September 16, 2024
ಸೂರ್ಯಕಾಂತಿ ಖರೀದಿಸುವ ಕುರಿತು ಜಿಲ್ಲಾಧಿಕಾರಿ ನಡೆಸಿದ ಜರುಗಿದ ಸಭೆ

ಸೂರ್ಯಕಾಂತಿ ಖರೀದಿಸುವ ಕುರಿತು ಜಿಲ್ಲಾಧಿಕಾರಿ ನಡೆಸಿದ ಜರುಗಿದ ಸಭೆ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್‌ಗೆ ರೂ. ೭೨೮೦ ರಂತೆ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇತ್ತೀಚೆಗೆ ೨೦೨೪-೨೫ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸೂರ್ಯಕಾಂತಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಎಕರೆಗೆ ೩ ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ ೧೫ ಕ್ವಿಂಟಾಲ್ ಸೂರ್ಯಕಾಂತಿ ಖರೀದಿಸಲಾಗುತ್ತದೆ. ಖರೀದಿ ಹಾಗೂ ನೋಂದಣಿ ಪ್ರಕ್ರಿಯೆ ಆದೇಶ ಹೊರಡಿಸಿದ ದಿನಾಂಕದಿಂದ ೪೫ ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು ೯೦ ದಿನಗಳವರೆಗೆ ನಿಗಧಿಪಡಿಸಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಡೂರಿನಲ್ಲಿ ಖರೀದಿ ಕೇಂದ್ರವನ್ನು ತೆರೆಯುವಂತೆ ತಿಳಿಸಿದ ಅವರು ಬೆಂಗಳೂರಿನ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತಿಯನ್ನು ಖರೀದಿ ಸಂಸ್ಥೆಯನ್ನಾಗಿ ಮಾಡಲಾಗಿದೆ ಎಂದು ಹೇಳಿದ ಅವರು ಗುಣಮಟ್ಟ ಪರಿಶೀಲನೆಗಾಗಿ ಕೃಷಿ ಇಲಾಖೆಯ ಒಬ್ಬರು ಗ್ರೇಡರ್ ಅನ್ನು ನಿಯೋಜಿಸುವಂತೆ ಹೇಳಿದರು.

ಜಿಲ್ಲೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರದಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ನೀಡಿರುವ ಎಫ್.ಐ.ಡಿ ನಂಬರ್ ಮತ್ತು ಆಧಾರ್ ಕಾರ್ಡ್‌ನ್ನು ನೀಡಿ ನೋಂದಾಯಿಸತಕ್ಕದ್ದು, ಒಂದು ವೇಳೆ ದರ್ಶಕದಲ್ಲಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಬೆಳೆ ಬೆಳೆಯುವುದು ಕಂಡು ಬರದೇ ಇದ್ದಲ್ಲಿ ಹತ್ತಿರದ ಕೃಷಿ ಇಲಾಖೆ ಸಂಪರ್ಕಿಸಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು. ನೋಂದಣಿ ಸಮಯದಲ್ಲಿ ಆಧಾರ್‌ಕಾರ್ಡ್, ಪಹಣಿ, ಆಧಾರ್ ಲಿಂಕ್ ಆಗಿರುವ ರಾಷ್ಟೀಕೃತ ಬ್ಯಾಂಕಿನ ಪಾಸ್‌ಬುಕ್ ಪ್ರತಿ ಸಲ್ಲಿಸಬೇಕು ಎಂದು ತಿಳಿಸಿದರು.

ಬೆಂಬಲ ಬೆಲೆ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಆಳವಡಿಸಬೇಕು. ರೈತರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಇದರ ಲಾಭ ಪಡೆಯುವಂತೆ ಕ್ರಮ ವಹಿಸಬೇಕು ಎಂದರು.

ಖರೀದಿ ಕೇಂದ್ರದಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಸೂರ್ಯಕಾಂತಿ ಖರೀದಿಸಿದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರಪಯೋಗವಾಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಹೇಳಿದ ಅವರು ಈ ಯೋಜನೆಯಡಿಯಲ್ಲಿ ಖರೀದಿಸುವ ಪ್ರಗತಿಯ ವಿವರವನ್ನು ಪ್ರತಿ ದಿನ ಸರ್ಕಾರಕ್ಕೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಇ-ಮೇಲ್ ಮೂಲಕ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ್ ರೆಡ್ಡಿ, ಕರ್ನಾಟಕ ಎಣ್ಣೆ ಬೀಜ ನಿಗಮ ವ್ಯವಸ್ಥಾಪಕ ಭರತ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಕಡೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಚೈತ್ರ ಕೆ. ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Buy sunflower at support price

About Author

Leave a Reply

Your email address will not be published. Required fields are marked *