September 20, 2024

ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತರಾಗದೆ ಸೇವೆ ಸಲ್ಲಿಸುವ ಸಂಸ್ಕಾರವಂತರಾಗಬೇಕು

0
ನಗರದ ಬಸವನಹಳ್ಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೇವಾದಳ ಮತ್ತು ರಾಷ್ಟ್ರಧ್ವಜ ಮಾಹಿತಿ ಶಿಬಿರ

ನಗರದ ಬಸವನಹಳ್ಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೇವಾದಳ ಮತ್ತು ರಾಷ್ಟ್ರಧ್ವಜ ಮಾಹಿತಿ ಶಿಬಿರ

ಚಿಕ್ಕಮಗಳೂರು: ವಿದ್ಯಾರ್ಥಿಗಳು ಕೇವಲ ಕಲಿಕೆಗಷ್ಟೇ ಸೀಮಿತವಾಗದೆ ಸಮಾಜದಲ್ಲಿ ಸೇವೆ ಸಲ್ಲಿಸುವ ಬಗ್ಗೆ ಸಂಸ್ಕಾರ ಕಲಿಯಬೇಕು. ಇದಕ್ಕೆ ಪೂರಕವಾಗಿ ಭಾರತ ಸೇವಾದಳ, ಎನ್‌ಎಸ್‌ಎಸ್, ಸ್ಕೌಟ್ & ಗೈಡ್ಸ್ ಕಾರ್ಯ ಶ್ಲಾಘನೀಯ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಪುಟ್ಟನಾಯ್ಕ ಅಭಿಪ್ರಾಯಿಸಿದರು.

ಅವರು ಇಂದು ನಗರದ ಬಸವನಹಳ್ಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸೇವಾದಳ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳಿಗೆ ಸೇವಾದಳ ಮತ್ತು ರಾಷ್ಟ್ರಧ್ವಜ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ಫಲಾಪೇಕ್ಷೆ ಇಲ್ಲದೆ ವ್ಯಕ್ತಿ ಮಾಡುವ ಕೆಲಸ ಕಾರ್ಯಗಳನ್ನು ಸೇವೆ ಎನ್ನುತ್ತೇವೆ. ಇದಕ್ಕೆ ಹಣ ಪಡೆದು ಮಾಡುವ ಕೆಲಸ ಸೇವೆ ಅನ್ನಿಸುವುದಿಲ್ಲ ಎಂದು ಹೇಳಿದರು.

ಸಮಾಜದಲ್ಲಿ ಬಹಳಷ್ಟು ಜನ ಅನೇಕ ತೊಂದರೆಗಳಿಂದ ಬಳಲುತ್ತಿದ್ದಾರೆ, ಅಪಘಾತ, ಆಸ್ಪತ್ರೆಗಳಿಗೆ ಹೋಗಲಾಗದ ಸ್ಥಿತಿ ಇಂತಹ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ ಎಂದು ವಿಷಾಧಿಸಿದ ಅವರು ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದಾಗ ಅವರು ಕೊಡುವ ಅಶೀರ್ವಾದ ಯಾವುದಕ್ಕೂ ಸಮವಾಗುವುದಿಲ್ಲ, ಆದ್ದರಿಂದ ಸಮಾಜದಲ್ಲಿ ಸೇವಾ ಮನೋಭಾವ ಎಲ್ಲರಲ್ಲಿ ಮೂಡಬೇಕಾಗಿರುವುದು ಅಗತ್ಯ ಎಂದರು.

ಸೇವೆ ಸಲ್ಲಿಸುವ ಕುರಿತು ಹಾಗೂ ಅದರ ಮಹತ್ವದ ಬಗ್ಗೆ ಇಂದು ಉಪನ್ಯಾಸಕರಿಗೆ ಆಯೋಜಿಸಿರುವ ಕಾರ್ಯಾಗಾರ ತುಂಬಾ ಉಪಯುಕ್ತವಾಗಿದ್ದು, ಈ ಮೂಲಕ ತಮ್ಮ ತಮ್ಮ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಸೇವೆ ಸಲ್ಲಿಸುವ ವಾತಾವರಣ ನಿರ್ಮಾಣವಾಗಲು ಸಹಕಾರಿಯಾಗಲಿ ಎಂದು ಹೇಳಿದರು.

ಮಾಜಿ ಶಾಸಕ ಹಾಗೂ ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಐ.ಬಿ ಶಂಕರ್ ಮಾತನಾಡಿ, ಶಿಸ್ತು ಪಾಲನೆಯಾದಾಗ ಮಾತ್ರ ಚಳುವಳಿಗಳು ಯಶಸ್ವಿಯಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಯುವಕರನ್ನು ಸಂಘಟಿಸಿ ಅವರಲ್ಲಿ ದೇಶಪ್ರೇಮ ಬಿತ್ತಿದಾಗ ಶಿಸ್ತು ತಾನಾಗೇ ಬರುವುದರ ಜೊತೆಗೆ ಹೆಚ್ಚು ಬೆಲೆ ಬರುತ್ತದೆ ಎಂದು ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.

ಸಮಾಜದಲ್ಲಿ ನೊಂದವರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದಾಗ ಅದರ ಹತ್ತುಪಟ್ಟು ಹೆಚ್ಚು ಭಗವಂತ ಕಲ್ಪಿಸುತ್ತಾನೆ. ಈ ನಿಟ್ಟಿನಲ್ಲಿ ಸೇವಾದಳ ಆಶಯಗಳನ್ನು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ನೀತಿ ಪಾಠ ಕಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಸಂಘಟಕ ಚಂದ್ರಕಾಂತ್ ಮಾತನಾಡಿ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯ ಕ್ವಿಟ್ ಇಂಡಿಯಾ ಚಳುವಳಿ ಮೊಳಗಿದ ಈ ದಿನ ಬಹಳ ಮಹತ್ವದ್ದಾಗಿದೆ. ಭಾರತ ಸ್ವತಂತ್ರ ಹೋರಾಟದಲ್ಲಿ ಭಾರತ ಸೇವಾದಳ ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳಿದರು.

೧೯೨೩ ರಲ್ಲಿ ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಜವಾಹರ್ ಲಾಲ್ ನೆಹರು ಅಧ್ಯಕ್ಷತೆಯಲ್ಲಿ, ನಾ.ಸು ಹರ್ಡೀಕರ್ ನೇತೃತ್ವದಲ್ಲಿ ಸ್ಥಾಪಿತವಾದ ಭಾರತ ಸೇವಾದಳ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆಯನ್ನು ದೇಶದ ಯುವಕರಲ್ಲಿ ತುಂಬುವ ಉದ್ದೇಶವಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಯು ಕಾಲೇಜಿನ ಪ್ರಾಂಶುಪಾಲ ಸತೀಶ್ ಶಾಸ್ತ್ರಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಪ ಪ್ರಾಂಶುಪಾಲರಾದ ಚಂದ್ರಮ್ಮ, ಸಂಪನ್ಮೂಲ ವ್ಯಕ್ತಿ ಕಿರಣ್ ಕುಮಾರ್, ಭಾರತ ಸೇವಾದಳದ ತಾಲ್ಲೂಕು ಉಪಾಧ್ಯಕ್ಷ ಕಾಳಯ್ಯ ಉಪಸ್ಥಿತರಿದ್ದರು.ಮೊದಲಿಗೆ ಶ್ರೀನಿವಾಸ್ ಸ್ವಾಗತಿಸಿ, ಲೋಕೇಶ್ವರಾಚಾರ್ ನಿರೂಪಿಸಿ, ಕೊನೆಯಲ್ಲಿ ಕಾಳಯ್ಯ ವಂದಿಸಿದರು.

Seva Dal and National Flag Information Camp

About Author

Leave a Reply

Your email address will not be published. Required fields are marked *