September 16, 2024

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಹಿಂಪಡೆದ ರಾಜ್ಯ ಸರಕಾರ

0
ನಟ ಪ್ರಕಾಶ್ ರೈ ಹಾಗೂ ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ

ನಟ ಪ್ರಕಾಶ್ ರೈ ಹಾಗೂ ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ

ಚಿಕ್ಕಮಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಆರೋಪದ ಮೇರೆಗೆ ೨೦೧೮ರಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಮುಖಂಡರು ಹಾಗೂ ಚಲನಚಿತ್ರ ನಟ ಪ್ರಕಾಶ್ ರೈ ಹಾಗೂ ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ ಸೇರಿದಂತೆ ೧೮ ಜನರ ಮೇಲೆ ಚುನಾವಣಾಧಿಕಾರಿಗಳು ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನೀತಿ ಸಂಹಿತೆ ಪ್ರಕರಣವನ್ನು ರಾಜ್ಯ ಸರಕಾರ ಹಿಂಪಡೆದಿದೆ.

ಕಳೆದ ೨೦೧೮ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಮೇ ೩ರಂದು ಚಿಕ್ಕಮಗಳೂರು ನಗರದ ಅಂಡೆಛತ್ರ ಎಂಬಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ವತಿಯಿಂದ ಜಾಗೃತಿ ಸಮಾವೇಶ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಚಲನಚಿತ್ರ ನಟ ಪ್ರಕಾಶ್ ರೈ, ಗುಜರಾತ್ ರಾಜ್ಯದ ಶಾಸಕ ಜಿಗ್ನೇಶ್ ಮೇವಾನಿ, ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ಹಾಗೂ ಸಂಘಟನೆಯ ಮುಖಂಡ ಕೆ.ಎಲ್.ಅಶೋಕ್, ಗೌಸ್ ಮೋಹಿದ್ದೀನ್ ಹಾಗೂ ಮುಖಂಡರಾದ ಕೃಷ್ಣಮೂರ್ತಿ, ಗೌಸ್‌ಮುನೀರ್, ವಸಂತ್‌ಕುಮಾರ್, ವಕೀಲ ಪರಮೇಶ್ವರ್, ಮಹೇಶ್, ಪುಟ್ಟಸ್ವಾಮಿ, ವಸಂತ್‌ಕುಮಾರ್, ಯೂಸೂಫ್ ಹಾಜಿ, ಉಮೇಶ್, ಯಲಗುಡಿಗೆ ಹೊನ್ನಪ್ಪ, ಇರ್ಷಾದ್ ಅಹ್ಮದ್, ಹಸನಬ್ಬ ಹಾಗೂ ರೈತ ಮುಖಂಡ ಕೆ.ಕೆ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಅಂದು ಮಧ್ಯಾಹ್ನ ೩ಕ್ಕೆ ಕಾರ್ಯಕ್ರಮ ಆರಂಭವಾಗಿದ್ದು, ಸಂಜೆ ೪ರ ಸಮಯದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ನಗರಸಭೆ ಪೌರಾಯುಕ್ತೆ ತುಷಾರಮಣಿ ನೇತೃತ್ವದ ಪ್ಲೈಯಿಂಗ್ ಸ್ಕ್ವಾಡ್ ತಂಡವು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಾರ್ಯಕ್ರಮ ಹಾಗೂ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆದಿಲ್ಲ, ಅಲ್ಲದೇ ಅಕ್ರಮವಾಗಿ ಸಭೆ ನಡೆಸಿ ವಾಹನ, ಜನಸಂಚಾರಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಆರೋಪಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

ಚುನಾವಣಾಧಿಕಾರಿಗಳ ದೂರಿನ ಮೇರೆಗೆ ನಟ ಪ್ರಕಾಶ್ ರೈ, ಶಾಸಕ ಜಿಗ್ನೇಶ್ ಮೇವಾನಿ, ಕಲ್ಕುಳಿ ವಿಠಲ್ ಹೆಗ್ಡೆ, ಕೆ.ಎಲ್.ಅಶೋಕ್, ಗೌಸ್‌ಮೊಹಿದ್ದೀನ್ ಸೇರಿದಂತೆ ೧೮ ಮಂದಿ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ೨೦೧೮ರ ಈ ಪ್ರಕರಣವನ್ನು ರಾಜ್ಯ ಸರಕಾರ ಹಿಂಪಡೆದಿದ್ದು, ಇದರಿಂದಾಗಿ ಹೋರಾಟಗಾರರು, ಪ್ರಗತಿಪರ ಚಿಂತಕರು ನಿರಾಳರಾಗಿದ್ದಾರೆ.

The state government has withdrawn the case of violation of election code of conduct

 

About Author

Leave a Reply

Your email address will not be published. Required fields are marked *