September 20, 2024

ಎನ್‌ಡಿಎ ಸರ್ಕಾರದಿಂದ ರಾಜ್ಯಸರ್ಕಾರ ಉರುಳಿಸುವ ಷಡ್ಯಂತ್ರ

0
ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್ ಸುದ್ದಿಗೋಷ್ಠಿ

ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಪಾಲರಿಗೆ ನಿರ್ದೇಶನ ನೀಡಿ ನೋಟೀಸ್ ನೀಡುವ ಸಂಚು ನಡೆಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್ ಆರೋಪಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲಾ ವರ್ಗದ ನಾಯಕರಾಗಿ ರಾಜ್ಯದಲ್ಲಿ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ನಡೆಸಬೇಕೆಂಬ ಉದ್ದೇಶದಿಂದ ೧೩೬ ಸ್ಥಾನಗಳನ್ನು ನೀಡುವ ಮೂಲಕ ಜನಾದೇಶ ನೀಡಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯಪಾಲರನ್ನು ಬಳಿಸಿಕೊಂಡು ರಾಜ್ಯಸರ್ಕಾರವನ್ನು ಉರುಳಿಸುವ ಷಡ್ಯಂತ್ರ ನಡೆಸಿದ್ದಾರೆಂದು ಟೀಕಿಸಿದರು.

ರಾಜ್ಯಪಾಲರು ನೋಟೀಸ್ ನೀಡಿರುವುದು ಕಾನೂನು ಬಾಹಿರವಾಗಿದ್ದು, ಅದಕ್ಕಾಗಿ ಮುಖ್ಯಮಂತ್ರಿಯವರ ಕ್ಷಮೆ ಕೇಳುವ ಜೊತೆಗೆ ನೋಟೀಸ್ ಹಿಂಪಡೆಯಬೇಕೆಂದು ಒತ್ತಾಯಿಸಿದ ಅವರು ರಾಜ್ಯಾಂಗದ ಮುಖ್ಯಸ್ಥರಾದ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಏಜೆಂಟರಂತೆ ಬಳಸಿಕೊಳ್ಳುತ್ತಿರುವುದನ್ನು ಖಂಡಿಸಿದರು.

ರಾಜ್ಯದಲ್ಲಿ ಎಲ್ಲಾ ಜನರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ತರುವ ಮೂಲಕ ಒಳ್ಳೆಯ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಡೀ ರಾಜ್ಯದ ಬೆಂಬಲವಿದೆ. ಇದಕ್ಕಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಪಕ್ಷದ ಎಲ್ಲಾ ಘಟಕಗಳು ಬೆಂಬಲಿಸಲಿವೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ದೃತಿಗೆಡಬಾರದೆಂದು ಹೇಳಿದರು.

ಈ ರಾಜ್ಯ ಹಾಗೂ ಪಕ್ಕದ ರಾಜ್ಯ ಸೇರಿದಂತೆ ಪ್ರವಾಹದಲ್ಲಿ ಮುಳುಗಿರುವ ಜನರು ಅತ್ಯಂತ ಸಂಕಷ್ಟದಲ್ಲಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸರ್ಕಾರದ ಎಲ್ಲಾ ಸಚಿವರು, ಶಾಸಕರು ಅತೀವೃಷ್ಟಿ ಹಾನಿ ಸಂತ್ರಸ್ಥರಿಗೆ ಸ್ಪಂದಿಸುತ್ತಿದ್ದಾರೆ. ಈಗಾಗಲೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿನೀಡಲಾಗುತ್ತಿದೆ. ಈ ಜಿಲ್ಲೆಯಲ್ಲಿಯೂ ಸಹ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರು ಸಂತ್ರಸ್ಥರನ್ನು ಭೇಟಿಮಾಡಿ ಸಾಂತ್ವಾನ ಹೇಳುತ್ತ ಸ್ಪಂದಿಸುತ್ತಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಖಾಹುಲಿಯಪ್ಪಗೌಡ ಮಾತನಾಡಿ, ದೇಶದಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಪರಿಹಾರ ಕ್ರಮ ಕೈಗೊಳ್ಳುವ ಬದಲು ಬಿಜೆಪಿ ರಾಜಕೀಯ ಆರೋಪ ಮಾಡುತ್ತಿರುವುದನ್ನು ಖಂಡಿಸಿದರಲ್ಲದೆ ರಾಜ್ಯದ ದಿಟ್ಟ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿರುವುದನ್ನು ಖಂಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಡಿ.ಸಿ ಪುಟ್ಟೇಗೌಡ, ಸಂತೋಷ್ ಲಕ್ಯಾ, ಸಿ.ಎನ್ ಅಕ್ಮಲ್, ಸಣ್ಣಪ್ಪ ಉಪಸ್ಥಿತರಿದ್ದರು.

A conspiracy to topple the state government by the NDA government

About Author

Leave a Reply

Your email address will not be published. Required fields are marked *