇಕು. ಅಲ್ಲಿಯೂ ಶಾಖಾ ಮಠ ಇದೆ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದಲ್ಲಿ ಪ್ರತಿನಿತ್ಯ ಅನ್ನದಾಸೋಹ ನಡೆಯುತ್ತಿದ್ದು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಗಂಗಾಧರೇಶ್ವರ, ಕಾಲಭೈರವೇಶ್ವರ, ಮಲ್ಲೇಶ್ವರ, ಗವಿಸಿದ್ದೇಶ್ವರ, ಸೋಮೇಶ್ವರ ಎಂಬ ೫ ದೇವಾಲಯಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಐದುನೂರು ವರ್ಷಗಳ ಹಿಂದೆ ಬೆಂಗಳೂರನ್ನು ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡರ ಜಯಂತಿ ಅರ್ಥಪೂರ್ಣ ಆಚರಣೆಯಾಗಿದೆ. ಸರ್ವ ಜನಾಂಗದವರಂತೆ ಒಕ್ಕಲಿಗರೂ ಕೂಡಿ ಬಾಳಬೇಕೆಂಬುದು ಕೆಂಪೇಗೌಡರ ಉದ್ದೇಶವಾಗಿತ್ತು ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಇಂದು ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಇದ್ದು ಇದನ್ನು ಮನಗಂಡು ಮಹಿಳಾ ಸಂಘ ಏರ್ಪಡಿಸಿರುವ ರಕ್ತದಾನ ಶಿಬಿರ ಮಹಾ ದಾನವಾಗಿ ರೋಗಿಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಂಘದ ಕಾರ್ಯದರ್ಶಿ ಅಮಿತ ವಿಜಯೇಂದ್ರ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ್‌ಗೌಡ, ನಿರ್ದೇಶಕರುಗಳಾದ ಟಿ.ಡಿ.ಮಲ್ಲೇಶ್, ಕಳವಾಸೆ ರವಿ, ರವೀಶ್, ರತೀಶ್, ಗಣೇಶ್, ಹೆಚ್.ಬಿ.ಲಕ್ಷ್ಮೀ, ಹೇಮಾಸುಧಾಕರ್, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಪಿ.ಸಿ ರಾಜೇಗೌಡ, ಮಹಿಳಾ ಸಂಘದ ಸಹ ಕಾರ್ಯದರ್ಶಿ ಕೋಮಲರವಿ, ನಿರ್ದೇಶಕರುಗಳಾದ ಚಂಪಾ ಜಗದೀಶ್, ರಾಜೇಶ್ವರಿ ಅಭಿಷೇಕ್, ವೇದ ಚಂದ್ರಶೇಖರ್, ಸುನೀತ ನವೀನ್, ಮಂಜುಳಾ ಹರೀಶ್, ತನುಜಾ ಸುರೇಶ್, ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕ ತೇಜೇಶ್‌ಮೂರ್ತಿ, ಶಾಲಾ ಮುಖ್ಯ ಶಿಕ್ಷಕ ವಿಜಿತ್, ಮಲ್ಲೆಗೌಡ ಆಸ್ಪತ್ರೆಯ ಮಧುರಾಜ್ ಮತ್ತಿತರರು ಭಾಗವಹಿಸಿದರು.

Dr. Birthday of Nirmalanandanath Maha Swami

About Author

Leave a Reply

Your email address will not be published. Required fields are marked *

You may have missed