September 19, 2024

ಟೇಬಲ್ ಗುದ್ದಿ ರಾಜ್ಯದ ಪಾಲನ್ನು ತರುವ ಕೆಲಸ ಮಾಡಬೇಕು

0
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಭೆಯನ್ನು ನಡೆಸಿದ ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಸುದ್ದಿಗೋಷ್ಠಿ

ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಭೆಯನ್ನು ನಡೆಸಿದ ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕೇಂದ್ರಕ್ಕೆ ಆದಾಯ ಕೊಡುವುದರಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಿಂದ ಹೋಗಿರುವ ಎಲ್ಲಾ ಲೋಕಸಭಾ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು, ತಮ್ಮಲ್ಲಿ ತಾಕತ್ತು ಬೆಳೆಸಿಕೊಂಡು ಪ್ರಧಾನಿ ಎದುರು ಟೇಬಲ್ ಗುದ್ದಿ ನಮ್ಮ ರಾಜ್ಯದ ಪಾಲನ್ನು ತರುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವನ್ನು ತಿಳಿದುಕೊಳ್ಳಲು ಭಾನುವಾರ ನಗರಕ್ಕೆ ಆಗಮಿಸಿದ್ದ ಅವರು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಭೆಯನ್ನು ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಸರ್ಕಾರ ಮತ್ತು ಜನತೆಯ ಮಧ್ಯೆ ಪಕ್ಷ ಸೇತುವೆಯಾಗಿ ಕೆಲಸ ಮಾಡಲು ಸತ್ಯ ಶೋಧನಾ ಸಮಿತಿ ಪ್ರವಾಸ ಕೈಗೊಂಡಿದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣ ಏನು, ಪಕ್ಷ ಹೇಗೆ ಬಲಿಯುತಗೊಳಿಸಬೇಕು ಮತ್ತು ಜನತೆಯ ಸಮಸ್ಯೆಯನ್ನು ಪರಿಹಾರ ಮಾಡಲು ಜನತೆ ಮತ್ತು ಸರ್ಕಾರದ ನಡುವೆ ಪಕ್ಷ ಕೆಲಸ ಮಾಡಲು ಜಿಲ್ಲಾಮಟ್ಟದಲ್ಲಿ ಯಾವ ಸಲಹೆ ಸಿಗುತ್ತವೆ ಎಂಬುವ ಅನ್ವೇಷಣೆಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಸಮಿತಿಯನ್ನು ಮಾಡಿದ್ದಾರೆ ಎಂದರು.

ನೀತಿ ಆಯೋಗದ ಸಭೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಬರಬೇಕು ಎನ್ನುವ ಜವಬ್ದಾರಿ ಪ್ರಧಾನಿಯವರ ಮೇಲಿರುತ್ತದೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಆದರೆ, ನಂತರದಲ್ಲಿ ಅವರು ಈ ದೇಶದ ಪ್ರಧಾನಿ. ದೇಶ ಕಟ್ಟುವವರು ಬರೀ ಆಡಳಿತ ಪಕ್ಷದಲ್ಲಿದ್ದವರು ಅಲ್ಲ, ದೇಶದಲ್ಲಿ ಸಾಮರಸ್ಯ ಉಳಿಯಬೇಕಾದರೆ ಎಲ್ಲಾ ಪ್ರಗತಿಯಾಗಬೇಕಾದರೆ ಆಡಳಿತ ಮತ್ತು ಪ್ರತಿಪಕ್ಷಗಳ ಪಾತ್ರ ಸಮನಾಗಿರುತ್ತದೆ ಎಂದರು.

ಇದರಲ್ಲಿ ಪ್ರಧಾನಿಯವರು ವಿಫಲರಾಗಿದ್ದಾರೆ. ಬಜೆಟ್ ಕೊಡುವಲ್ಲೂ ತಾರತಮ್ಯ ಮಾಡಿದ್ದಾರೆ. ತಮ್ಮ ಸ್ವಾರ್ಥ ರಾಜಕಾರಣಗೋಸ್ಕರ ತಮಗೆ ಯಾರು ಬೆಂಬಲ ನೀಡಿದ್ದಾರೋ ಅವರಿಗೆ ಬೆಂಬಲವಾಗಿ ನಿಲ್ಲುವುದು ಶೋಭೆ ತರುವುದಲ್ಲ ಎಂದು ಹೇಳಿ, ದೇಶದಲ್ಲಿ ಬದ್ಧತೆಯ ಮೌಲ್ಯಯುತ ರಾಜಕಾರಣ ಹೆಚ್ಚಾಗಬೇಕು, ಅಧಿಕಾರದ ದಾಹದ ರಾಜಕಾರಣ ದೂರವಾಗಬೇಕು, ದ್ವೇಷ ರಾಜಕಾರಣ ದೂರವಾಗಬೇಕು ಎಂದು ಹೇಳಿದರು

ಸ್ಥಾನಮಾನ ಸಿಕ್ಕಿದ ಮೇಲೆ ಮತ್ಸದ್ಧಿ ರಾಜಕಾರಣ ಮಾಡಬೇಕು ಎಂದ ಉಗ್ರಪ್ಪ, ತಾತ್ವಿಕ ಸಿದ್ಧಾಂತದ ಮೇಲೆ ರಾಜಕಾರಣ ನಡೆಯಬೇಕು. ಈ ಹಿಂದೆ ಎ.ಬಿ. ವಾಜಪೇಯಿ ಸೇರಿದಂತೆ ಯಾವ ಪ್ರಧಾನಿಯೂ ಕೂಡ ಬೇರೆಯವರನ್ನು ಶತ್ರುಗಳಂತೆ ನೋಡುತ್ತಿರಲಿಲ್ಲ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದಿನ ಕೇಂದ್ರ ಬಜೆಟ್‌ನಲ್ಲಿ ೫೫೦೦ ಕೋಟಿ ರುಪಾಯಿ ಇಟ್ಟಿತ್ತು. ಆದರೆ, ಈವರೆಗೆ ಒಂದು ರೂಪಾಯಿ ಬರಲಿಲ್ಲ, ಈ ಬಾರಿಯ ಬಜೆಟ್‌ನಲ್ಲಿ ಯಾಕೇ ರಿಪೀಟ್ ಮಾಡಿಲ್ಲ, ಈ ದೇಶದ ನಾಯಕತ್ವ ವಹಿಸಿರುವ ಪ್ರಧಾನಿಯವರು ಗ್ರಾಮ ಪಂಚಾಯ್ತಿ ಮಟ್ಟದ ರಾಜಕಾರಣದಂತೆ ನಡೆದುಕೊಳ್ಳುತ್ತಿರುವುದು ಈ ದೇಶದ ದೌರ್ಭಾಗ್ಯ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಚ್.ಡಿ. ತಮ್ಮಯ್ಯ, ಜಿ.ಎಚ್. ಶ್ರೀನಿವಾಸ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಜಿಲ್ಲಾ ವಕ್ತಾರ ರೂಬಿನ್ ಮೋಸಸ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿಪಂ ಮಾಜಿ ಸದಸ್ಯರಾದ ಸವಿತಾ ರಮೇಶ್, ಸುಬ್ರಹ್ಮಣ್ಯ ಇದ್ದರು.

Table punching should work to bring the share of the state

About Author

Leave a Reply

Your email address will not be published. Required fields are marked *

You may have missed