September 16, 2024

ಬಸವನಹಳ್ಳಿಯ ಹಿಂದೂ ಮಹಾಗಣಪತಿ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

0
ಹಿಂದೂ ಮಹಾಗಣಪತಿ ಸೇವಾ ಸಂಘದ ಮುಖಂಡ ಸಂತೋಷ್ ಕೊಟ್ಯಾನ್ ಸುದ್ದಿಗೋಷ್ಠಿ

ಹಿಂದೂ ಮಹಾಗಣಪತಿ ಸೇವಾ ಸಂಘದ ಮುಖಂಡ ಸಂತೋಷ್ ಕೊಟ್ಯಾನ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀ ಗಣಪತಿ ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಂಘದಿಂದ ೧೦ ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವವನ್ನು ಆವರಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಮುಖಂಡ ಸಂತೋಷ್ ಕೊಟ್ಯಾನ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹಿಂದೂ ಮಹಾಗಣಪತಿ ಸೇವಾ ಸಂಘದಿಂದ ಕಳೆದ ೧೧ ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿದ್ದು, ನಗರದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ ಎಂದರು.

ಬಾಲಗಂಗಾಧರ ತಿಲಕ್ ಮತ್ತು ವಿನಾಯಕ ದಾಮೋದರ ಸಾರ್ವಕರ್ ಅವರ ಚಿಂತನೆ ಹಾಗೂ ಪ್ರೇರಣೆಯಿಂದ ಆರಂಭವಾದ ಹಿಂದೂ ಮಹಾಗಣಪತಿ ಹಿಂದೂ ಸಮಾಜದ ಜಾಗೃತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಧಾರ್ಮಿಕ ಚಟುವಟಿಕೆ, ಗಣೇಶೋತ್ಸವಕ್ಕೆ ಸೀಮಿತವಾಗದೆ ಅನೇಕ ಸಮಾಜಸೇವಾ ಚಟುವಟಿಕೆಗಳನ್ನು ಕಳೆದ ೧೦ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಕಾರ್ಗಿಲ್ ವಿಜಯಕ್ಕೆ ೨೫ ವರ್ಷಗಳು ತುಂಬುತ್ತಿರುವ ಅಂಗವಾಗಿ ದೇಗುಲದ ದ್ವಾರಕ್ಕೆ ಕಾರ್ಗಿಲ್ ವಿಜಯ ದ್ವಾರ ಎಂದು ಹೆಸರಿಡಲಾಗಿದೆ. ಜೊತೆಗೆ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ವೀರ ಸೈನಿಕ ಕ್ಯಾಪ್ಟನ್ ನವೀನ್ ನಾಗಪ್ಪ ಅವರ ಉಪಸ್ಥಿತಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ನಿವೃತ್ತ ಯೋಧರು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿರುತ್ತಾರೆ ಎಂದರು.

ಭಾರತದ ನೂರಾರು ದೇಗುಲಗಳ ಪುನರ್ ನಿರ್ಮಾಣಕ್ಕೆ ನಾಂದಿಯಾಗಿರುವ ಇಂದೋರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ೩೦೦ ನೇ ಜನ್ಮ ವರ್ಷಾಚರಣೆ ಅಂಗವಾಗಿ ಪ್ರಧಾನ ವೇದಿಕೆಗೆ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ವೇದಿಕೆ ಎಂದು ಹೆಸರಿಡಲಾಗಿದ್ದು, ಜೊತೆಗೆ ಅವರ ಸಾಧನೆಗಳನ್ನು ಈ ಗಣೇಶೋತ್ಸವದಲ್ಲಿ ಕಥಾ ರೂಪದಲ್ಲಿ ಪ್ರಸ್ತುತಪಡಿಸಲಾಗುವುದೆಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ೨೦೨೫ ನೇ ಇಸವಿಗೆ ೧೦೦ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಸಂಘವು ಪಂಚ ಪರಿವರ್ತನೆ ಎಂಬ ಐದು ಅಂಶಗಳನ್ನು ಸಮಾಜದ ಮುಂದಿಟ್ಟಿದೆ. ಅವುಗಳೆಂದರೆ ಹಿಂದೂ ಕುಟುಂಬ ಪದ್ದತಿ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವ ಆಧಾರಿತ ಜೀವನ ಪದ್ದತಿ ಹಾಗೂ ನಾಗರೀಕ ಶಿಷ್ಟಾಚಾರ ಈ ವಿಷಯಗಳ ಬಗ್ಗೆ ಪ್ರತಿ ದಿನ ಒಂದು ವಿಷಯ ಕುರಿತು ಉಪನ್ಯಾಸ ಆಯೋಜಿಸಲಾಗಿದೆ ಎಂದರು.

ನಗರದ ಹಿಂದೂ ಮಹಾಗಣಪತಿ ಸೇವಾ ಸಂಘ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಗೃತಿ, ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿದ್ದು, ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಗಣೇಶೋತ್ಸವದ ಅಂಗವಾಗಿ ಸೆ.೧೪ ರಂದು ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದರು. ಸೆ.೧೭ ರಂದು ಮಂಗಳವಾರ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಸೆ.೧೮ ರಂದು ಬುಧವಾರ ಮಧ್ಯಾಹ್ನ ೨ ಗಂಟೆಗೆ ಶ್ರೀಯವರನ್ನು ಭವ್ಯವಾದ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಬೃಹತ್ ಶೋಭಯಾತ್ರೆಯೊಂದಿಗೆ ವಿವಿಧ ಜಾನಪದ ಕಲಾ ತಂಡಗಳ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೋಟೆ ಕೆರೆಯಲ್ಲಿ ವಿಸರ್ಜಿಸಲಾಗುವುದೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಹಾಗಣಪತಿ ಸೇವಾ ಸಂಘದ ಅಧ್ಯಕ್ಷ ಆಟೋ ಶಿವಣ್ಣ, ಪದಾಧಿಕಾರಿಗಳಾದ ಶರತ್ ಕಲ್ಯಾಣ್, ಗೌತಮ್, ನೂತನ್, ಶ್ಯಾಮ್ ಉಪಸ್ಥಿತರಿದ್ದರು.

Various cultural programs at Hindu Mahaganapati Utsav at Basavanahalli

About Author

Leave a Reply

Your email address will not be published. Required fields are marked *