September 16, 2024
ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್ಪೋ ೨೦೨೪ ಕಾರ್ಯಕ್ರಮ ಉದ್ಘಾಟನೆ

ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್ಪೋ ೨೦೨೪ ಕಾರ್ಯಕ್ರಮ ಉದ್ಘಾಟನೆ

ಚಿಕ್ಕಮಗಳೂರು: ಎಲ್ಲಿ ನಿಸ್ವಾರ್ಥ ಸೇವೆ ಗುಣ ಗೌರವ ಇರುತ್ತದೆಯೋ ಅಲ್ಲಿ ಭಗವಂತ ನಲಿದಾಡುತ್ತಾನೆ ಎಂಬುದನ್ನು ಜನಮಾನಸದಲ್ಲಿ ತೋರುವ ಆಶಾಕಿರಣ ಅಂಧಮಕ್ಕಳ ವಸತಿ ಶಾಲೆ ಅರ್ಥಪೂರ್ಣ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಶಿ ಹೇಳಿದರು.

ಅವರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ಮತ್ತು ಮೆಕೋಶಾ ಸಂಸ್ಥೆ ಬೆಂಗಳೂರು ವತಿಯಿಂದ ಏರ್ಪಡಿಸಿದ್ದ ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್ಪೋ ೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಎಲ್ಲೆಲ್ಲಿ ದೇವರ ಕಾಣಬೇಕು, ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ದೇವಸ್ಥಾನಗಳಿಗೆ ಭೇಟಿನೀಡುವಂತೆ ಇಲ್ಲಿನ ಆಶಾಕಿರಣ ಅಂಧಮಕ್ಕಳ ಶಾಲೆಗೆ ಭೇಟಿಕೊಟ್ಟು ಅಲ್ಲಿರುವವರ ಸೇವೆ ಮಾಡಿದರೆ ವಿಶೇಷವಾದ ದೇವರ ಅನುಗ್ರಹಕ್ಕೆ ಸಮಾಜದ ನೀವೆಲ್ಲಾ ಪಾತ್ರರಾಗುವ ಭಾಗ್ಯ ದೊರೆಯುತ್ತದೆ ಎಂದು ತಿಳಿಸಿದರು.

ಶ್ರೀಕ್ಷೇತ್ರದ ವತಿಯಿಂದ ಜೀವಭಾವ ಕಾರ್ಯಕ್ರಮವನ್ನು ಆರಂಭ ಮಾಡಿದಾಗ ಮೊಟ್ಟಮೊದಲನೆಯ ವ್ಯಕ್ತಿ ಮತ್ತು ಸಂಸ್ಥೆ ಯಾವುದೆಂದರೆ ಅದು ಡಾ. ಜೆ.ಪಿ ಕೃಷ್ಣೇಗೌಡರ ಮಾರ್ಗದರ್ಶನದಲ್ಲಿ ಅವರ ಕೂಸಾಗಿರುವ ಆಶಾಕಿರಣ ಅಂಧಮಕ್ಕಳ ಪಾಠಶಾಲೆ ಪಾತ್ರರಾಗಿ ಶ್ರೀಮಾತೆಯ ಪ್ರಶಸ್ತಿಗೆ ಭಾಜನರಾಗಿದ್ದಾರೆಂದು ಬಣ್ಣಿಸಿದರು.

ಒಂದು ಜೀವ ಸೃಷ್ಟಿಯಾಗುವ ಸಂದರ್ಭ ಬಂದಾಗ ಅದರಲ್ಲಿ ಭಾವ ಒಡಮೂಡುತ್ತದೆ. ಸರ್ವೇಂದ್ರಿಯಗಳೂ ಚೆನ್ನಾಗಿರುವುದರಿಂದ ಕೊರತೆ ಕಾಣುವುದಿಲ್ಲ, ಆದರೆ ಇಂದು ಸಮಾಜದ ಕೆಲವರಲ್ಲಿ ಸಹಾಯ ಹಸ್ತದ ಕೊರತೆ ಕಾಣುತ್ತಿದೆ ಎಂದು ವಿಷಾಧಿಸಿದರು.

ಕೊರತೆ ಇರುವ ಜೀವಿಗೆ ಕೊರತೆಯನ್ನೇ ಪರಿವರ್ತನೆಗೊಳಿಸಿ, ಅದನ್ನೇ ಭೂಮಿಕೆಯಾಗಿ ನಿರ್ಮಾಣ ಮಾಡಿಕೊಂಡು ಅದರ ಮೇಲೆ ತಮ್ಮ ಸಾರ್ವಭೌಮತ್ವವನ್ನು ನಿರ್ಮಿಸುವ ವ್ಯವಸ್ಥೆಗೆ ಕಾರಣ ಮಾಡಿದ ಪರಿಣಾಮ ಅವರೆಲ್ಲಾ ಇಂದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆಂದು ಶ್ಲಾಘಿಸಿದರು.

ಅಂಧಮಕ್ಕಳ ಶಾಲೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಸಾಂಸ್ಕೃತಿಕ, ಕ್ರೀಡೆ, ಸಂಗೀತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಅಂತರಾಷ್ಟ್ರೀಯ ರಾಯಭಾರಿಗಳಾಗಿರುವ ಅವರು ಭಾರತ ದೇಶದ ಘನತೆಯನ್ನು ಎತ್ತಿ ತೋರಿಸಿ ಗುಣಗೌರವ ಹೆಚ್ಚಿಸಿದ್ದಾರೆಂದು ಹೇಳಿದರು.

ಮಕ್ಕಳ ಮನಸ್ಸನ್ನು ಅರಿಯುವುದೇ ಮಾತೃಸ್ವರೂಪಿಗೆ ಮಾತ್ರ, ಅಂತಹ ವಿಶೇಷವಾದ ಗುಣ ಡಾ. ಜಿ.ಪಿ ಕೃಷ್ಣೇಗೌಡರಲ್ಲಿ ಸಂಪನ್ನವಾಗಿದೆ. ಸಮರ್ಪಣಾ ಭಾವವನ್ನು ಇಟ್ಟುಕೊಂಡಿದ್ದ ಜಯಪ್ರಕಾಶ ನಾರಾಯಣ ಮಾದರಿಯಂತೆ ಇವರನ್ನೂ ಅದೇ ಹೆಸರಿನಲ್ಲಿ ಕರೆದರೆ ಬಹಾಳ ವಿಶೇಷವಾಗಿರುತ್ತದೆ ಎಂದು ಗುಣಗಾನ ಮಾಡಿದರು.

ಮಲೆನಾಡಿನ ವೈಶಿಷ್ಟ್ಯ, ಸಂಸ್ಕೃತಿ, ಶ್ರೇಷ್ಟತೆ ನಾಗ ಸ್ವರೂಪವನ್ನು ಇಲ್ಲಿರುವ ವಿಶಿಷ್ಟವಾದ ವ್ಯವಸ್ಥೆಗಳನ್ನು, ಮಲೆನಾಡಿನ ಆಹಾರ ಪದ್ದತಿಗಳನ್ನು ಜನರಿಗೆ ಮತ್ತೊಮ್ಮೆ ಪರಿಚಯಿಸುವ ಮಲೆನಾಡು ಮಹೋತ್ಸವ ಕಾರ್ಯಕ್ರಮ ವಿಶ್ವಾಸನೀಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ, ಮಲೆನಾಡು ಮಹೋತ್ಸವ ಕಾರ್ಯಕ್ರಮ ದಾನಿಗಳಿಗೆ ಪ್ರೇರಣೆ ನೀಡುವ ಕಾರ್ಯಕ್ರಮವಾಗಿದ್ದು, ಅರ್ಥಪೂರ್ಣವಾಗಿದೆ. ರಾಜ್ಯಾದ್ಯಂತ ಇಲ್ಲಿನ ಅಂಧಮಕ್ಕಳ ಶಾಲೆಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳಿಗೆ ಅಭಿರುಚಿಗೆ ತಕ್ಕಂತೆ ಶಿಕ್ಷಣ, ಸಂಗೀತ, ಕ್ರೀಡೆ ಮುಂತಾದವುಗಳನ್ನು ಕೊಡಿಸುವಲ್ಲಿ ಡಾ. ಜೆ.ಪಿ ಕೃಷ್ಣೇಗೌಡ ಮತ್ತು ಅವರ ಕುಟುಂಬದ ಸಾಧನೆ ಪ್ರಶಂಸನೀಯ ಎಂದು ಹೇಳಿದರು.

ಶಾಲೆಗೆ ಉಚಿತ ವಿದ್ಯುತ್ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಮೆಸ್ಕಾಂ ಇಲಾಖೆ ಈಗಾಗಲೇ ಆದೇಶ ನೀಡಿದೆ. ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಮಾಜಿ ಸಚಿವ ಸಿ.ಟಿ ರವಿ ಹಾಗೂ ತಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರಶಸ್ತಿ ಕೊಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಹಣದ ಹಿಂದೆ ಹೋಗುವ ಇಂದಿನ ವ್ಯವಸ್ಥೆಯಲ್ಲಿ ಜನಸೇವೆ ಮೂಲಕ ಜನಾನುರಾಗಿಯಾಗಿರುವ ಡಾ. ಜೆ.ಪಿ ಕೃಷ್ಣೇಗೌಡ ಅವರು ಬದುಕಿನ ಭರವಸೆ ಕಳೆದುಕೊಂಡ ಮಕ್ಕಳಲ್ಲಿ ಬದುಕಿನ ವಿಶ್ವಾಸ ಮೂಡಿಸಿ ಬದುಕು ಕಟ್ಟಿಕೊಳ್ಳಲು ಆಶಾ ಕಿರಣ ಅಂಧಮಕ್ಕಳ ಶಾಲೆ ಆರಂಭಿಸಿ ನೆರವಾಗಿದ್ದಾರೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜೆ.ಪಿ ಕೃಷ್ಣೇಗೌಡ, ಶಾಲೆಯ ಆರಂಭದಿಂದ ಈವರೆಗೆ ನಡೆದುಬಂದ ದಾರಿಯ ಬಗ್ಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಅವರು ತಮ್ಮ ತಂದೆ-ತಾಯಿ ಹೆಸರಿನಲ್ಲಿ ಅಂಧಮಕ್ಕಳ ಶಾಲೆಗೆ ೧ ಲಕ್ಷ ರೂ ದೇಣಿಗೆ ನೀಡುವುದಾಗಿ ಘೋಷಷಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ್ ಸ್ವಾಮಿಜಿ, ಜ್ಯೋತಿಕೃಷ್ಣ, ವರ್ಷಾ ಅಭಿಷೇಕ್, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಕಲ್ಪನಾ ಪ್ರದೀಪ್, ಕಿಸಾನ್ ಕಾಂಗ್ರೆಸ್ ಎ.ಪಿ.ಸಾಗರ್, ಮತ್ತಿತರರು ಭಾಗವಹಿಸಿದ್ದರು.

Malenadu Mahotsava Charity Expo 2024

About Author

Leave a Reply

Your email address will not be published. Required fields are marked *