September 7, 2024

ದತ್ತಪೀಠ ಅರ್ಚಕರಿಗೆ ನಿಯಮಾನುಸಾರ ವೇತನ ನಿಗಧಿಸಲು ಮುಜರಾಯಿ ಸಚಿವರ ಭರವಸೆ

0
ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ

ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ

ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನೇಮಕಗೊಂಡಿರುವ ಅರ್ಚಕರಿಗೆ ನಿಯಮಾನುಸಾರ ಪರಿಶೀಲಿಸಿ ವೇತನ ನಿಗಧಿಪಡಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಭರವಸೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಕಲಾಪದಲ್ಲಿ ನಡೆದ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ತಾನು ಈ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಾಗ, ಸಚಿವರು ಈ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ ಎಂದು ಗುರುವಾರ ಮಾಹಿತಿ ನೀಡಿದ್ದಾರೆ.

ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯು ಧಾರ್ಮಿಕ ದತ್ತಿ ಇಲಾಖೆಯ ‘ಎ’ ವರ್ಗದ ಸಂಯುಕ್ತ ಧಾರ್ಮಿಕ ಸಂಸ್ಥೆಯಾಗಿದ್ದು, ಹಲವು ಹೋರಾಟಗಳ ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಏಪ್ರಿಲ್ ೧, ೨೦೨೩ ರಂದು ದೇವಾಲಯಕ್ಕೆ ಅರ್ಚಕರ ನೇಮಕ ಆದಾಗಿನಿಂದ ಇಂದಿನವರೆಗೆ ಅರ್ಚಕರಿಗೆ ವೇತನ ನಿಗಧಿಪಡಿಸಿರುವುದಿಲ್ಲ.

ಈ ಬಗ್ಗೆ ಹಿಂದಿನ ಅಧಿವೇಶನದಲ್ಲಿ ಈ ವಿಷಯವನ್ನು ತಾನೇ ಪ್ರಸ್ತಾಪಿಸಿದ್ದಾಗ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಅರ್ಚಕರಿಗೆ ವೇತನ ನಿಗಧಿಪಡಿಸಲು ಕ್ರಮಕೈಗೊಳ್ಳಲಾಗುವುದೆಂದು ಇಲಾಖೆ ಸಚಿವರು ಲಿಖಿತ ಉತ್ತರದಲ್ಲಿ ಭರವಸೆ ನೀಡಿದ್ದರು. ಆದರೆ, ಇನ್ನೂ ಕಾರ್ಯಗತವಾಗಿಲ್ಲ ಎಂದು ತಾನು ಗಮನ ಸೆಳೆದಿದ್ದಾಗಿ ಹೇಳಿದ್ದಾರೆ.

ಅರ್ಚಕರು ಆರತಿ ತಟ್ಟೆಯಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಪಡೆಯುತ್ತಿರುವ ಕಾರಣ ಆರತಿ ತಟ್ಟೆಯ ಹಣದ ಜೊತೆಗೆ ವೇತನ ಶ್ರೇಣಿ ನಿಡಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾಗಳು ಸರ್ಕಾರಕ್ಕೆ ವರದಿ ನೀಡಿರುತ್ತಾರೆ. ಆದರೆ, ಈ ಹಿಂದೆ ನೇಮಕವಾಗಿರುವ ಮುಜಾವರ್‌ಗಳು ತಟ್ಟೆ ಕಾಸು ಪಡೆಯುತ್ತಿದ್ದರೂ ಅವರಿಗೆ ವೇತನ ನಿಗಧಿಪಡಿಸಿ ಪ್ರತಿ ತಿಂಗಳು ಪಾವತಿ ಮಾಡಲಾಗುತ್ತಿದೆ.

ಆದರೆ, ಅರ್ಚಕರಿಗೆ ಮಾತ್ರ ವೇತನ ನೀಡದಿರುವುದು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎನ್ನುವ ರೀತಿ ಆಗಿದೆ. ಅರ್ಚಕರಿಗೂ ವೇತನ ನಿಗದಿಸಿ ಪ್ರತಿ ತಿಂಗಳು ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಾನು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಸಚಿವರು ಈ ಲಿಖಿತ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.

ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ನಿಯಮ ೨೦೦೨ ರ ನಿಯಮ ೮(೨) (೧) ರನ್ವಯ ಅರ್ಚಕರು ತಟ್ಟೆ, ಕಾಸು ರೊಕ್ಕ ವೆಚ್ಚ ಮತ್ತು ಸೇವಾ ಕಮಿಷನ್ ಪಡೆಯಲು ನಿರಾಕರಿಸಿದ್ದಲ್ಲಿ ಅವರಿಗೆ ವೇತನವನ್ನು ವ್ಯವಸ್ಥಪನಾ ಸಮಿತಿ ನೇಮಿಸಲಾದ ಪ್ರಾಧಿಕಾರದಿಂದ ಅನುಮೋದನೆಗೆ ಒಳಪಟ್ಟು ಅವರು ಸ್ವೀಕರಿಸುವ ತಟ್ಟೆ ಕಾಸು ಮತ್ತು ಸೇವಾ ರುಸುಂ ಅನ್ನು ಗಮನದಲ್ಲಿರಿಸಿಕೊಂಡು ನಿಗಧಿಪಡಿಸಲು ಅವಕಾಶ ಇರುತ್ತದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ.

ಜೂನ ೨೭ ೨೦೨೪ ರಂದು ನಡೆದಿದ್ದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚಿಸಿ ಅರ್ಚಕರಿಗೆ ಮಾಸಿಕ ೯ ಸಾವಿರ ರೂ.ಗಳ ವೇತನ ನಿಗಧಿಪಡಿಸಲು ತೀರ್ಮಾನಿಸಿದ್ದು, ಅದರನ್ವಯ ಇಬ್ಬರು ಅರ್ಚಕರಿಗೆ ಮಾಸಿಕ ತಲಾ ೯ ಸಾವಿರ ರೂಪಾಯಿಗಳನ್ನು ನಿಗಧಿಪಡಿಸಿ ಸಂಸ್ಥೆಯ ನಿಧಿಯಿಂದ ಪಾವತಿಸಲು ಅನುಮತಿ ಕೋರಿದ್ದರ ಅನ್ವಯ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಅರ್ಚಕರಿಗೆ ತಲಾ ೯ ಸಾವಿರ ರೂ.ಗಳ ವೇತನ/ಸಂಭಾವನೆ ನಿಗಧಿಪಡಿಸಿ ಸಂಸ್ಥೆಯ ನಿಧಿಯಿಂದ ಪಾವತಿಸಲು ಅನುಮತಿ ನೀಡಲಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

Mujarai Minister’s promise to fix salary for Dattapeeth priests as per rules

About Author

Leave a Reply

Your email address will not be published. Required fields are marked *

You may have missed