September 19, 2024

ಒತ್ತುವರಿ ತೆರವು ವಿರೋಧಿಸಿ ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿಯಿಂದ ಪ್ರತಿಭಟನೆ

0
ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿಯಿಂದ ಪ್ರತಿಭಟನೆ

ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿಯಿಂದ ಪ್ರತಿಭಟನೆ

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ವಿರೋಧಿಸಿ ಹಾಗೂ ಭೂಮಿ ಇಲ್ಲದವರಿಗೆ ಭೂಮಿ ನೀಡುವ ಜೊತೆಗೆ ಪರಿಸರವನ್ನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಕಾರ್ಯಕರ್ತರು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಲೆನಾಡು ಭಾಗದಲ್ಲಿ ಬಡವರು ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿದ ಒಂದು, ಎರಡು ಎಕರೆ ಸಾಗುವಳಿ ಜಮೀನನ್ನು ಯಾವುದೇ ತಿಳುವಳಿಕೆ ಪತ್ರ ನೀಡದೆ ತೆರವು ಮಾಡಲಾಗುತ್ತಿದೆ. ಜಮೀನಿನಲ್ಲಿ 30, 40 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಏಕಾಏಕಿ ನಾಶ ಮಾಡಿ ಬಡವರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಈ ಕ್ರಮದಿಂದಾಗಿ ಮಲೆನಾಡಿನಲ್ಲಿ ಸಾವಿರಾರು ಕುಟುಂಬಗಳು ಭೂಮಿ ಹಾಗೂ ಸೂರನ್ನು ಕಳೆದುಕೊಂಡು ಬೀದಿಗೆ ಬಂದಿವೆ. ಇನ್ನೂ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಆತಂಕದಲ್ಲಿವೆ. ಇದನ್ನು ಮನಗಂಡು ಕೂಡಲೇ ಸರ್ಕಾರ ಒತ್ತುವರಿ ತೆರವು ಹೆಸರಿನಲ್ಲಿ ಬಡವರು ಕಟ್ಟಿಕೊಂಡ ಸೂರು ಮತ್ತು ಭೂಮಿಯನ್ನು ನಾಶಪಡಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನ ಶಕ್ತಿ ರಾಜ್ಯ ಸಮಿತಿ ಉಪಾಧ್ಯಕ್ಷ ಗೌಸ್ ಮೊಹಿಯುದ್ದೀನ್, ಪ್ರಮುಖರಾದ ಸುರೇಶ್, ಅತಿಕ್, ವೆಂಕಟೇಶ್, ಆನಂದ್, ಮುನೀರ್, ಗೋಪಾಲಗೌಡ ಮತ್ತಿತರರಿದ್ದರು.

Protest by Karnataka Janashakti State Committee against eviction of squatters

About Author

Leave a Reply

Your email address will not be published. Required fields are marked *

You may have missed