September 20, 2024

ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟ್‌ಗಳನ್ನು ಬಂದ್ ಮಾಡಿಸಿ

0
ಅಮ್‌ಆದ್ಮಿ ಪಕ್ಷದ ಕಾಫಿಬೆಳೆ ಘಟಕದ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ಸುದ್ದಿಗೋಷ್ಠಿ

ಅಮ್‌ಆದ್ಮಿ ಪಕ್ಷದ ಕಾಫಿಬೆಳೆ ಘಟಕದ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಜಿಲ್ಲೆಯ ಗಿರಿ ಶ್ರೇಣಿಯಲ್ಲಿ ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟ್‌ಗಳನ್ನು ಬಂದ್ ಮಾಡಿಸಿ ಪರಿಸರ ಉಳಿಸುವಂತೆ ಆಮ್‌ಆದ್ಮಿ ಪಕ್ಷ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಮ್‌ಆದ್ಮಿ ಪಕ್ಷದ ಕಾಫಿಬೆಳೆ ಘಟಕದ ರಾಜ್ಯಾಧ್ಯಕ್ಷ ಹೇಮಂತ್ ಕುಮಾರ್ ಅನಿಧಿಕೃತವಾಗಿ ನಡೆಯುತ್ತಿರುವ ಹೋಂಸ್ಟೇ, ರೆಸಾರ್ಟ್ ಹಾಗೂ ಅರಣ್ಯ ಕಡಿತಲೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿರುವುದಾಗಿ ತಿಳಿಸಿದರು.

ನಗರದ ಸುತ್ತಮುತ್ತ ಸೇರಿದಂತೆ ಗಿರಿ ಪ್ರದೇಶದಲ್ಲಿ ಅನಧಿಕೃತ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳು ನಕ್ಷತ್ರಗಳಂತೆ ತಲೆ ಎತ್ತಿರುವುದರಿಂದ ಪಕ್ಕದ ಕೇರಳ ರಾಜ್ಯದ ವಯನಾಡಿನಲ್ಲಿ ನಡೆದಿರುವ ಪ್ರಕೃತಿ ವಿಕೋಪದಂತಹ ಪರಿಸ್ಥಿತಿ ಜಿಲ್ಲೆಯಲ್ಲಿಯೂ ಉದ್ಭವಿಸಲಿದೆ ಎಂದು ಹೇಳಿದರು.

ಈಗಾಗಲೇ ಅತೀ ಹೆಚ್ಚು ಮಳೆಯಿಂದ ಜನರು ತತ್ತರಿಸಿದ್ದು, ಗಿರಿಶ್ರೇಣಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್‌ಗಳಿಂದಾಗಿ ಬೆಟ್ಟ ಕುಸಿಯುವ ಆತಂಕದಲ್ಲಿ ಜನರು ಜೀವನ ನಡೆಸುತ್ತಿದ್ದಾರೆಂದು ತಿಳಿಸಿದರು.

ತಕ್ಷಣ ಈ ಅನಧಿಕೃತ ಕಟ್ಟಡಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಿ ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಬೇಕೆಂದು ಆಗ್ರಹಿಸಿದ ಅವರು ಮಳೆಗಾಲದಲ್ಲಿ ಕಾಫಿ ತೋಟದ ಸಿಲ್ವರ್ ಮರಗಳನ್ನು ಅರಣ್ಯ ಇಲಾಖೆ ಅನುಮತಿ ನೀಡಿ ಮರ ಕಡಿತಲೆ ಮಾಡುತ್ತಿರುವುದರಿಂದ ಇದರ ಸಾಗಾಟದಿಂದಾಗಿ ರಸ್ತೆಗಳು ಹಾಳಾಗುತ್ತಿವೆ. ಆದ್ದರಿಂದ ಜಿಲ್ಲಾಡಳಿತ ಮಳೆಗಾಲ ಮುಗಿಯುವವರೆಗೆ ಮರ ಕಡಿತಲೆಗೆ ಅನುಮತಿ ನೀಡಬಾರದು ಎಂದು ಅರಣ್ಯ ಇಲಾಖೆಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು, ಏಲಕ್ಕಿ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ಶೇ. ೫೦ ರಷ್ಟು ಫಸಲು ಹಾನಿಯಾಗಿದ್ದು, ಇದರಿಂದ ಬೆಳೆಗಾರರು, ರೈತರು ಆತಂಕದಲ್ಲಿದ್ದು, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ವರದಿ ಸಿದ್ದಪಡಿಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಜಮೀಲ್ ಅಹಮದ್, ಮುಖಂಡರುಗಳಾದ ರಂಗನಾಥ್, ಅಂತೋಣಿ, ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Ban unauthorized homestays and resorts

About Author

Leave a Reply

Your email address will not be published. Required fields are marked *