September 20, 2024

ಆ.೩೧ ರಂದು ಆಜಾದ್ ಪಾರ್ಕ್‌ನಲ್ಲಿ ಒತ್ತುವರಿ ಭೂಮಿಯನ್ನು ತೆರೆವು ವಿರೋಧಿಸಿ ಪ್ರತಿಭಟನೆ

0
ಕರ್ನಾಟಕ ಜನಶಕ್ತಿ ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಪತ್ರಿಕಾಗೋಷ್ಠಿ

ಕರ್ನಾಟಕ ಜನಶಕ್ತಿ ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ಬಡವರು ಮಾಡಿರುವ ಒತ್ತುವರಿ ಭೂಮಿಯನ್ನು ತೆರೆವುಗೊಳಿಸುತ್ತಿರುವ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಆ.೨೧ ರಂದು ನಗರದ ಆಜಾದ್ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರ್ನಾಟಕ ಜನಶಕ್ತಿ ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಒತ್ತುವರಿ ತೆರವು ವಿಷಯದಲ್ಲಿ ಬಡವರ ಬದುಕು ಕಿತ್ತುಕೊಳ್ಳಲು ಹೊರಟಿರುವ ಕ್ರಮವನ್ನು ಖಂಡಿಸಿ ಪರಿಸರ ಸಂರಕ್ಷಣೆ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಆದರೆ, ಒತ್ತುವರಿ ತೆರವು ನೆಪದಲ್ಲಿ ಬಡವರ ಭೂಮಿಯನ್ನು ಖುಲ್ಲಾಗೊಳಿಸುತ್ತಿರುವುದು ಖಂಡನೀಯ ಎಂದರು.

ಮೊದಲು ಜಿಲ್ಲಾ ಉಸ್ತುವಾರಿ ಸಚಿವರ ಒತ್ತುವರಿ ಬಿಡಿಸಿ ನಂತರ ಇತರೆ ಒತ್ತುವರಿ ಭೂಮಿ ತೆರವಿಗೆ ಅರಣ್ಯ ಇಲಾಖೆ ಮುಂದಾಗಲಿ ಎಂದು ಒತ್ತಾಯಿಸಿದ ಅವರು ವಯನಾಡು, ಶಿರೂರು ಗುಡ್ಡ ಕುಸಿತ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಡವರ ಒತ್ತುವರಿ ಭೂಮಿಯ ತೆರವು ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿದರು.

ದೊಡ್ಡ ಭೂಮಾಲೀಕರು ಮಾಡಿದ ಒತ್ತುವರಿ ಭೂಮಿಗೆ ಕೈಹಾಕುತ್ತಿಲ್ಲ. ಮೊದಲು ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಇತರೆ ದೊಡ್ಡ ಭೂಮಾಲೀಕರು ಮಾಡಿಕೊಂಡಿರುವ ಒತ್ತುವರಿ ಭೂಮಿಯನ್ನು ತೆರವು ಮಾಡಬೇಕು. ಬಡವರ ಒತ್ತುವರಿ ತೆರವು ವಿರೋಧಿಸಿ ಮತ್ತು ಭೂಮಿ ಇಲ್ಲದವರಿಗೆ ಭೂಮಿ ನೀಡುವಂತೆ ಆಗ್ರಹಿಸಿ ಅಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬಡವರು ಬದುಕಿಗಾಗಿ ೧-೨ ಎಕರೆ ಜಮೀನನ್ನು ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಯಾವುದೇ ತಿಳಿವಳಿಕೆ ನೀಡದೆ ದೀರ್ಘ ಕಾಲದಲ್ಲಿ ಬೆಳೆದಿದ್ದ ಕಾಫಿಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಡಿದು ಹಾಕಿದ್ದಾರೆ. ಇದರಿಂದ ಸಹಸ್ರಾರು ಕುಟುಂಬಗಳು ಬೀದಿಗೆ ಬರಲಿವೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಬಡವರ ಒತ್ತುವರಿ ಭೂಮಿಯನ್ನು ತೆರವು ಮಾಡುವ ಕಾರ್ಯ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಭೂಮಾಲೀಕರಿಗೆ ಮತ್ತೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲು ಹೊರಟಿರುವ ಸರಕಾರದ ಕ್ರಮ ಖಂಡನೀಯ.ಇದು ಮಲತಾಯಿ ಧೋರಣೆಯಾಗಿದೆ. ಪರಿಸರ ಹಾನಿಗೆ ಬಡವರು ಮಾಡಿರುವ ಒತ್ತುವರಿ ಕಾರಣವಲ್ಲ. ಸಾವಿರಾರು ಎಕರೆ ಒತ್ತುವರಿ ಮಾಡಿರುವ ಭೂಮಾಲೀಕರು, ಕಾರ್ಪೋರೇಟ್ ಕಂಪನಿಗಳು, ಗಣಿಕಾರಿಕೆಗಳು ಕಾರಣ ಎಂದು ದೂರಿದರು.

ಒಂದು ವೇಳೆ ಬಡವರು ಒತ್ತುವರಿ ಮಾಡಿದ ಭೂಮಿ ಅರಣ್ಯ ವ್ಯಾಪ್ತಿಗೆ ಬರುವುದಾದರೆ ಅದನ್ನು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅವರಿಗೆ ಸಕ್ರಮ ಮಾಡಿಕೊಡಬೇಕು. ಅರಣ್ಯ ಅಥವಾ ಕಂದಾಯ ಇಲಾಖೆ ಇನ್ನುಮುಂದೆ ಬಡವರ ಒತ್ತುವರಿ ಜಮೀನನ್ನುತೆರವು ಮಾಡಬಾರದು ಎಂದು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಎಚ್ಚರಿಕೆ ನೀಡಲು ಆ.೨೧ ರಂದು ಪ್ರತಿಭಟನೆ ನಡೆಸಲಿರುವುದಾಗಿ ಎಚ್ಚರಿಸಿದರು.

ಸಮಿತಿ ಗೌರವಾಧ್ಯಕ್ಷ ಗೌಸ್ ಮೊಯುದ್ದೀನ್ ಮಾತನಾಡಿ, ೪ ಎಕರೆ ಒಳಗೆ ಒತ್ತುವರಿ ಮಾಡಿರುವ ಬಡವರ ಒತ್ತುವರಿ ಭೂಮಿಯನ್ನು ತೆರವು ಮಾಡಬಾರದು. ಬಡವರ ಬದುಕು ಕಿತ್ತುಕೊಳ್ಳಬಾರದು ಎಂದರು. ಹುಣಸೇಮಕ್ಕಿ ಲಕ್ಷ್ಮಣ ಮಾತನಾಡಿ, ಭಾರಿ ಭೂಮಾಲೀಕರ ಒತ್ತುವರಿ ಭೂಮಿಯನ್ನು ಸರಕಾರ ಮೊದಲು ತೆರವುಗೊಳಿಸಲಿ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪುಟ್ಟಸ್ವಾಮಿ, ಟಿ.ಎಲ್ ಗಣೇಶ್, ಶೋಹೆಬ್, ಹಸನ್, ಮುನ್ನಾ ಇದ್ದರು.

On August 31 a protest was held in Azad Park against the opening of encroached land

About Author

Leave a Reply

Your email address will not be published. Required fields are marked *

You may have missed