September 16, 2024

ಜಿಲ್ಲಾ ವಕೀಲರ ಸಂಘದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ

0
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶುಭ ಗೌಡರ್ ರವರಿಗೆ ಬೀಳ್ಕೊಡುಗೆ

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶುಭ ಗೌಡರ್ ರವರಿಗೆ ಬೀಳ್ಕೊಡುಗೆ

ಚಿಕ್ಕಮಗಳೂರು: ಸರ್ಕಾರದ ನಾಗರೀಕ ಸೇವೆಗೆ ಸೇರಿದ ಬಳಿಕ ವರ್ಗಾವಣೆ ಅನಿವಾರ್ಯ. ಹಾಗೆಯೇ ನಿವೃತ್ತಿ ಕೂಡ ಪದ್ದತಿ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ ಸುಜೇಂದ್ರ ಹೇಳಿದರು.

ಅವರು ಇಂದು ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕಳೆದ ನಾಲ್ಕುವರೆ ವರ್ಷಗಳಿಂದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶುಭ ಗೌಡರ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲರ ಸಂಘ ಸಂಸ್ಕಾರ, ಸಂಪ್ರದಾಯ ಪಾಲನೆ ಮಾಡಿಕೊಂಡು ಬಂದಿದ್ದು, ನ್ಯಾಯಾಧೀಶರಾಗಿ ಬಂದಾಗ ಸ್ವಾಗತಿಸಿ, ವರ್ಗಾವಣೆಗೊಂಡಾಗ, ನಿವೃತ್ತಿ ಹೊಂದಿದವರಿಗೆ ಬೋಳ್ಕೊಡುಗೆ ನೀಡುತ್ತ ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬಂದಿದೆ ಎಂದು ಹೇಳಿದರು.

ನ್ಯಾಯಾಧೀಶರು ಇಂದು ಕನ್ನಡದಲ್ಲಿ ಭಾಷಣ ಮಾಡಿದ್ದು ಒಂದು ವಿಶೇಷವಾದರೆ, ನ್ಯಾಯಾಧೀಶರು ನ್ಯಾಯ ವಿತರಣೆಯಲ್ಲಿ ಮಾಡಿದ ನ್ಯಾಯ ನಿರ್ಣಯದಲ್ಲಿ ಕೆಲವರಿಗೆ ತೊಂದರೆಯಾದಾಗ ದೂರುವುದು ಸಾಮಾನ್ಯವಾಗಿರುತ್ತದೆ ಎಂದು ತಿಳಿಸಿದರು.
ರಾಜ್ಯದ ವಿವಿಧೆಡೆ ಸುಮಾರು ೨೯ ವರ್ಷಗಳ ಕಾಲ ನ್ಯಾಯಾಧೀಶರಾದ ಶುಭ ಗೌಡರ್ ರವರು ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಒಟ್ಟು ೧೨ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ದೂರುಗಳಿಗೆ ಒಳಗಾಗುವ ಪ್ರಸಂಗ ಎದುರಾಯಿತು. ಆ ಸಂದರ್ಭದಲ್ಲಿ ನ್ಯಾಯಾಧೀಶರು ಕಟ್ಟುನಿಟ್ಟಿನ ಕ್ರಮ ವಹಿಸಿದ ಪರಿಣಾಮ ಇಂದು ಎಲ್ಲರೂ ಆರೋಗ್ಯವಂತರಾಗಿ ಜೀವಂತವಾಗಿದ್ದೇವೆ ಅದಕ್ಕಾಗಿ ನ್ಯಾಯಾಧೀಶರಾದ ಶುಭ ಗೌಡರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಕೀಲರ ಸಂಘ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶುಭ ಗೌಡರ್ ವರ್ಗಾವಣೆಯಾದಾಗ ನಿವೃತ್ತಿಯಾದಾಗ ವಕೀಲರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆ ಎನಿಸುತ್ತದೆ ಎಂದರು.

ಎಲ್ಲಾ ವಕೀಲರ ಸಲಹೆ, ಸಹಕಾರದಿಂದ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಸುಮಾರು ೨೭೫೦೦ ಲೋಕ್ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದು, ಇದಕ್ಕೆ ತಂಡದ ರೂಪದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈವರೆಗೆ ತಮ್ಮ ಸೇವಾವಧಿಯಲ್ಲಿ ನೀಡಿದ ಸಹಕಾರವನ್ನು ಮುಂದೆ ಬರುವವರಿಗೂ ಕೊಡಿ ಎಂದು ಮನವಿ ಮಾಡಿದ ಅವರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೋರಿದರು.

ಈ ಸಂದರ್ಭದಲ್ಲಿ ಒಂದನೇ ಹೆಚ್ಚುವರಿ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಭಾನುಮತಿ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹನುಮಂತಪ್ಪ, ವಿವಿಧ ವಿಭಾಗಗಳ ನ್ಯಾಯಾಧೀಶರುಗಳಾದ ಮಂಜುನಾಥ್, ಪ್ರಕಾಶ್, ರಾಘವೇಂದ್ರ ಗುರುಪ್ರಸಾದ್ ಕುಲಕರ್ಣಿ, ವೀರಭದ್ರಯ್ಯ, ದ್ಯಾವಪ್ಪ, ಕೃಷ್ಣ, ನಂದಿನಿ, ಮಂಜುಶ್ರೀ, ಹರೀಶ್ ಸೇರಿದಂತೆ ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಅನಿಲ್ ಕುಮಾರ್, ಉಪಾಧ್ಯಕ್ಷ ಶರತ್‌ಚಂದ್ರ, ಖಜಾಂಚಿ ದೀಪಕ್, ಸಹಕಾರ್ಯದರ್ಶಿ ಪ್ರಿಯದರ್ಶಿನಿ, ರಾಘವೇಂದ್ರ, ಪದಾಧಿಕಾರಿಗಳು ಭಾಗವಹಿಸಿದ್ದರು.

Farewell program at District Bar Association

About Author

Leave a Reply

Your email address will not be published. Required fields are marked *