September 19, 2024

ರೈತರ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳನ್ನು ತರಬೇಕು

0
ಕುರುವಂಗಿ ಗ್ರಾಮದಲ್ಲಿ ಹಿರೇಮಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯ ನೂತನ ಕಟ್ಟಡ ಉದ್ಘಾಟನೆ

ಕುರುವಂಗಿ ಗ್ರಾಮದಲ್ಲಿ ಹಿರೇಮಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯ ನೂತನ ಕಟ್ಟಡ ಉದ್ಘಾಟನೆ

ಚಿಕ್ಕಮಗಳೂರು: ಸಹಕಾರ ಸಂಘಗಳು ಹೆಚ್ಚು ಹೆಚ್ಚು ರೈತರಿಗೆ ಸಾಲದ ನೆರವು ಕೊಡುವ ಜೊತೆಗೆ ಪಿಗ್ಮಿ ಇನ್ನಿತರೆ ಬೇರೆ ಬೇರೆ ಹಣಕಾಸು ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ಅವರು ಭಾನುವಾರ ನಗರ ಸಮೀಪದ ಕುರುವಂಗಿ ಗ್ರಾಮದಲ್ಲಿ ಹಿರೇಮಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಜನರಿಂದ ಜನರಿಗಾಗಿ ಸಹಕಾರಿಗಳೆಲ್ಲಾ ಸೇರಿ ಸಹಕಾರ ಸಂಘ ಸ್ಥಾಪಿಸಿ ಕುರುವಂಗಿ ಶಾಖಾ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಹೆಚ್ಚು ರೈತರಿಗೆ ಅನುಕೂಲವಾದರೆ ನಮಗೂ ಸಮಾಧಾನ ಎಂದರು.

ಸಹಕಾರ ಸಂಘಗಳಲ್ಲಿ ಈಗ ೩ ಲಕ್ಷ ರೂ. ವರೆಗೆ ಕೃಷಿ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಕೃಷಿಕರು ಸ್ವಾಲಂಭಿಗಳಾಗಬೇಕು. ಸಾಲದ ಕಾರಣಕ್ಕೆ ಪರಾವಲಂಬಿಗಳಾಗಬಾರದು ಎನ್ನುವ ಹಿನ್ನೆಲೆಯಲ್ಲಿ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದರು.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ೩ ರೂ. ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆ ತಂದಿದ್ದರು. ಈಗ ಕೇಂದ್ರ ಸರ್ಕಾರವೇ ಬಡ್ಡಿ ರಹಿತವಾಗಿ ಸಾಲ ಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದರು.

ಭ್ರಷ್ಟಾಚಾರ, ಹಣದ ದುರುಪಯೋಗಕ್ಕೆ ಆಸ್ಪದ ಇಲ್ಲದೆ ನಿರ್ವಹಣೆ ಮಾಡುವ ಮೂಲಕ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.

ಸಂಘದ ನಿರ್ದೇಶಕ ಕೇಶವ ಮೂರ್ತಿ ಮಾತನಾಡಿ, ಕೇವಲ ಎರಡು ತಿಂಗಳಲ್ಲಿ ಸಂಘಕ್ಕೆ ಒಂದು ಕಟ್ಟಡ ನಿರ್ಮಿಸಲು ಹಲವರು ಸಹಕರಿಸಿದ್ದಾರೆ. ಇಷ್ಟು ದಿನ ನೀಡುತ್ತಿದ್ದ ಕಟ್ಟಡ ಬಾಡಿಗೆ ಉಳಿತಾಯವಾಗುತ್ತದೆ ಎಂದರು.

ಹಿಂದೆ ಸಂಘದ ಸುಮಾರು ೧ ಕೋಟಿಗೂ ಹೆಚ್ಚು ಹಣ ದುರುಪಯೋಗವಾಗಿತ್ತು. ಈ ಸಂಬಂಧ ಇಬ್ಬರಿಗೆ ಜೈಲು ಶಿಕ್ಷೆ ಆಗಿದ್ದೂ ಅಲ್ಲದೆ ದುರುಪಯೋಗಪಡಿಸಿಕೊಂಡಿದ್ದ ಹಣವನ್ನು ವಸೂಲು ಮಾಡಲಾಗುತ್ತಿದೆ. ಈಗಾಗಲೇ ೬೦ ಲಕ್ಷ ರೂ.ಗಳ ಸಾಲವನ್ನು ವಿತರಿಸಲಾಗಿದೆ. ಇನ್ನೂ ೪೦ ಲಕ್ಷ ರೂ. ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಹಕಾರ ಸಂಘದ ಅಧ್ಯಕ್ಷ ನೀಲಶೆಟ್ಟಿ ಮಾತನಾಡಿದರು. ಬಿಜೆಪಿ ಮುಖಂಡರುಗಳಾದ ಕಲ್ಮರುಡಪ್ಪ, ಕೆ.ಪಿ.ವೆಂಕಟೇಶ್, ನೆಟ್ಟೆಕರೆಹಳ್ಳಿ ಜಯಣ್ಣ ಸಹಕಾರ ಸಂಘದ ಉಪಾಧ್ಯಕ್ಷರಾದ ಸಿ.ಎನ್.ಸತೀಶ್, ನಿರ್ದೇಶಕರುಗಳಾದ ಎಂ.ಜಗದೀಶ್, ಹೆಚ್.ಎಂ.ಯೋಗೀಶ್, ಸಿ.ಎಲ್.ಲೋಕೇಶ್, ಹೆಚ್.ಕೆ.ಕೇಶವಮೂರ್ತಿ, ಹೆಚ್.ಸಿ.ಗಂಗಾಧರ್, ಎಂ.ಎನ್.ಮಲ್ಲುಂಡಪ್ಪ, ಗಂಗಮ್ಮ, ಕೆ.ಆರ್.ಜಯಲಕ್ಷ್ಮೀ, ಪವನ್‌ಕುಮಾರ್, ಮುಖ್ಯ ಕಾರ್ಯದರ್ಶಿ ಆಶ್ರಿಕ್, ಮಾರಾಟ ಗುಮಾಸ್ತರು ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

Complementary schemes should be brought for the empowerment of farmers

About Author

Leave a Reply

Your email address will not be published. Required fields are marked *

You may have missed