September 8, 2024
ಸರ್ಕಾರ ವಿರುದ್ಧ ಬಹುಜನ ಸಮಾಜ ಪಕ್ಷ ಧರಣಿ

ಸರ್ಕಾರ ವಿರುದ್ಧ ಬಹುಜನ ಸಮಾಜ ಪಕ್ಷ ಧರಣಿ

ಚಿಕ್ಕಮಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ಬಹುಜನ ಸಮಾಜ ಪಕ್ಷ ನಗರದ ಅಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಶುಕ್ರವಾರ ಬೆಳಗ್ಗೆ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ ರಾಧಾಕೃಷ್ಣ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಎಸ್‌ಸಿ, ಎಸ್‌ಟಿ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ೩೨ ಸಾವಿರ ಕೋಟಿ ರೂಗಳನ್ನು ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದಾಗಿ ಹೇಳಿದೆ ಎಂದು ಆರೋಪಿಸಿದರು.

ಪ.ಜಾ, ಪ.ಪಂ ಗಳ ಜನಸಂಖ್ಯೆಗನುಗುಣವಾಗಿ ವಿವಿಧ ಯೋಜನೆಗಳ ಮೂಲಕ ಆರ್ಥಿಕ ಸಬಲರನ್ನಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ೨೦೧೩-೧೪ ರಲ್ಲಿ ರಾಜ್ಯಸರ್ಕಾರ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯನ್ನು ರೂಪಿಸಿ ಇದರಡಿಯಲ್ಲಿ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಮೀಸಲಿಡುವುದಕ್ಕಾಗಿ ಈ ಅಧಿನಿಯಮ ಅವಕಾಶ ಮಾಡಿಕೊಟ್ಟಿದೆ ಎಂದರು.

ಈ ಯೋಜನೆಯು ಪ.ಜಾ, ಪ.ಪಂ ಗಳ ಅಭಿವೃದ್ಧಿಗೆ ಪೂರಕವಾಗಿರುವುದೆಂದು ಆಶಾಭಾವನೆ ಉಂಟಾಗಿತ್ತು. ಆದರೆ ರಾಜ್ಯ ಸರ್ಕಾರದ ಅಧಿಕಾರವಧಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಈ ಅಧಿನಿಯಮದ ಆಶಯಗಳನ್ನು ಜಾರಿ ಮಾಡದೆ ಗಾಳಿಗೆ ತೂರಿರುವುದು ಖಂಡನೀಯ ಎಂದು ಹೇಳಿದರು.

ಕಳೆದ ೧೦ ವರ್ಷಗಳಲ್ಲಿ ೨, ೯೪, ೯೬೩ ಕೋಟಿ ರೂ ಹಣವನ್ನು ಈ ಉದ್ದೇಶಕ್ಕೆ ಮೀಸಲಿಡಲಾಗಿದ್ದು, ಆದರೆ ಈ ಪೈಕಿ ಕೇವಲ ಶೇ. ೧೦ ರಷ್ಟು ಹಣವನ್ನು ಈ ವರ್ಗದ ಜನರ ಅಭಿವೃದ್ಧಿಗೆ ವ್ಯಯ ಮಾಡದೆ ದ್ರೋಹವೆಸಗಿದೆ ಎಂದು ಆರೋಪಿಸಿದರು.

ಈ ಹಣದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಈ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗೆ ಬಿ.ಇ, ಎಂಬಿಬಿಎಸ್, ಪಿಹೆಚ್‌ಡಿ ವರೆಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡಬಹುದಿತ್ತು. ಲಕ್ಷಾಂತರ ಎಸ್‌ಸಿ, ಎಸ್‌ಟಿ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು ಪ್ರಸ್ತುತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಿಎಸ್‌ಪಿ ಕೈಗೆತ್ತಿಕೊಂಡು ಸರ್ಕಾರದ ಗಮನ ಸೆಳೆಯಲು ಇಂದಿನಿಂದ ಆಗಸ್ಟ್ ೧೪ ರವರೆಗೆ ಜನಜಾಗೃತಿ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಈ ಎಲ್ಲಾ ಅಂಶಗಳನ್ನು ರಾಜ್ಯಪಾಲರು ಮಧ್ಯ ಪ್ರವೇಶಿಸಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಲ್ಲಿ ರೂಪಿಸಿರುವ ಯೋಜನೆಗಳು ನೇರವಾಗಿ ಈ ಸಮುದಾಯ ತಲುಪುವಂತೆ ಮಾಡಬೇಕು ಹಾಗೂ ಈ ಮೀಸಲಿಟ್ಟ ಹಣವನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡುವವರ ವಿರುದ್ಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ ಸುಧಾ, ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್ ಅನಿಲ್ ಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ ರಾಜೇಗೌಡ, ಆಟೋ ಜಗದೀಶ್, ದಲಿತ ಸಂಘರ್ಷ ಸಮಿತಿಯ ಮುಖಂಡರುಗಳಾದ ಮರ್ಲೆ ಅಣ್ಣಯ್ಯ, ಹುಣಸೇಮಕ್ಕಿ ಲಕ್ಷ್ಮಣ, ಕುಮಾರ್, ಗಂಗಾಧರ್,ಪರಮೇಶ್ವರ್, ಪಿ.ಕೆ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

Bahujan Samaj Party strike against Govt

About Author

Leave a Reply

Your email address will not be published. Required fields are marked *

You may have missed