September 7, 2024

ಕೇಂದ್ರ ಮುಂಗಡಪತ್ರ ರಾಜ್ಯಕ್ಕೆ ಮೂರು ನಾಮದ ಬಜೆಟ್

0
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಸುದ್ದಿಗೋಷ್ಠಿ

ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾಸೀತಾರಾಮನ್ ಅವರು ನೆನ್ನೆ ಮಂಡಿಸಿದ ಬಜೆಟ್ ರಾಜ್ಯಕ್ಕೆ ಮೂರು ನಾಮದ ಬಜೆಟ್ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ೧೫ ಮಂದಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದು, ಇಂದು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವದಲ್ಲಿದೆ. ಆದರೆ, ಕರ್ನಾಟಕವನ್ನು ಕಡೆಗಣಿಸಿ ಆಂದ್ರ ಮತ್ತು ಬಿಹಾರ ರಾಜ್ಯಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ಅನುದಾನ ಒದಗಿಸಿರುವುದು ಮಲತಾಯಿ ಧೋರಣೆಯಾಗಿದೆ ಎಂದು ಟೀಕಿಸಿದರು.

ಈ ಬಗ್ಗೆ ಎನ್‌ಡಿಎ ಮಿತ್ರ ಪಕ್ಷದ ನಾಯಕರು, ಸಂಸದರು, ಬಿಜೆಪಿ ಮುಖಂಡರಾಗಲಿ ತುಟಿ ಬಿಚ್ಚಿತ್ತಿಲ್ಲ. ಬದಲಿಗೆ ಬಜೆಟ್ ಗುಣಗಾನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ನೀಡಬೇಕಿದ್ದ ೫ ಸಾವಿರ ಕೋಟಿ ರೂ. ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಭದ್ರಾವತಿ ಎಂಎಸ್‌ಐಎಲ್ ಪುನರುಜ್ಜೀವನ, ಮೇಕೆದಾಟು, ನೀರಾವರಿ ಯೋಜನೆಗಳಿಗೆ ಹಣ ನೀಡದೆ ರಾಜ್ಯದ ಜನತೆಗೆ ಮೋಸ ಮಾಡಿರುವ ಬಜೆಟ್ ಆಗಿದೆ ಎಂದು ಆರೋಪಿಸಿದರು.

ಕರ್ನಾಟಕದಿಂದ ಆಯ್ಕೆಯಾಗಿ ರಾಜ್ಯ ಸಭೆಗೆ ಹೋಗಿರುವ ವಿತ್ತಸಚಿವೆ ನಿರ್ಮಲಾಸೀತರಾಮನ್ ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಇಲ್ಲದಿದ್ದರೆ ಅವರು ಆಂದ್ರ ಅಥವಾ ಬಿಹಾರದಿಂದಲೇ ಆರಿಸಿ ಹೋಗಲಿ ಎಂದು ಹೇಳಿದ ಅವರು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಿಪಡಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದರು.

ಅತಿವೃಷ್ಟಿ ಬೆಳೆನಷ್ಟ ಸಿಎಂ ಬಳಿಗೆ ನಿಯೋಗ: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಬೆಳೆಹಾನಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಜಿಲ್ಲೆಗೆ ಆಗಿರುವ ನಷ್ಟದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಜಿಲ್ಲೆಯ ಎಲ್ಲಾ ಶಾಸಕರುಗಳು ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ನಷ್ಟ ಪರಿಹಾರ ಭರ್ತಿ ಮಾಡಿಕೊಡಲು ಮನವಿ ಮಾಡಲಾಗುವುದು ಎಂದರು.

ಸರ್ಫೆಸಿ ಬಗ್ಗೆ ದನಿ ಎತ್ತದ ಸಂಸದ: ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಅವರು ಗೆದ್ದಲ್ಲಿ ಸರ್ಫೆಸಿ ಕಾಯಿದೆಯನ್ನು ಕೃಷಿ ವಲಯದಿಂದ ಹೊರಗಿಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗಿನ ಸಂಸದರು ಈ ಬಗ್ಗೆ ದನಿ ಎತ್ತುತ್ತಿಲ್ಲ. ಈಗಾಗಲೇ ೬ ಸಾವಿರ ರೈತರ ಜಮೀನು ಸರ್ಫೆಸಿ ಕಾಯಿದೆ ಅಡಿಯಲ್ಲಿ ಹರಾಜಿಗೆ ಬಂದಿವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಇಂದಾವರ ಲೋಕೇಶ್ ಗೋಷ್ಠಿಯಲ್ಲಿದ್ದರು.

Central Advance Three name budget for the state

 

About Author

Leave a Reply

Your email address will not be published. Required fields are marked *

You may have missed