September 20, 2024

ಮಾನವನ ಬದುಕು ದೀಪದಂತೆ ಪರಿಶುದ್ಧವಾಗಬೇಕು : ಶ್ರೀ ರಂಭಾಪುರಿ ಜಗದ್ಗುರುಗಳು

0
ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ತಪೋನೂಷ್ಠಾನ

ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ತಪೋನೂಷ್ಠಾನ

ಚಿಕ್ಕಮಗಳೂರು:  ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು) ಮನುಷ್ಯ ಜೀವನದಲ್ಲಿ ನೋವು ನಲಿವು ಪಾಪ ತಾಪ ಸುಖ ದು:ಖ ಯಾರನ್ನೂ ಬಿಟ್ಟಿಲ್ಲ. ಬಹಿರಂಗ ಸಂಪತ್ತು ಒಂದಿಲ್ಲ ಒಂದು ದಿನ ಮನುಷ್ಯನನ್ನು ಬಿಟ್ಟು ಹೋಗುತ್ತದೆ. ಮನುಷ್ಯ ಜಾಗೃತನಾಗಿ ಧರ್ಮ ಮಾರ್ಗದಲ್ಲಿ ನಡೆದರೆ ಮಾನವನ ಬದುಕು ದೀಪದಂತೆ ಪರಿಶುದ್ಧವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ತಪೋನೂಷ್ಠಾನ ಹಾಗೂ ಪುರಾಣ ಪ್ರವಚನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಆಧುನಿಕ ಯುಗದಲ್ಲಿ ಮನುಷ್ಯ ಯಂತ್ರದಂತೆ ದುಡಿಯುತ್ತಿದ್ದರೂ ಶಾಂತಿ ಸಮಾಧಾನಗಳಿಲ್ಲ. ಸತ್ಯ ಅಹಿಂಸಾದಿ ಮೌಲ್ಯಗಳನ್ನು ಕೇವಲ ಬೋಧನೆಗಾಗಿ ಮೀಸಲಿಡದೇ ಅವುಗಳ ಆಚರಣೆಯಿಂದ ಬದುಕು ಅರ್ಥಪೂರ್ಣವಾಗುತ್ತದೆ. ಧರ್ಮ ಮತ್ತು ಸಮಾಜವನ್ನು ಮನುಷ್ಯ ಮಾತ್ರ ಕಟ್ಟಬಲ್ಲ ಎಂದರು.

ಅದಕ್ಕಾಗಿ ಆತನಿಗೆ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ಸದ್ಗುಣಗಳ ಅವಶ್ಯಕತೆಯಿದೆ. ಶುದ್ಧವಾದ ನೀರು ರುಚಿಯಾದ ಆಹಾರ ಮತ್ತು ಜ್ಞಾನಿಗಳ ಒಳ್ಳೆಯ ನುಡಿಗಳೇ ಜೀವನದ ಸಂಪತ್ತು. ಕಾಯ ಮತ್ತು ಕಾಲದ ಹಿರಿಮೆಯನ್ನು ಅರಿತು ಬಾಳಿದರೆ ಜೀವನ ಉತ್ಕರ್ಷವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಭವ ಸಾಗರ ದಾಟಿ ದಡ ಸೇರಲು ಗುರು ಬೋಧಾಮೃತದ ಬೆಳಕು ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಜೀವನದ ವಿಕಾಸಕ್ಕೆ ಮತ್ತು ಉನ್ನತಿಗೆ ಅಡಿಪಾಯವಾಗಿವೆ ಎಂದರು.

ಶ್ರಾವಣ ಧರ್ಮ ಸಮಾರಂಭ ಉದ್ಘಾಟಿಸಿದ ಹುಮನಾಬಾದ್ ತಾಲೂಕಿನ ಹುಡಗಿ ಸಂಸ್ಥಾನ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಾನವನ ಬುದ್ದಿ ಶಕ್ತಿಗೆ ಸರಿ ಸಾಟಿ ಇನ್ನೊಂದಿಲ್ಲ. ಆಧ್ಯಾತ್ಮ ಪ್ರವೃತ್ತಿ, ನಡತೆ ಮತ್ತು ಧರ್ಮ ಸಾಧನೆ ಇವೆಲ್ಲವುಗಳಿಗೆ ಮನಸ್ಸು ಮುಖ್ಯ. ಅರಿವಿನ ಆದರ್ಶ ದಾರಿ ತೋರಿದವರಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದಲ್ಲಿ ಮೊದಲಿಗರು ಎಂದರು.

‘ಶ್ರೀ ಜಗದ್ಗುರು ರೇಣುಕ ವಿಜಯ’ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ್ ದೇವರು ಮಾತನಾಡಿ ಮನಸ್ಸು ಬುದ್ಧಿ ಮತ್ತು ಸದ್ವಿಚಾರಗಳು ಬೆಳೆದಾಗ ಜೀವನದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಅಧಿಕಾರದ ದಾಹ, ಸಂಪತ್ತು ಮತ್ತು ಅವಿವೇಕತನ ಮನುಷ್ಯನ ನಿಜವಾದ ಗುಣಗಳನ್ನು ದೂರ ಮಾಡುತ್ತವೆ. ಶ್ರೀ ಗುರುವಿನ ಜ್ಞಾನಾಮೃತದಿಂದ ಜೀವನ ಉನ್ನತಿಯಾಗುವುದರಲ್ಲಿ ಸಂಶಯವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಅದ್ಭುತವಾದ ಆಧ್ಯಾತ್ಮದ ನುಡಿಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಬೆಳಗಾಲಪೇಟೆಯ ಸಿದ್ಧಲಿಂಗಯ್ಯ ಹಿರೇಮಠ, ಶ್ರೀ ಪೀಠದ ಲೆಕ್ಕಾಧಿಕಾರಿ ಸಂಕಪ್ಪನವರ, ಮಠದ ಚಂದ್ರಶೇಖರ ಹಾಗೂ ಗುರುಕುಲದ ಎಲ್ಲ ಶಿವಯೋಗ ಸಾಧಕರು ಉಪಸ್ಥಿತರಿದ್ದರು.

ವಿಠಲಾಪುರ ಹಿರೇಮಠದ ಗಂಗಾಧರ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

Isthalinga Pooja Taponushthan of Shravan month at Rambhapuri Peetha

About Author

Leave a Reply

Your email address will not be published. Required fields are marked *