September 19, 2024

ಒತ್ತುವರಿ ತೆರವು ವಿರೋಧಿಸಿ ಕರೆ ನೀಡಿದ್ದ ಶೃಂಗೇರಿಕ್ಷೇತ್ರ ಬಂದ್ ಯಶಸ್ವಿ

0

ಚಿಕ್ಕಮಗಳೂರು: ಒತ್ತುವರಿ ತೆರವು ಸೇರಿದಂತೆ ರೈತ ವಿರೋಧಿ ಧೋರಣೆ ಖಂಡಿಸಿ ಶನಿವಾರ ಶೃಂಗೇರಿ ವಿಧಾನಸಭಾ ವ್ಯಾಪ್ತಿಯ ಮೂರು ತಾಲ್ಲೂಕುಗಳಾದ ಕೋಪ್ಪ, ಎನ್.ಆರ್.ಪರ ತಾಲೂಕುಗಳಲ್ಲಿ ನಡೆದ ಶನಿವಾರ ಬಂದ್ ಯಶಸ್ವಿಯಾಯಿತು.

ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲೂಕಿನಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆಯಿಂದ ಬಂದ್ ಗೆ ಕರೆ ನೀಡಲಾಗಿತ್ತು. ಸರ್ಕಾರದ ವಿರುದ್ದ ಮಲೆನಾಡಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ದ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರೆ, ಅರಣ್ಯ, ಕಂದಾಯ ಭೂಮಿ ಒತ್ತುವರಿ ತೆರವು ಪ್ರಕರಣವನ್ನು ಖಂಡಿಸಿ ಬಂದ್ ನಡೆಯಿತು.

ಅರಣ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನ ನಡೆದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಒತ್ತುವರಿ ತೆರವು ಅಸ್ತ್ರ ಪ್ರಯೋಗ ಮಾಡಿದರೆ ಬಡವರು ಬೀದಿಗೆ ಬೀಳಲಿದ್ದಾರೆ. ಹಾಗಾಗಿ ಇದರ ವಿರುದ್ಧ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಂದ್ ನಡೆಸಿದರು

ಒತ್ತುವರಿ ಸಮಸ್ಯೆ, ಸೆಕ್ಷನ್ ೪, ಡೀಮ್ಡ್ ಫಾರೆಸ್ಟ್ ಮತ್ತು ಸೊಪ್ಪಿನಬೆಟ್ಟ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮವಲಯ ಸೇರಿದಂತೆ ಹಲವು ಸಮಸ್ಯೆಗಳು ಮಲೆನಾಡಿಗರ ನಿದ್ದೆಗೆಡೆಸಿದೆ, ಈ ವಿಷಯಗಳನ್ನು ಮುಂದಿಟ್ಟು ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಪಕ್ಷಾತೀತವಾಗಿ ಶೃಂಗೇರಿ ಕ್ಷೇತ್ರ ಬಂದ್‌ಗೆ ಕರೆ ನೀಡಿದ್ದವು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎನ್.ಆರ್.ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಅರಣ್ಯ ಒತ್ತುವರಿ ಪ್ರಕರಣಗಳು ಇವೆ. ಮೂರು ಎಕರೆ ಒಳಗಿನ ಒತ್ತುವರಿದಾರರ ಸಂಖ್ಯೆಯೇ ಅಧಿಕವಾಗಿದೆ. ಒತ್ತುವರಿ ತೆರವುಗೊಳಿಸಿದರೆ ಮಲೆನಾಡಿನ ಜನರ ಜೀವನ ಅಸ್ತವ್ಯಸ್ತವಾಗಲಿದೆ. ಅದ್ದರಿಂದ ಬಂದ್‌ಗೆ ಎಲ್ಲಾ ವರ್ಗದ ಜನರು ಬೆಂಬಲ ಸೂಚಿಸಿದ್ದರು.

ಅಂಗಡಿ, ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತವಾಗಿ ವಹಿವಾಟು ಸ್ಥಗಿತಗೊಳಿಸಿದ್ದರು. ಬಸ್, ಆಟೋ, ಟ್ಯಾಕ್ಸಿಗಳ ಸಂಚಾರ ಇರಲಿಲ್ಲ, ಬೆಳಿಗ್ಗೆ ಶಾಲೆ, ಕಾಲೇಜ್‌ಗಳು ಓಪನ್ ಆಗಿದ್ದವು. ಆದರೆ, ನಂತರದಲ್ಲಿ ಮುಚ್ಚಿದವು. ಬ್ಯಾಂಕ್‌ಗಳು ಸಹ ಬಂದ್ ಆಗಿದ್ದವು. ಪೆಟ್ರೋಲ್ ಬಂಕ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಬಿಕೋ ವಾತಾವರಣ ಇತ್ತು.

ಇಲ್ಲಿನ ಪುರಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ರೈತರು, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಮೆರವಣಿಗೆಯ ಉದ್ದಕ್ಕೂ ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳು ಕೇಳಿ ಬರುತ್ತಿದ್ದವು. ಬಸ್ ನಿಲ್ದಾಣಕ್ಕೆ ಮೆರವಣಿಗೆ ತಲುಪಿದ ಬಳಿಕ ಪ್ರತಿಭಟನಾ ಸಭೆ ನಡೆಯಿತು.

ಅರಣ್ಯ ಮತ್ತು ಕಂದಾಯ ಭೂಮಿಯ ಬಗ್ಗೆ ಇಲಾಖೆಯಲ್ಲಿ ಗೊಂದಲವಿರುವ ಹೊತ್ತಲ್ಲಿ ಜಿ.ಪಿ.ಎಸ್ ಮೂಲಕ ಜಂಟಿ ಸರ್ವೆಗೆ ಮುಂದಾಗಿದ್ದಾರೆ. ಜಿ.ಪಿ.ಎಸ್ ಸರ್ವೆಯಲ್ಲಿಯೂ ಸಹ ಓವರ್‌ಲ್ಯಾಪ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಇಲಾಖೆಯ ಸರ್ವೆಗಳು ಚೈನ್ ಮೂಲಕ ಗಡಿ ಗುರುತು ಮಾಡುವುದರ ಮೂಲಕ ಸರ್ವೆ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು.

ಮೀಸಲು ಅರಣ್ಯ, ಡೀಮ್ಡ್ ಫಾರೆಸ್ಟ್, ಸೊಪ್ಪಿನ ಬೆಟ್ಟ, ಒತ್ತುವರಿ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ಪ್ರದೇಶ, ಹುಲಿ ಯೋಜನೆ ಹಾಗೂ ಇತರ ಮಲೆನಾಡ ನಿವಾಸಿಗಳ ವಿರುದ್ಧ ಸರ್ಕಾರ ಕಾನೂನು, ಕಾಯ್ದೆಗಳನ್ನು ರೂಪಿಸಿಕೊಂಡು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದೆ ಎಂದು ಮುಖಂಡರು ಹೇಳಿದರು.

ಸಮಾವೇಶದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕ ಡಿ.ಎನ್. ಜೀವರಾಜ್, ಜೆ.ಡಿ.ಎಸ್ ಮುಖಂಡ ಸುಧಾಕರ್ ಶೆಟ್ಟಿ, ಕಾಂಗ್ರೆಸ್, ಬಿಜೆಪಿ, ಜೆ.ಡಿ.ಎಸ್. ಕಾರ್ಯಕರ್ತರು ಪಾಲ್ಗೊಂಡಿದ್ದರು. ಎಲ್ಲರೂ ಒಂದಾಗಿ ಸೇರಿ ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಪ್ರಾಮಾಣಿಕವಾಗಿ ಹೋರಾಟದಲ್ಲಿ ಭಾಗವಹಿಸುವ ಪ್ರತಿಜ್ಞಾವಿಧಿಯೊಂದಿಗೆ ಬೋಧಿಸಲಾಯಿತು.

The Sringerikshetra bandh which was called against the eviction of the squatters was successful

 

About Author

Leave a Reply

Your email address will not be published. Required fields are marked *

You may have missed