September 16, 2024

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಅಡವಿಟ್ಟಿದ್ದ ಚಿನ್ನ ಹಿಂದಕ್ಕೆ ನೀಡುವಂತೆ ಮನವಿ

0
ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸುದ್ದಿಗೋಷ್ಠಿ

ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಅಡವಿಟ್ಟಿದ್ದ ಗ್ರಾಹಕರ ಚಿನ್ನವನ್ನು ಕೂಡಲೇ ವಾಪ್ಸ್ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರು ಆಡವಿಟ್ಟಿದ್ದ ಚಿನ್ನವನ್ನು ಬ್ಯಾಂಕ್‌ನ ಸಿಬ್ಬಂದಿ ಮಾರಾಟ ಮಾಡಿದ್ದು, ಗ್ರಾಹಕರಿಗೆ ಮೋಸಮಾಡಲಾಗಿದೆ. ಈ ಸಂಬಂಧ ಬ್ಯಾಂಕ್‌ನ ಗ್ರಾಹಕ ಮಲ್ಲಿಕಾರ್ಜುನ ಅವರು ನಗರ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಮಲ್ಲಿಕಾರ್ಜುನ ಅವರು ೨೦೧೮ ರಿಂದ ಈ ಬ್ಯಾಂಕಿನಲ್ಲಿ ವ್ಯವಹರಿಸುತ್ತಿದ್ದು, ಕೃಷಿಗಾಗಿ ಚಿನ್ನದ ಮೇಲೆ ಸಾಲ ಪಡೆದು ೨೦೨೩ ರಲ್ಲಿ ಸಾಲ ತೀರುವಳಿ ಮಾಡಿ ಚಿನ್ನವನ್ನು ವಾಪಸ್ ಕೇಳಿದಾಗ ಬ್ಯಾಂಕಿನ ನೌಕರರು ಸಬೂಬು ಹೇಳಿ ತಳ್ಳಿಹಾಕಲು ನೋಡಿದ್ದು ಇದರಿಂದ ಅನುಮಾನಗೊಂಡ ಗ್ರಾಹಕರು ಜಾಡುಹಿಡಿದು ವಿಚಾರಿಸಿದಾಗ ಸುಮಾರು ೧೪೫ ಗ್ರಾಹಕರ ಚಿನ್ನವನ್ನು ಫೆಡರಲ್ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿರುವುದು ಗೊತ್ತಾಗಿದೆ ಎಂದರು.

ಇದಲ್ಲದೆ ನಕಲಿ ಚಿನ್ನ ನಕಲಿ ದಾಖಲೆಗಳೊಂದಿಗೆ ನಕಲಿ ಖಾತೆಗಳನ್ನು ಸೃಷ್ಟಿಸಿ. ಸಾಲ ಪಡೆದಿರುವ ಬಗ್ಗೆಯೂ ದೂರು ದಾಖಲಾಗಿದ್ದು, ಗ್ರಾಹಕರು ಇಟ್ಟಿದ್ದ ಕೆವಣಿ ಹಣವನ್ನು ಡ್ರಾ ಮಾಡಲಾಗಿದೆ. ಇದರಿಂದ ಬ್ಯಾಂಕಿನಲ್ಲಿ ಕೋಟ್ಯಾಂತರ ರೂ ಅವ್ಯವಹಾರ ಆಗಿರುವುದು ಬೆಳಕಿಗೆ ಬಂದಿದೆ ಎಂದರು.

ಎರಡು ತಿಂಗಳ ಹಿಂದೆ ಬ್ಯಾಂಕಿನವರು ದೂರುದಾರರನ್ನು ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರ ಮೇರೆಗೆ ಒಂಬಡ್ಸ್‌ಮನ್‌ಗೆ ನೀಡಿದ್ದ ದೂರನ್ನು ಹಿಂಪಡೆಯಲಾಗಿತ್ತು. ಆದರೆ ಇದಾಗಿ ೧ ವರ್ಷ ೧ ತಿಂಗಳು ಕಳೆದಿದ್ದರೂ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಟ್ಟಿಲ್ಲ ಎಂದು ದೂರಿದರು.

ಈ ಮಧ್ಯೆ ಬ್ಯಾಂಕ್ ಮ್ಯಾನೇಜರ್ ಮತ್ತು ಒಬ್ಬಂದಿ ಈಗ ಒಬ್ಬೊಬ್ಬ ಗ್ರಾಹಕರನ್ನು ಕರೆದು ನ್ಯಾಯಾಲಯದಲ್ಲಿ ಕೇಸು ಇರುವ ಕಾರಣ ನೀವು ೮-೧೦ ವರ್ಷಗಳವರೆಗೆ ಕಾಯಬೇಕಾಗಿರುತ್ತದೆ. ಈಗಲೆ ಬಗೆಹರಿಸುವುದಾದರೆ ನೀವು ಇಂದಿನವರೆಗೆ ಬಡ್ಡಿ ಕಟ್ಟಬೇಕು ಹಾಗೂ ಗ್ರಾಸ್ ವೈಟ್ ಚಿನ್ನದ ಬೆಲೆ ನೀಡಲು ಸಾಧ್ಯವಿಲ್ಲ. ನೆಟ್ ವೈಟ್ ಚಿನ್ನದ ದರಕ್ಕೆ ಒಪ್ಪಿಕೊಂಡರೆ ವ್ಯವಹಾರ ಬಗೆಹರಿಸುವುದಾಗಿ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ನೆಟ್ ವೈಟ್ ಚಿನ್ನದ ದರಕ್ಕೆ ಒಪ್ಪಿಕೊಂಡರೆ ಮತ್ತು ಇಂದಿನವರೆಗೆ ಬಡ್ಡಿ ಪಾವತಿಸುವುದಾದರೆ ಗ್ರಾಸ್ ವೈಟ್ ಮೇಲೆ ಬೀಳುವ ನಷ್ಟ ಹಾಗು ಕೂಲಿ ನಷ್ಟ ಸವಕಳಿ ನಷ್ಟದ ಹೊರೆಯನ್ನು ಗ್ರಾಹಕರ ತಲೆಯ ಮೇಲೆ ಹೇರಲಾಗುತ್ತಿದೆ. ಅಲ್ಲದೆ ಸಾಲ ತೀರುವಳಿ ಮಾಡಿ ೧ ವರ್ಷ ಕಳೆದಿದ್ದರೂ ಈ ದಿನದ ವರಗೆ ಬಡ್ಡಿ ಲೆಕ್ಕಾ ಹಾಕುತ್ತಿದ್ದು ಎಲ್ಲಾ ಹೊರೆಯನ್ನು ಮಾಡದ ತಪ್ಪಿಗಾಗಿ ಗ್ರಾಹಕರೇ ಅನುಭವಿಸಬೇಕಾಗಿದೆ ಎಂದರು.

ಈ ಎಲ್ಲಾ ಕಾರಣಗಳಿಂದ ತಕ್ಷಣ ಸಮಸ್ಯೆ ಬಗೆಹರಿಸಿ ಗ್ರಾಹಕರಿಗೆ ಅವರ ಚಿನ್ನ ವಾಪಸ್ ಕೊಡಿಸಬೇಕು. ಇಲ್ಲವಾದಲ್ಲಿ ಬ್ಯಾಂಕ್ ಮುಂದೆ ಗ್ರಾಹಕರೊಂದಿಗೆ ಅನಿರ್ಧಿಷ್ಟಾವಧಿ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೈಸಿ.ಸುನೀಲ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಮ.ಬಿ.ಚಂದ್ರಶೇಖರ್, ಮಾಜಿ ಜಿಲ್ಲಾಧ್ಯಕ್ಷ ಎಂ.ಸಿ.ಬಸವರಾಜ್ ಇದ್ದರು.

A request to return the gold stashed in the Central Bank of India

About Author

Leave a Reply

Your email address will not be published. Required fields are marked *