September 19, 2024

ಸಿಎಂ ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಲು ಬಿಜೆಪಿ-ಜೆಡಿಎಸ್ ಷಡ್ಯಂತ್ರ

0
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಖಂಡಿಸಿ ನಡೆದ ಪ್ರತಿಭಟನೆ

ಚಿಕ್ಕಮಗಳೂರು: ಸ್ವಚ್ಚ ರಾಜಕಾರಣಿ ಸಿಎಂ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸಲು ಬಿಜೆಪಿ-ಜೆಡಿಎಸ್ ಷಡ್ಯಂತ್ರ : ಗಾಯಿತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕಿ ಅಂಟಿಸಿಕೊಂಡಿಲ್ಲದಂತಹ ಸ್ವಚ್ಚ ರಾಜಕಾರಣಿಯನ್ನು ಅಧಿಕಾರದಿಂದ ಇಳಿಸಲು ರಾಜ್ಯಪಾಲರ ಮೂಲಕ ಬಿಜೆಪಿ-ಜೆಡಿಎಸ್ ಷಡ್ಯಂತ್ರ ಮಾಡುತ್ತಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಆರೋಪಿಸಿದರು.

ಅವರು ಇಂದು ಸಖರಾಯಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಬಾಹಿರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

೫ ಜನಪರ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ೧೩೬ ಸ್ಥಾನಗಳನ್ನು ನೀಡಿ ಜನಾದೇಶದ ಆಶೀರ್ವಾದದ ಮೇರೆಗೆ ಯಶಸ್ವಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರವನ್ನು ಸಹಿಸದೆ ವಿರೋಧ ಪಕ್ಷಗಳು ಕುತುಂತ್ರ ರಾಜಕಾರಣದಲ್ಲಿ ತೊಡಗಿವೆ ಎಂದು ಟೀಕಿಸಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಯೇತರ ಮುಖ್ಯಮಂತ್ರಿಗಳ ವಿರುದ್ಧ ಕೇಂದ್ರಸರ್ಕಾರ ಹಸ್ತಕ್ಷೇಪ ಮಾಡುತ್ತ ಪಿತೂರಿ ಮಾಡುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರು ಭಾಗಿಯಾಗಿಲ್ಲ. ಇವರ ಬಗ್ಗೆ ಆರೋಪ ಮಾಡಿರುವ ಬಿಜೆಪಿ-ಜೆಡಿಎಸ್ ನಡೆ ಕುರಿತು ರಾಜ್ಯದ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳು ಹಾಗೂ ಸಂವಿಧಾನದ ಆಶಯಗಳಿಗೆ ಪೂರಕವಾಗಿರುವ ಆಡಳಿತದಿಂದ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರಿಗೆ ಅವರ ಸಹೋದರ ಅರಿಶಿನ-ಕುಂಕುಮಕ್ಕೆ ಕೊಟ್ಟ ಉಡುಗೊರೆಯ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ, ಬಿ.ವೈ ವಿಜಯೇಂದ್ರ ಮತ್ತು ತಂಡ ಪ್ರಶ್ನೆ ಮಾಡುತ್ತಿದೆ ಎಂದು ದೂರಿದರು.

ಆರ್. ಅಶೋಕ್, ಸಿ.ಟಿ ರವಿ ಇಂದೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ, ನೀವೇನಾದರೂ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿದ್ದೀರಾ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಪಕ್ಷ, ಶಾಸಕರು, ಪಕ್ಷದ ಹಿರಿಯ ನಾಯಕರು ಮಾಡಿರುವುದರಿಂದ ಈ ನಿಮ್ಮ ಪಿತೂರಿಯ ವಿರುದ್ಧ ರಾಜ್ಯದ ಜನ ದಂಗೆ ಏಳುತ್ತಾರೆಂದು ಎಚ್ಚರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡಲು ಕೇಂದ್ರಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜ್ಯಪಾಲರ ಮೂಲಕ ಅಧಿಕಾರದಿಂದ ಇಳಿಸಲು ಸಂಚು ನಡೆಸುತ್ತಿದೆ ಎಂದು ಆರೋಪಿಸಿದರು.

ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಹಿಂದೆ ಶಾಸಕರಾಗಿದ್ದ ಸಿ.ಟಿ ರವಿಯವರ ಕೈವಾಡವಿದೆ ಎಂಬುದನ್ನು ಮರೆಮಾಚಲು ಈಗ ಸಿ.ಎಂ ಸಿದ್ದರಾಮಯ್ಯ ವಿರುದ್ಧ ರಾಜೀನಾಮೆ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.

ಅಸ್ತಿತ್ವದಲ್ಲೇ ಇಲ್ಲದ ಆಂಜನೇಯ ವಿದ್ಯಾಸಂಸ್ಥೆ ಟ್ರಸ್ಟ್ ಹೆಸರಿನಲ್ಲಿ ಸಿ.ಟಿ ರವಿ ಪತ್ನಿ ಹೆಸರಿಗೆ ೪ ನಿವೇಶನಗಳನ್ನು ಪಡೆದಿರುವುದು ಬಹಿರಂಗವಾಗಿದ್ದರೂ ತಾನು ಕಳ್ಳ, ಪರರ ನಂಬ ಎಂಬಂತೆ ಸಿ.ಟಿ ರವಿ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ೫೦ ವರ್ಷಗಳಿಂದ ರಾಜ್ಯದಲ್ಲಿ ಸ್ವಚ್ಚ, ಸಕ್ರಿಯ ರಾಜಕಾರಣ ಮಾಡುತ್ತಿರುವ ಏಕೈಕ ಮುಖ್ಯಮಂತ್ರಿಯಾಗಿದ್ದು, ರಾಜ್ಯಕಂಡ ಅಪರೂಪದ ನಾಯಕರಾಗಿದ್ದಾರೆ, ಕೇವಲ ಹಿಂದುಳಿದ ವರ್ಗದ ನಾಯಕರಲ್ಲ. ಎಲ್ಲಾ ವರ್ಗ, ಜಾತಿ, ಎಲ್ಲಾ ಧರ್ಮದ ನಾಯಕರಾಗಿ ಆಡಳಿತ ನಡೆಸುತ್ತಿದ್ದಾರೆಂದು ಶ್ಲಾಘಿಸಿದರು.

ರಾಜಕಾರಣಿಗಳು ನೈತಿಕತೆ ಇಟ್ಟುಕೊಂಡು ಮಾತನಾಡಬೇಕು, ಭ್ರಷ್ಟಾಚಾರ ಮಾಡಿರುವವರು ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು. ಈಗಾಗಲೇ ಬಿಜೆಪಿಯ ಸಿ.ಟಿ ರವಿ, ಆರ್.ಅಶೋಕ್, ಬಿ.ವೈ ವಿಜಯೇಂದ್ರ, ಅಶ್ವಥ್‌ನಾರಾಯಣ ಸೇರಿದಂತೆ ಎಲ್ಲಾ ಮುಖಂಡರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯನವರ ಬಗ್ಗೆ ಷಡ್ಯಂತ್ರ ಮಾಡಿ ಬಿಜೆಪಿ-ಜೆಡಿಎಸ್ ನವರು ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇವೆಂಬ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.

ಚಳುವಳಿ ಮೂಲಕ ಸಮಾಜವಾದಿ ಹಿನ್ನೆಲೆ ಇರುವ ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ, ಬೇರೆ ಯಾರೂ ಸಾಟಿಯಾಗಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯನ್ನು ಜೈಲಿಗೆ ಕಳುಹಿಸಿದರೆ ಬಿಜೆಪಿ ನಾಯಕರು ರಾಜ್ಯದಲ್ಲಿ ರಾಜಕಾರಣ ಮಾಡಲು ಆಗುವುದಿಲ್ಲ ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಸಖರಾಯಪಟ್ಟಣ ಪ್ರಮುಖ ಬೀದಿಗಳಲ್ಲಿ ರಾಜ್ಯಪಾಲರ ಶವಯಾತ್ರೆ, ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಡಾ. ಡಿ.ಎಲ್ ವಿಜಯ ಕುಮಾರ್, ಎಂ.ಎಲ್ ಮೂರ್ತಿ, ರವೀಶ್‌ಬಸಪ್ಪ, ಹೆಚ್.ಪಿ ಮಂಜೇಗೌಡ, ಮಹಡಿಮನೆಸತೀಶ್, ಕೆ.ಎಸ್ ಶಾಂತೇಗೌಡ, ಎತ್ತಿನಮನೆ ತ್ರಿಭುವನ್, ಮಧು ಸಿ.ಸಿ, ಎತ್ತಿನಮನೆ ಸಚಿನ್, ಪ್ರಕಾಶ್‌ರೈ, ಅಪ್ಪು, ಗಣೇಶ್, ನವೀನ್, ಕೆ.ಭರತ್, ಪ್ರಸಾದ್ ಅಮೀನ್, ಎನ್.ಡಿ ಚಂದ್ರಪ್ಪ, ಕೆಂಗೇಗೌಡ, ಸೌಂದರ್ಯ ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

The protest was held against the Governor’s decision to allow the prosecution

About Author

Leave a Reply

Your email address will not be published. Required fields are marked *

You may have missed