September 16, 2024

ವಿದ್ಯಾರ್ಥಿಗಳಲ್ಲಿ ಮಾನಸಿಕ-ದೈಹಿಕ ಶಕ್ತಿ ಬೆಳೆಸಲು ಕ್ರೀಡೆ ಸಹಕಾರಿ

0
ಚಿಕ್ಕಮಗಳೂರು ತಾಲ್ಲೂಕು 'ಎ' ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ

ಚಿಕ್ಕಮಗಳೂರು ತಾಲ್ಲೂಕು 'ಎ' ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ

ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ಕ್ರೀಡೆ ಮತ್ತು ಆಟೋಟ ವಿಶೇಷವಾಗಿ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಬೆಳೆಸಲು ಉತ್ತಮ ಅವಕಾಶ ಎಂದು ಚಾಮರಾಜನಗರ ಜಿಲ್ಲೆ ನಳಂದ ವಿಶ್ವವಿದ್ಯಾಲಯದ ಸಂಸ್ಥಾಪಕ ಪೂಜ್ಯ ಬಂತೆ ಬೋಧಿದತ್ತ ರವರು ಅಭಿಪ್ರಾಯಿಸಿದರು.

ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಾಗಡಿ ಕೈಮರದ ವರಸಿದ್ದಿ ವಿನಾಯಕ ವಿದ್ಯಾಸಂಸ್ಥೆ, ಉಪ್ಪಳ್ಳಿಯ ಶ್ರೀ ಭಾನುಪ್ರಕಾಶ್ ಪ್ರೌಢಶಾಲೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ತಾಲ್ಲೂಕು ‘ಎ’ ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಆಲೋಚನೆಗಳು ಮನಸ್ಸಿನಲ್ಲಿ ಮೂಡಲು ಸಹಕಾರಿಯಾಗಿದೆ. ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.

ತಂದೆ-ತಾಯಿಗಳನ್ನು ಎರಡು ಭುಜದ ಮೇಲೆ ಕೂರಿಸಿಕೊಂಡು ಜಗತ್ತನ್ನು ತೋರಿಸಿದರೂ ಅವರ ಋಣವನ್ನು ತೀರಿಸಲು ಆಗುವುದಿಲ್ಲ ಎಂದು ಭಗವಾನ್ ಬುದ್ಧರು ಹೇಳಿದ್ದಾರೆ ಎಂದರು.

ಭವಿಷ್ಯದಲ್ಲಿ ಭಾರತದ ಅಭಿನವ ಬಿಂದ್ರಾ ಒಲಂಪಿಕ್ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅದೇ ರೀತಿ ನೀರಜ್ ಛೋಪ್ರಾ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಇವರಂತೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮುಂದೆ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂದು ಹೇಳಿದರು.

ಭಾರತದ ಇತಿಹಾಸದಲ್ಲಿ ಮಧುಬಾಕರ್ ಎಂಬ ಯುವತಿ, ಅಶ್ವಿನಿ ನಾಚಪ್ಪ, ಪಿ.ಟಿ ಉಷಾ ಮುಂತಾದವರು ಉತ್ತಮ ಆಟವನ್ನು ಆಡುವ ಮೂಲಕ ಪದಕಗಳನ್ನು ಗಳಿಸಿ ದೇಶಕ್ಕೆ ಗೌರವ ತಂದಿದ್ದಾರೆ. ಆ ನಿಟ್ಟಿನಲ್ಲಿ ನೀವೂ ಸಾಗಿ ಎಂದು ಕಿವಿಮಾತು ಹೇಳಿದರು.

ನಗರಸಭೆ ಸದಸ್ಯ ಮುನೀರ್ ಅಹಮದ್ ಮಾತನಾಡಿ, ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಆರೋಗ್ಯ ಮತ್ತು ಸದೃಢರಾಗಿ ಎಂದು ಹೇಳಿದರು.

ಈಗ ಮೊಬೈಲ್ ಹವ್ಯಾಸದಿಂದಾಗಿ ಅಹಿತಕರ ಘಟನೆಗಳು ನಡೆಯಲು ಕಾರಣವಾಗುತ್ತಿದೆ ಎಂದು ವಿಷಾಧಿಸಿದ ಅವರು ಬೀಡಿ, ಸಿಗರೇಟ್, ಗುಟ್ಕಾ, ಗಾಂಜಾ ಮುಂತಾದ ದುಶ್ಚಟಗಳಿಗೆ ದಾಸರಾಗಬೇಡಿ ಎಂದು ಮನವಿ ಮಾಡಿದರು.

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಯಾವುದೇ ತರದ ದುಶ್ಚಟಗಳಿಗೆ ವಿದ್ಯಾರ್ಥಿಗಳ ಮನಸ್ಸು ಹೋಗುವುದಿಲ್ಲ. ಅದಕ್ಕಾಗಿ ಭವಿಷ್ಯದಲ್ಲಿ ಮಕ್ಕಳು ಮುಂದೆ ಬರಬೇಕಾದರೆ ಕ್ರೀಡೆ ಅತ್ಯವಶ್ಯಕ ಎಂದು ಹೇಳಿದರು.

ಶ್ರೀ ವರಸಿದ್ದಿ ವಿನಾಯಕ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಜಯಲಕ್ಷ್ಮಿ ಸಿದ್ದಯ್ಯ ಧ್ವಜಾರೋಹಣವನ್ನು ನರೆವೇರಿಸಿದರು. ಅಧ್ಯಕ್ಷತೆಯನ್ನು ಶ್ವೇತ ಹೆಚ್.ಭಾನುಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಶೇರ್ ಅಲಿ, ಸುದೀಪ್, ಸೋಮೇಶ್, ಕಲಂದರ್, ಶಾದಬ್ ಆಲಂಖಾನ್, ಲಕ್ಷ್ಮಣ್, ದೇವಿಪ್ರಸಾದ್, ಅನ್ಸರ್ ಅಲಿ, ಸೈಯದ್ ಅಲಿ, ಸುರೇಶ್, ಹರೀಶ್, ರಾಜು ಮತ್ತಿತರರು ಇದ್ದರು.

ಪ್ರಾಸ್ತಾವಿಕವಾಗಿ ಮಂಜುನಾಥ್ ಮಾತನಾಡಿದರು. ವಿಶ್ವನಾಥ್ ಸ್ವಾಗತಿಸಿ, ಜಗದೀಶ್ ವಂದಿಸಿದರು.

Chikmagalur Taluk ‘A’ Zone Level High School Sports

About Author

Leave a Reply

Your email address will not be published. Required fields are marked *