September 16, 2024

ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸದಾ ನಗುಮೊಗದೊಂದಿಗೆ ಕರ್ತವ್ಯ ನಿರ್ವಹಿಸಿ

0
ನಗರಸಭೆ ಸಭಾಂಗಣದಲ್ಲಿ ನಡೆದ ಬೀಳ್ಕೊಡಿಗೆ ಸಮಾರಂಭ

ನಗರಸಭೆ ಸಭಾಂಗಣದಲ್ಲಿ ನಡೆದ ಬೀಳ್ಕೊಡಿಗೆ ಸಮಾರಂಭ

ಚಿಕ್ಕಮಗಳೂರು: ಸೇವಾ ನಿವೃತ್ತಿ ಹೊಂದಿದ ನಗರಸಭೆ ಕಂದಾಯ ಅಧಿಕಾರಿ ರಮೇಶ್ ನಾಯ್ಡು, ಇತರೆ ಪೌರ ಕಾರ್ಮಿಕರು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಗೊಂಡ ಕಿರಿಯ ಇಂಜಿನೀಯರ್ ರಶ್ಮಿ ಅವರಿಗೆ ನಗರಸಭೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ನಗರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ರಮೇಶ್ ನಾಯ್ಡು ಹಾಗೂ ಪೌರ ಕಾರ್ಮಿಕರ ನಿವೃತ್ತಿ ನಂತರದ ಜೀವನವು ಸುಖಕರವಾಗಿರಲಿ ಎಂದು ಹಾರೈಸಿದರು.

ರಮೇಶ್ ನಾಯ್ಡು ಹಾಗೂ ವರ್ಗಾವಣೆಗೊಂಡಿರು ಕಿರಿಯ ಅಭಿಯಂತರರಾದ ರಶ್ಮಿ ಇಬ್ಬರೂ ನಗರಸಭೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಎಲ್ಲಾ ಕೆಲಸಗಳಿಗೂ ತಕ್ಷಣ ಸ್ಪಂದಿಸುತ್ತಿದ್ದರು. ರಮೇಶ್ ನಾಯ್ಡು ಅವರು ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರೊಂದಿಗೆ ಸದಾ ನಗುಮೊಗದೊಂದಿಗೆ ಕರ್ತವ್ಯ ನಿರ್ವಹಿಸಿ ಒಳ್ಳೆಯ ಹೆಸರು ಗಳಿಸಿದ್ದರು ಎಂದರು.

ನಗರಸಭೆ ಆಯುಕ್ತ ಬಿ.ಸಿ.ಬಸವಾಜು ಮಾತನಾಡಿ, ರಮೇಶ್ ನಾಯ್ಡು ಅವರು ವೃತ್ತಿ ಜೀವನದುದ್ದಕ್ಕೂ ಸಮಾಧಾನದಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ನಗರಸಭೆಯಲ್ಲಿ ಕೆಳಮಟ್ಟದ ಹುದ್ದೆಯಿಂದ ಕಂದಾಯ ಅಧಿಕಾರಿ ಹುದ್ದೆಯಂತಹ ಮೇಲ್ಮಟ್ಟದ ಹುದ್ದೆಗೇರುವುದು ಸುಲಭದ ಮಾತಲ್ಲ. ಈ ವಿಚಾರದಲ್ಲಿ ನಾಯ್ಡು ಅವರು ವೃತ್ತಿ ಬದುಕನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಹೇಳಿದರು.

ನಿವೃತ್ತಿಗೊಂಡ ರಮೇಶ್ ನಾಯ್ಡು ಮಾತನಾಡಿ, ನಗರಸಭೆಯಲ್ಲಿ ಸೇವೆ ಸಲ್ಲಿಸಿದ್ದು ನನ್ನ ಪೂರ್ವಜನ್ಮದ ಪುಣ್ಯ. ಪುರಸಭೆ ಇದ್ದಾಗ ದಿನಗೂಲಿ ನೌಕರರಾಗಿ ಸೇರಿ ಈವರೆಗೆ ಹಲವು ಹುದ್ದೆಗಳನ್ನು ಅಲಂಕರಿಸಿ ಸಾಕಷ್ಟು ಶ್ರಮ ಪಟ್ಟಿದ್ದೇವೆ. ಕರ್ತವ್ಯ ಮಾಡುವುದು ದೊಡ್ಡ ವಿಚಾರವಲ್ಲ. ಎಲ್ಲರೊಂದಿಗೆ ನಗುತ್ತಲೇ ಸೇವೆ ನೀಡಿದರೆ ಅವರಿಗೂ ಸಮಾಧಾನವಾಗುತ್ತದೆ.

ಕೆಲವರು ನೋವು, ಸಿಟ್ಟು, ಇನ್ನಾವುದೋ ಒತ್ತಡಗನ್ನಿಟ್ಟುಕೊಂಡು ನಗರಸಭೆಗೆ ಬಂದಿರುತ್ತಾರೆ. ಅವರೊಂದಿಗೆ ಪ್ರೀತಿಯಿಂದ ಮಾತನಾಡಿಸಬೇಕು. ಅವರು ಎಲ್ಲಾ ಕೆಲಸಗಳಿಗೂ ನಮ್ಮನ್ನೇ ಅವಲಂಬಿಸಿರುತ್ತಾರೆ. ನಮ್ಮಿಂದ ಉತ್ತಮ ಸ್ಪಂದನೆ ಸಿಕ್ಕರೆ ಸಮಾಧಾನದಿಂದ ಹಿಂತಿರುಗುತ್ತಾರೆ. ಇದು ನಿಜವಾದ ಪುರಸಭೆಯನ್ನು ನಡೆಸುವ ಲಕ್ಷಣ. ನಮಗೆ ಕಚೇರಿಯಲ್ಲಿ ಸಿಕ್ಕ ಸ್ಥಾನ ಮಾನವನ್ನು ಉತ್ತಮ ರೀತಿ ಬಳಸಿಕೊಂಡರೆ ಅದಕ್ಕೆ ಮೌಲ್ಯ ಸಿಗುತ್ತದೆ ಎಂದರು.

ಇದೇ ವೇಳೆ ನಿವೃತ್ತರಾದ ಪೌರಕಾರ್ಮಿಕರಾದ ಧರ್ಮ, ಪೆಂಚಾಲಯ್ಯ, ಮಂಜು, ಚಾಲಕ ವೆಂಕಟೇಶ ಅವರನ್ನು ಬೀಳ್ಕೊಡಲಾಯಿತು. ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್ ಇತರರು ಮಾತನಾಡಿದರು. ಪೌರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಾಗರತ್ನ ಇತರರು ಭಾಗವಹಿಸಿದ್ದರು.

Farewell ceremony held at Municipal Hall

About Author

Leave a Reply

Your email address will not be published. Required fields are marked *