September 19, 2024
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ೪.೩೮ ಎಕರೆ ಒಳಗಿನ ಬಡವರು ಮಾಡಿರುವ ಒತ್ತುವರಿ ಭೂಮಿಯನ್ನು ತೆರವುಗೊಳಿಸುವುದಿಲ್ಲ ಜೊತೆಗೆ ತೆರವುಗೊಳಿಸುವ ಅನಿವಾರ್ಯವಿದ್ದಲ್ಲಿ ಅಂತಹವರಿಗೆ ಪರ್ಯಾಯ ಭೂಮಿ ನೀಡಲು ಕ್ರಮ ವಹಿಸುವುದಾಗಿ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭರವಸೆ ನೀಡಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒತ್ತುವರಿಯಾಗಿದ್ದಲ್ಲಿ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಒತ್ತುವರಿ ಕಂಡುಬಂದರೆ ತೆರವುಗೊಳಿಸಲಿ ಎಂದ ಅವರು ಕಾಯ್ದಿರಿಸಿದ ಅರಣ್ಯದಲ್ಲಿನ ಒತ್ತುವರಿಯನ್ನು ನನ್ನ ಕುಟುಂಬದ ಒಡೆತನದಲ್ಲಿರುವ ಜಮೀನು ಒತ್ತುವರಿಯಾಗಿದ್ದರೆ ತೆರವುಗೊಳಿಸಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸುಪ್ರೀಂಕೋರ್ಟ್ ಆದೇಶ ದಂತೆ ಒತ್ತುವರಿ ತೆರವು ಮಾಡಲಾಗುತ್ತಿದೆ. ಮೂರು ಎಕರೆ ಒತ್ತುವರಿ ಜಮೀನು ಇದ್ದರೇ ತೆರವುಗೊಳಿಸುವುದಿಲ್ಲ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ತೆರವು ಮಾಡುವುದಾಗಿ ಅರಣ್ಯ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ನನ್ನ ತೋಟದಲ್ಲಿ ಒತ್ತುವರಿಯಾಗಿದ್ದರೆ ತೆರವುಗೊಳಿಸುವಂತೆ ಸಂಘಟನೆಗಳು ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಒತ್ತುವರಿ ಇದ್ದರೆ ನನ್ನ ತೋಟದಿಂದಲೇ ತೆರವು ಆರಂಭಿಸಲಿ, ಜಂಟಿಸರ್ವೆ ಮಾಡಿ ತೆರವು ಮಾಡಲಿ, ನಮ್ಮ ಜಮೀನಿನಲ್ಲಿ ಒತ್ತುವರಿ ಇದೆಯೇ ಗೊತ್ತಾಗಬೇಕಲ್ಲ. ಹಾಗಾಗೀ ಜಂಟಿ ಸರ್ವೇ ಮಾಡಲಿ, ಕಾನೂನು ಬಾಹಿರವಾಗಿ ಒತ್ತುವರಿ ಇದ್ದರೇ ಒತ್ತುವರಿ ತೆರವು ಮಾಡಲಿ ಎಂದು ತಿಳಿಸಿದರು.

ಗೃಹಜ್ಯೋತಿ ಗ್ಯಾರಂಟಿ ಯೋಜನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಅದರಲ್ಲಿ ಯಾವುದೇ ಪರಿಷ್ಕರಣೆ ಇಲ್ಲ. ಈ ಬಗ್ಗೆ ನಮ್ಮ ಇಲಾಖೆ ಮಟ್ಟದಲ್ಲಾಗಲಿ, ಸಚಿವ ಸಂಪುಟದಲ್ಲಾಗಲಿ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವು ಸಚಿವರು, ಶಾಸಕರು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಮಾತನಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳುತ್ತಾರೆ. ಅವರಿಗೆ ಹಕ್ಕಿದೆ. ಆದರೆ ಅದು ಸಚಿವ ಸಂಪುಟದಲ್ಲಿ ಬರಬೇಕು ಆರೀತಿ ಯಾವುದೂ ಆಗಿಲ್ಲ ಎಂದರು.

ಜಿಲ್ಲೆಯಲ್ಲಿ ಭೂ ಪರಿವರ್ತನೆ ಮಾಡಿ ಕಾಫಿತೋಟಗಳಲ್ಲಿ ಲೇಔಟ್‌ಗಳನ್ನು ನಿರ್ಮಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವ ದೂರುಗಳ ಬಗ್ಗೆ ಉತ್ತರಿಸಿದ ಸಚಿವರು, ಕಾಫಿ ತೋಟಗಳನ್ನು ತುಂಡು ಭೂಮಿ ಮಾಡಿ ಲೇಔಟ್ ನಿರ್ಮಿಸುವ ಕೆಲಸ ಆಗಬಾರದು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತನಾಡಿದ್ದೇನೆ ಎಂದರು.

ಈ ರೀತಿ ತುಂಡು ಭೂಮಿ ಮಾಡುವುದರಿಂದ ದೊಡ್ಡ ದೊಡ್ಡ ತೋಟಗಳಿಗೆ ಭೂ ಸುಧಾರಣೆ ಕಾಯ್ದೆಯಿಂದ ನೀಡಲಾದ ವಿನಾಯಿತಿಗಳು ರದ್ದಾಗುತ್ತದೆ. ಮತ್ತೆ ಅದನ್ನು ಸರ್ಕಾರದ ವಶಕ್ಕೆ ಪಡೆಯಲು ಅವಕಾಶ ಇರುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಇತ್ತಿಚೆಗೆ ಭೂಕುಸಿತಗಳು ನಡೆಯುತ್ತಿರುವುದನ್ನು ನೋಡಿದ್ದೇವೆ. ಆ ರೀತಿ ಪ್ರಕರಣಗಳು ಆಗಬಾರದು. ಪಶ್ಚಿಮ ಘಟ್ಟವನ್ನು ಉಳಿಸುವ ಕೆಲಸ ಆಗಬೇಕು. ಈ ಹಿನ್ನೆಲೆಯಲ್ಲಿ ತುಂಡು ಭೂಮಿಗೆ ಅವಕಾಶ ಕೊಡಬಾರದು ಎನ್ನುವುದು ನಮ್ಮ ಅಭಿಪ್ರಾಯ ಎಂದರು.

ಅರಣ್ಯದೊಳಗೆ ಮೊದಲನಿಂದಲೂ ರಸ್ತೆಗಳಿದ್ದರೆ ಅದನ್ನು ಮುಚ್ಚಬಾರದು. ಅಗಲೀಕರ ಇನ್ನಿತರೆ ಮಾಡಬಾರದು. ಆದರೆ ರಸ್ತೆಯೇ ಬೇಡ ಎಂದರೆ, ಇಲಾಖೆಯವರಾಗಲಿ, ಪ್ರವಾಸಿಗರಾಗಲು ತಿರುಗಾಡುವುದು ಹೇಗೆ? ಪ್ರವಾಸೋದ್ಯಮವನ್ನೂ ಉಳಿಸಿಕೊಳ್ಳಬೇಕಿದೆ ಎಂದರು.

ಸಚಿವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮಾತ್ರ ಹೇಳಿದ್ದಾರೆ ಎನ್ನುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೆಡಿಕಲ್ ಕಾಲೇಜು ಕಾಮಗಾರಿ ೨೦೧೩ ರಲ್ಲಿ ನಮ್ಮ ಸರ್ಕಾರ ಇದ್ದಾಗ ಆರಂಭವಾಗಿತ್ತು. ಸರ್ಕಾರ ನಮ್ಮ ಆಸ್ತಿಯೂ ಅಲ್ಲ. ಬಿಜೆಪಿಯದ್ದೂ ಅಲ್ಲ ಅದು ನಿರಂತರವಾಗಿ ಇರುತ್ತದೆ. ಕೇಂದ್ರ ಸರ್ಕಾರ ಕಾರ್ಯಕ್ರಮಕ್ಕೂ ರಾಜ್ಯದ ಸಹಕಾರ ಇರಬೇಕಾಗುತ್ತದೆ. ಮೊನ್ನೆ ನಾವೂ ಸಹ ಸಿಎಂ ಜೊತೆ ತೆರಳಿ ಕೇಂದ್ರ ಸಚಿವ ನಿತಿನ್‌ಗಡ್ಕರಿ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ಹೆದ್ದಾರಿ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದರು.

ನಾವು ಮಾಡಿದ ಗ್ಯಾರಂಟಿ ಯೋಜನೆಗಳನ್ನು ಅವರ ಜೀವಮಾನದಲ್ಲಿ ಮಾಡಲು ಆಗುವುದಿಲ್ಲ. ಸುಮ್ಮನಾದರೂ ಬಿಜೆಪಿಯವರು ರಾಜಕೀಯ ಭಾಷಣ ಮಾಡುತ್ತಾರೆ ಎಂದು ಆರೋಪಿಸಿದರು.

ಕೋರ್ಟ್‌ನಿಂದ ಆದೇಶ ಬಂದ ಪ್ರಕರಣಗಳಲ್ಲಿ ಮಾತ್ರ ಅರಣ್ಯ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಇದಲ್ಲದೆ ೩ ಎಕರೆ ವರೆಗಿನ ಅರಣ್ಯ ಒತ್ತುವರಿ ಮಾಡಿದವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟು ತೆರವು ಮಾಡಲಾಗುವುದು ಎಂದಿದ್ದಾರೆ ಎಂದರು.

The encroached land of the poor is not cleared

About Author

Leave a Reply

Your email address will not be published. Required fields are marked *

You may have missed