September 16, 2024

ಶ್ರಾವಣ ಮಾಸದಲ್ಲಿ ಕಟ್ಟಿದರೆ ತೋರಣ ಬದುಕಿಗೆ ಹೂರಣ

0
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೇತೃತ್ವದಲ್ಲಿ ನಡೆದ 'ಶ್ರಾವಣ ಸಂಭ್ರಮ'

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೇತೃತ್ವದಲ್ಲಿ ನಡೆದ 'ಶ್ರಾವಣ ಸಂಭ್ರಮ'

ಚಿಕ್ಕಮಗಳೂರು: ಶ್ರಾವಣ ಮಾಸದಲ್ಲಿ ಕಟ್ಟಿದರೆ ತೋರಣ ಬದುಕಿಗೆ ಹೂರಣ ಎಂದು ಕನ್ನಡಸಾಹಿತ್ಯ ಪೂಜಾರಿ ಹಿರೇಮಗಳೂರುಕಣ್ಣನ್ ನುಡಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೇತೃತ್ವದಲ್ಲಿ ನಗರದ ಗೌರಿಕಾಲುವೆ ಬಡಾವಣೆಯ ಗೌರಿರಂಗಮಂದಿರದಲ್ಲಿ ಆಯೋಜಿಸಿದ್ದ ‘ಶ್ರಾವಣ ಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯ ಚಿಗುರಿನ ಸೌದಂರ್‍ಯ ಶ್ರಾವಣ ಮಾಸದ ಸೊಗಸು. ಇಡೀ ನಮ್ಮ ಭಾರತ ದೇಶದಲ್ಲಿ ಪ್ರಕೃತಿಯ ಉಪಾಸನೆಯೆ ಎಲ್ಲ ಹಬ್ಬಗಳ ಮೂಲದ್ರವ್ಯ. ಹಬ್ಬಗಳ ಮೂಲಕ ದೇವತಾ ಆರಾಧನೆ ಅನೂಚಾನವಾಗಿ ನಮ್ಮ ಸಂಸ್ಕೃತಿಯಲ್ಲಿ ನಡೆದುಕೊಂಡು ಬಂದಿದೆ. ವಿವಿಧ ಪತ್ರೆ, ಪುಷ್ಪ, ಹಣ್ಣು ಇವೆಲ್ಲ ನಮ್ಮ ಹಬ್ಬಗಳಲ್ಲಿ ಕಾಲಕಾಲಕ್ಕೆ ಬಳಕೆಗೆ ಕಾರಣವಾಗುತ್ತದೆ ಎಂದರು.

ವಿಜ್ಞಾನ ಬುದ್ಧಿಯಿಂದ, ತತ್ತ್ವಜ್ಞಾನದ ಮನಸ್ಸಿಗೆ ಕವಿಹೃದಯದಿಂದ ಆರಾಧಿಸುವ ಶ್ರಾವಣ ಕಟ್ಟಿದರೆ ತೋರಣ, ಬಡಿಸಿದರೆ ಹೂರಣ ಎಂದೇ ನೆನಪಿನಲ್ಲಿ ಉಳಿಯುತ್ತದೆ. ‘ಶ್ರಾವಣಮಾಸ ಬಂತು, ಯಾಕೆ ಬಂತೂ, ಏನು ತಂತು…’ ‘ಶ್ರಾವಣ ನೀನು ಬಂದಕಾರಣ..’ ‘ಶ್ರಾವಣ ಬಂತು ನಾಡಿಗೆ ಬಂಡು ಬೀಡಿಗೆ…’ ಎಂಬ ಕಾವ್ಯಗಳನ್ನು ಉಲ್ಲೇಖಿಸಿದ ಹಿರೇಮಗಳೂರುಕಣ್ಣನ್, ಶ್ರಾವಣದ ಸೊಗಸನ್ನು ದ.ರಾ.ಬೇಂದ್ರೆ ಸೇರಿದಂತೆ ಕನ್ನಡದ ಕವಿಗಳೆಲ್ಲ ಸೊಗಸಾಗಿ ವರ್ಣಿಸಿದ್ದಾರೆಂದರು.

ಶ್ರಾವಣದಲ್ಲಿ ಶ್ರವಣ ಪ್ರಧಾನ. ನಮ್ಮ ಮಕ್ಕಳಿಗೆ ಸದ್ವಿಚಾರಗಳನ್ನು ಪರಂಪರೆ, ಪದ್ಧತಿಗಳನ್ನು ಕಲಿಸಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಮನೆ ಒಗ್ಗೂಡಿದರೆ ಮನಸ್ಸುಗಳು ಒಗ್ಗೂಡುತ್ತವೆ. ದುಡಿದು ತಿನ್ನುವ ಸಂಸ್ಕೃತಿ ಒಳಿತು. ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆಕೊಡಬೇಕು. ಕಾಯಾ, ವಾಚಾ, ಮನಸ್ಸಾ ಪರಿಶುದ್ಧತೆಗೆ ಶ್ರಾವಣಮಾಸ ಪ್ರೇರಕ. ಬೇರುಗಳನ್ನು ಗಟ್ಟಿಗೊಳಿಸುವ ಅವಕಾಶ ಶ್ರಾವಣದಲ್ಲಿದೆ ಎಂದ ಕಣ್ಣನ್, ಸಾಹಿತ್ಯಕ್ಕೆ ಸಂವೇದನಾಶಕ್ತಿ ಇದೆ ಎಂಬುದನ್ನು ಮರೆಯಬಾರದು ಎಂದರು.

ಮಹಿಳಾಪ್ರಕಾರದ ಜಿಲ್ಲಾಪ್ರಮುಖ್ ನಾಗಶ್ರೀತ್ಯಾಗರಾಜ್ ಮಾತನಾಡಿ ಶ್ರಾವಣ ಬಂದರೆ ಪ್ರಕೃತಿಯೆ ನಲಿಯುತ್ತದೆ. ಹಬ್ಬಗಳ ಮೆರವಣಿಗೆ ಆರಂಭವಾಗುತ್ತದೆ. ಶ್ರಾವಣ ಭಕ್ಷ್ಯ ಭೋಜನಕ್ಕೂ ಹೆಸರು ವಾಸಿ. ಪೂಜೆ, ಪಾರಾಯಣ ಮನೆ, ಮಠ, ಮಂದಿರಗಳಲ್ಲಿ ತಿಂಗಳಪೂರ್ತಿ ನಡೆಯುತ್ತವೆ. ಭಾರತೀಯ ಸಾಹಿತ್ಯ ಧರ್ಮ ಪರಂಪರೆಯಲ್ಲಿ ಶ್ರಾವಣಮಾಸಕ್ಕೆ ವಿಶೇಷ ಪ್ರಾಧ್ಯಾನ್ಯತೆ ನೀಡಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅಭಾಸಾಪ ಜಿಲ್ಲಾಧ್ಯಕ್ಷ ಅರವಿಂದದೀಕ್ಷಿತ್ ಮಾತನಾಡಿ ಶ್ರಾವಣ ಮಾಸದ ಸೊಗಸು ಬಲುಸುಂದರ. ಒಳ್ಳೆಯನ್ನು ಹೇಳುವುದು ಮತ್ತು ಕೇಳುವುದು ಶ್ರಾವಣದ ಸಂದೇಶ. ಭಕ್ತಿ ಉಕ್ಕಬೇಕು, ಭಾವ ಉಗ್ಗಬೇಕು. ನಗು ಸಹಜ ಧರ್ಮವಾಗಬೇಕು. ಮಲ್ಲಿಗೆಯ ಮೃದು ಅನ್ನ, ಘಮಘಮಿಸುವ ತುಪ್ಪ, ಮಿಡಿಉಪ್ಪಿನಕಾಯಿ, ತಿಳಿಸಾರು, ಕೆನೆಮೊಸರು, ಹಲಸಿನಹಪ್ಪಳ, ಬಡಿಸುವವಳ ಬಳೆಗಳ ಸದ್ದು, ಇನಿದನಿ, ಹೊರಗೆ ಶ್ರಾವಣದ ಮಳೆಹನಿ… ನಿಜ ಸ್ವರ್ಗ ಮೇಲಿಲ್ಲ, ಇದ್ದರೂ ನನಗದು ಬೇಕಿಲ್ಲ ಎಂದ ಕಾವ್ಯಮಯವಾಗಿ ಬಣ್ಣಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶೃಂಗೇರಿ ವಿಭಾಗೀಯ ಸಂಯೋಜಕ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿ ಸಮಸ್ತ ಭಾರತೀಯ ಭಾಷೆಗಳ ಪ್ರಾತಿನಿಧ್ಯಾತ್ಮಕವಾದ ಸಂಘಟನೆ ೧೯೬೦ರ ದಶಕದಲ್ಲಿ ಪತ್ರಕರ್ತ ರತ್ನಸಿಂಹಶಾಂಡೀಲ್ಯರಿಂದ ಪ್ರಾರಂಭಗೊಂಡಿದ್ದು ಇಂದು ದೇಶಾದ್ಯಂತ ವ್ಯಾಪಿಸಿದೆ. ಸಾಹಿತ್ಯ, ಮನರಂಜನೆಗಷ್ಟೇ ಅಲ್ಲ, ಮನೋವಿಕಾಸಕ್ಕೆ ಎಂಬುದು ಇಲ್ಲಿ ನಂಬಿಕೆ. ಸಾಮಾಜಿಕ ಮೌಲ್ಯಗಳು, ದೇಶಭಕ್ತಿ, ಸಮಾಜಪ್ರೀತಿಯ ಸಾಹಿತ್ಯ, ಸಂಗೀತ, ಕಲೆಯನ್ನು ಪ್ರೇರೇಪಿಸುವ ಹಿನ್ನಲೆಯಲ್ಲಿ ಕಾರ್‍ಯನಿರ್ವಹಿಸಲಾಗುತ್ತಿದೆ ಎಂದರು.

ತಾಲ್ಲೂಕು ಉಪಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ಶ್ರಾವಣ ವ್ರತ-ಹಬ್ಬಗಳ ಮಾಸ ಎಂದರು. ನಾಗಶ್ರೀ ಸ್ವಾಗತಿಸಿ, ನಿರೂಪಿಸಿದರು. ಭಗವದ್ಗೀತೆಯ ೧೨ನೆಯ ಶ್ಲೋಕದ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್‍ಯಕ್ರಮದಲ್ಲಿ ಗೌರಿಮಹಿಳಾ ಮಂಡಳಿಯ ಮುಖ್ಯಸ್ಥೆ ಶಾರದಮ್ಮ ವಂದಿಸಿದರು.

‘Shravana Sambharam’ held under the leadership of Akhil Bharatiya Sahitya Parishad

About Author

Leave a Reply

Your email address will not be published. Required fields are marked *