September 16, 2024

ವಿದ್ಯಾರ್ಥಿಗಳು ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ

0
ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ

ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ

ಚಿಕ್ಕಮಗಳೂರು: ನಡೆದುಹೋಗಿರುವುದನ್ನು ಇತಿಹಾಸ ಹೇಳಿದರೆ ವಿಜ್ಞಾನ ಮುಂದೆ ಆಗುವುದನ್ನು ತಿಳಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಹೆಚ್.ಸಿ ತಿಳಿಸಿದರು.

ಅವರು ಇಂದು ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವೈದ್ಯ, ಇಂಜಿನಿಯರ್ ಮುಂತಾದ ಉನ್ನತ ಹುದ್ದೆಗಳ ಬಗ್ಗೆ ಕನಸು ಕಾಣಬೇಕು. ಅದನ್ನು ನನಸು ಮಾಡಲು ಕಠಿಣ ಪರಿಶ್ರಮದೊಂದಿಗೆ ಯಶಸ್ಸು ಗಳಿಸಿ ಎಂದು ಕವಿಮಾತು ಹೇಳಿದರು.

ಉನ್ನತ ಹುದ್ದೆಗೆ ಹೋದ ಬಳಿಕ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಇನ್ನು ಕೆಲವರು ಒಳ್ಳೆಯ ಸೇವೆಯನ್ನು ನೀಡಿ ಹಣವನ್ನು ಪಡೆಯುತ್ತಾರೆ ಎಂದರು.

ಸರ್ಕಾರಿ ಶಾಲೆ, ಆಸ್ಪತ್ರೆಯಲ್ಲಿ ಉಚಿತ ಸೌಲಭ್ಯಗಳು ದೊರೆಯುತ್ತವೆ. ಆದರೆ ದೇವರ ದರ್ಶನಕ್ಕೆ ಹೋದರೆ ಶುಲ್ಕ ಪಾವತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನೀಡುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.

ವಿದ್ಯಾರ್ಥಿಗಳು ಕೌಶಲ್ಯದ ಮೂಲಕ ಬದಲಾವಣೆ ತರಲು ಸಾಧ್ಯವಿದೆ. ಇದಕ್ಕೆ ಯೋಜನಾ ಬದ್ಧವಾಗಿ ನಡೆಯಬೇಕು. ವಿಜ್ಞಾನದಿಂದ ಕ್ರೋಮೋಜೋಮ್‌ಗಳನ್ನು ಬಳಕೆ ಮಾಡಿದರೆ ಎಲ್ಲವೂ ಸರಿದೂಗಿಸಬಹುದಾಗಿದೆ ಎಂದು ತಿಳಿಸಿದರು.

ವಿಜ್ಞಾನಿಗಳು ಸಂಶೋಧನೆ ಮಾಡಿದಂತೆ ನಿಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನೀವೂ ಸಹ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಎಂದು ಸಲಹೆ ನೀಡಿದರು.

ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ರಾಜ್ ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧೆಗಳ ನಿಯಮಗಳನ್ನು ಸರಿಯಾಗಿ ಪಾಲಿಸಿ ವಿಚಾರ ಮಂಡನೆ ಮಾಡಿ ಜಯಗಳಿಸಿ ಎಂದು ಹಾರೈಸಿದರು.

ತಾಲ್ಲೂಕು ಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀತ ಎಂಬ ಮೂರು ವಿಭಾಗಗಳಿದ್ದು, ನಗದು ಬಹುಮಾನ ನೀಡಲಾಗುವುದು. ವಿಜೇತರಾದ ವಿದ್ಯಾರ್ಥಿಗಳು ತಾವು ಹೊಂದಿರುವ ಬ್ಯಾಂಕಿನ ಖಾತೆ ಪಾಸ್‌ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಮೂರು ದಿನಗಳ ಒಳಗಾಗಿ ನೋಡಲ್ ಅಧಿಕಾರಿಗಳಿಗೆ ನೀಡುವಂತೆ ತಿಳಿಸಿದರು.

ಶಿಕ್ಷಕರಿಗೆ ಜಿಲ್ಲಾಮಟ್ಟದಲ್ಲಿ ಭಾಗವಹಿಸಲು ಅವಕಾಶ ಇದ್ದು, ತಾಲ್ಲೂಕು ಮಟ್ಟದಲ್ಲಿ ಎರಡು ವಿಭಾಗದಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಯಟ್ ಉಪನ್ಯಾಸಕ ನೀಲಕಂಠಪ್ಪ ಕೆ.ಜಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಗೋಷ್ಠಿ, ವಿಜ್ಞಾನ ನಾಟಕ, ವಸ್ತುಪ್ರದರ್ಶನದಲ್ಲಿ ಭಾಗವಹಿಸುವ ಕುರಿತು ನಿಬಂಧನೆಗಳ ಬಗ್ಗೆ ವಿವರ ನೀಡಿದರು.

ಇಂದು ನಡೆಯುತ್ತಿರುವ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ವಿಜೇತರಾದವರಿಗೆ ಸೆ.೧೮ ರಂದು ಚಿಕ್ಕಮಗಳೂರಿನ ಡಯಟ್‌ನಲ್ಲಿ ಜಿಲ್ಲಾ ಮಟ್ಟದ ವಿಜ್ಞಾನಗೋಷ್ಠಿ ನಡೆಯಲಿದ್ದು, ಅವಕಾಶ ಕಲ್ಪಿಸಲಾಗುವುದು. ಸೆ.೨೦ ರಂದು ಎಂಇಎಸ್ ನಲ್ಲಿ ಜಿಲ್ಲಾಮಟ್ಟದ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ತಾಲ್ಲೂಕು ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ಜಿಲ್ಲಾಮಟ್ಟದ ನಾಟಕ ಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಒಂದು ಪ್ರದರ್ಶನಕ್ಕೆ ೮ ಜನ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದೆಂದು ಹೇಳಿದರು.

೬ ಜಿಲ್ಲೆಯನ್ನು ಸೇರಿಸಿ ವಿಭಾಗಮಟ್ಟ ಮಾಡಿದ್ದು, ಜಿಲ್ಲಾಮಟ್ಟದಲ್ಲಿ ಗೆದ್ದವರು ಭಾಗವಹಿಸಲು ಅವಕಾಶ ನೀಡಲಾಗಿದೆ. ವಿಭಾಗ ಮಟ್ಟದಲ್ಲಿ ವಿಜೇತರಾದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹೆಚ್.ಎಂ ಓಂಕಾರಪ್ಪ, ನೀಲಕಂಠಪ್ಪ ಹೆಚ್.ಎಂ, ನಾಗರಾಜ್ ಎ.ಎಂ, ಗಂಗಾಧರ್ ಬಿ.ವಿ, ಮಂಜುನಾಥ್ ಕೆ.ಎಂ, ಪ್ರಕಾಶ್.ಪಿ, ತೀರ್ಪುಗಾರರಾಗಿ ಪ್ರಭಾಕರ್ ಕೆ.ಆರ್ ಭಾಗವಹಿಸಿದ್ದರು.ಶಿಕ್ಷಣ ಸಂಯೋಜಕ ಜಿ.ಎಂ ಜಗದೀಶ್ ಸ್ವಾಗತಿಸಿ, ಮಧು ಎಸ್.ಬಿ ವಂದಿಸಿದರು.

Taluk level science seminar

About Author

Leave a Reply

Your email address will not be published. Required fields are marked *