September 19, 2024

ಆ.೭ಕ್ಕೆ ದಲಿತ ಸಂಘರ್ಷ ಸಮಿತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ

0
ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ಎಲ್.ಎಸ್ ಶ್ರೀಕಾಂತ್ ಸುದ್ದಿಗೋಷ್ಠಿ

ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ಎಲ್.ಎಸ್ ಶ್ರೀಕಾಂತ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಆದೇಶಿಸಬೇಕು ಜೊತೆಗೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಆಗ್ರಹಿಸಿ ಆ.೭ ರಂದು ಬೆಂಗಳೂರಿನ ಮಿಲ್ಲರ್‍ಸ್ ರಸ್ತೆಯಲ್ಲಿರುವ ವಸಂತ ನಗರ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ದಲಿತ ಚಳುವಳಿಗೆ ೫೦ ವರ್ಷಗಳ ಸಂಭ್ರಮೋತ್ಸವ, ಬೆಂಗಳೂರು ಚಲೋ ಕಾರ್ಯಕ್ರಮ ನಡೆಯಲಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ಎಲ್.ಎಸ್ ಶ್ರೀಕಾಂತ್ ಅವರು ಈ ಕಾರ್ಯಕ್ರಮವನ್ನು ನಾಡೋಜ ಪ್ರಗತಿಪರ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಚಿವರುಗಳಾದ ಸತೀಶ್ ಜಾರಕಿಹೊಳಿ, ಡಾ. ಹೆಚ್.ಸಿ ಮಹದೇವಪ್ಪ, ಕೆ.ಹೆಚ್ ಮುನಿಯಪ್ಪ, ಎನ್.ಎಸ್ ಬೋಸರಾಜು, ಮಧುಬಂಗಾರಪ್ಪ, ಶಾಸಕರಾದ ರಿಜ್ವನ್ ಅರ್ಷದ್, ಮುಂಡರಗಿ ನಾಗರಾಜ್, ಸಿ.ಎಸ್ ದ್ವಾರಕನಾಥ್, ಮತ್ತಿತರರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ವಹಿಸಲಿದ್ದು, ದಲಿತ ಚಳುವಳಿಯ ೫೦ ವರ್ಷಗಳ ಸಂಭ್ರಮವನ್ನು ಆಚರಿಸುವ ನಿಟ್ಟಿನಲ್ಲಿ ಅಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ನೀಡಿರುವ ವರದಿಯನ್ನು ಅಂಗೀಕಾರ ಮಾಡಿರುವ ರಾಜ್ಯ ಸರ್ಕಾರ ಆಂಧ್ರ ಮತ್ತು ತಮಿಳುನಾಡು ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು. ಪ.ಜಾ, ಪ.ಪಂ ಅಭಿವೃದ್ಧಿಗಾಗಿ ಮೀಸಲಿರಿಸಿದ ೩೯ ಸಾವಿರ ಕೋಟಿ ರೂ ಹಣದಲ್ಲಿ ಎಲ್ಲಾ ಅಭಿವೃದ್ಧಿ ನಿಗಮಗಳಿಗೆ ತಲಾ ೧ ಸಾವಿರ ಕೋಟಿ ರೂ ಹಣವನ್ನು ನೀಡಬೇಕೆಂದು ಒತ್ತಾಯಿಸಲಾಗುವುದೆಂದರು.

೨೦೨೪-೨೫ ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ಮೀಸಲಿರಿಸಿದ ಹಣದಲ್ಲಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾದ ೨೫ ಸಾವಿರ ಕೋಟಿ ರೂ ಹಣವನ್ನು ಹಿಂತಿರುಗಿಸಬೇಕು, ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯಿದೆಯ ೭(ಡಿ) ರದ್ದುಗೊಳಿಸಿದಂತೆ ೭(ಸಿ)ನ್ನೂ ರದ್ದುಗೊಳಿಸಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡರುಗಳಾದ ಎನ್.ಆರ್ ಪುರ ಡಿ.ರಾಮು, ಪರಮೇಶ್ ನಾಯಕ್, ಟಿ.ಮಂಜಪ್ಪ, ಲೋಕೇಶ್, ಜಾರ್ಜ್ ಉಪಸ್ಥಿತರಿದ್ದರು.

Bengaluru Chalo program by Dalit Sangharsh Samiti on August 7

About Author

Leave a Reply

Your email address will not be published. Required fields are marked *

You may have missed