September 17, 2024

ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ಮಹಿಳೆಯಿಂದ ಹಲ್ಲೆ-ಆರೋಪಿ ಬಂಧನ

0
ವೈದ್ಯರ ಮೇಲೆ ಹಲ್ಲೆ ಖಂಡಿಸಿ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ

ವೈದ್ಯರ ಮೇಲೆ ಹಲ್ಲೆ ಖಂಡಿಸಿ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ

ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹಲ್ಲೆ ಮಾಡಿ, ಕೊರಳ ಪಟ್ಟಿ ಹಿಡಿದು ಎಳೆದಾಡಿದ ಘಟನೆ ಮಂಗಳವಾರ ನಡೆದಿದೆ.

ಘಟನೆ ಖಂಡಿಸಿ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ರೋಗಿಗಳು ಗಂಟೆಗಳ ಕಾಲ ಚಿಕಿತ್ಸೆ ಇಲ್ಲದೆ ಪರದಾಡುವಂತಾಯಿತು. ಆಸ್ಪತ್ರೆಯ ತುರ್ತು ಚಿಕತ್ಸಾ ವೈದ್ಯಾಧಿಕಾರಿಯಾಗಿರುವ ಮೂಳೆ ತಜ್ಞ ಡಾ.ಬಿ.ಎಸ್.ವೆಂಕಟೇಶ್ ಅವರ ಮೇಲೆ ತಸ್ಲೀಂ ಎಂಬ ಮಹಿಳೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.

ಬೆಳಗ್ಗೆ ೧.೪೫ ರ ಸುಮಾರಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಈ ಘಟನೆ ನಡೆದಿದೆ. ಆರೋಪಿತ ಮಹಿಳೆ ತಸ್ಲೀಂ ಅವರ ಸಂಬಂಧಿ ಇರ್ಫಾನ್ ಎಂಬುವವರಿಗೆ ಚಿಕಿತ್ಸೆ ನೀಡುವಾಗಲೇ ಆಕೆ ಕೂಗಾಡುತ್ತ ವೈದ್ಯರ ಮೇಲೆ ಚಪ್ಪಲಿ ತೂರಿದ್ದಲ್ಲದೆ, ವೈದ್ಯರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಶುಶ್ರೂಷಕಿಯರು ಮತ್ತು ಡಿ.ಗ್ರೂಪ್ ನೌಕರರು ಧಾವಿಸಿ ಬಂದು ವೈದ್ಯರನ್ನು ರಕ್ಷಿಸಿದ್ದಾರೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ವೈದ್ಯ ವೆಂಕಟೇಶ್ ಅವರು ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಯಾರೊಂದಿಗೋ ಗಲಾಟೆ ಮಾಡಿಕೊಂಡು ಗಾಯಗೊಂಡಿದ್ದ ಇರ್ಫಾನ್ ತಸ್ಲೀಂ ಎಂಬ ಮಹಿಳೆಯೊಂದಿಗೆ ಆಸ್ಪತ್ರೆಗೆ ಬಂದಿದ್ದ. ಆತನನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ನಂತರ ಬೇರೆ ರೋಗಿಗೆ ಚಿಕಿತ್ಸೆ ನೀಡಲೆಂದು ವೈದ್ಯರ ಸಮಾಲೋಚನಾ ಕೊಠಡಿಗೆ ತೆರಳುವ ವೇಳೆ ಅಲ್ಲೇ ಇದ್ದ ಮಹಿಳೆ ತಸ್ಲೀಂ ವಿನಾ ಕಾರಣ ನನ್ನನ್ನು ಅವಾಚ್ಯವಾಗಿ ನಿಂಧಿಸುತ್ತಾ ಕುತ್ತಿಗೆ ಪಟ್ಟಿ ಹಿಡಿದು ದೈಹಿಕವಾಗಿ ಹಲ್ಲೆ ಮಾಡಿ, ತನ್ನ ಕಾಲಿನಲ್ಲಿದ್ದ ಚಪ್ಪಲಿಯಿಂದ ಹೊಡೆದಿದ್ದಾರೆ.

ಈ ವೇಳೆ ಮಹಿಳೆಯ ಸಂಬಂಧಿಯಾಗಿರುವ ಮತ್ತೋರ್ವ ಮಹಿಳೆ ಸಹ ಚಪ್ಪಲಿಯಲ್ಲಿ ಹೊಡಿ ಎನ್ನುತ್ತಾ ಕುಮ್ಮಕ್ಕು ನೀಡಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಇರ್ಫಾನ್ ಸಹ ಮಲಗಿದಲ್ಲಿಂದಲೇ ನನ್ನನ್ನು ನಿಂಧಿಸಿದ್ದಾನೆ ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಶುಶ್ರೂಷಕಿಯರಾದ ಅರುಣಾಕ್ಷಿ, ಶಿಲ್ಪ ಮತ್ತು ಡಿ.ಗ್ರೂಪ್ ನೌಕರ ಪ್ರಮೋದ್ ಮತ್ತು ಭರತ್ ಅವರು ಬಂದು ಗಲಾಟೆ ಬಿಡಿಸಿದ್ದಾರೆ. ಹಲ್ಲೆ ನಡೆಸಿದ್ದಲ್ಲದೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಮಹಿಳೆ ತಸ್ಲಿಂ ಮತ್ತು ಹಲ್ಲೆಗೆ ಕುಮ್ಮಕ್ಕು ನೀಡಿದ ಇನ್ನೋರ್ವ ಮಹಿಳೆ ಮತ್ತು ಇರ್ಫಾನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವೈದ್ಯ ವೆಂಕಟೇಶ್ ಅವರ ಮೇಲೆ ಹಲ್ಲೆ ನಡೆದ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾ ಆಸ್ಪತ್ರೆ ಮತ್ತು ಹೆರಿಗೆ ಆಸ್ಪತ್ರೆಯ ಎಲ್ಲಾ ವೈದ್ಯರು, ಶುಶ್ರೂಷಕಿಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳೆಲ್ಲರೂ ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆ ಬಳಿ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಘೋಷಣೆ ಕೂಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಅವರಿಗೆ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಬೆಂಬಲ ನೀಡಿದರು.

ಹೊರ ರೋಗಿಗಳ ಚಿಕಿತ್ಸಾ ಘಟಕವನ್ನೂ ಸಹ ಸ್ಥಗಿತಗೊಳಿಸಿ ವೈದ್ಯರು ಸಿಬ್ಬಂಧಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇದರಿಂದ ಗಂಟೆಗಳ ಕಾಲ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು, ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಅವರು ತಪ್ಪಿತಸ್ಥ ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ ಅವರು ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಮನವಿ ಸ್ವೀಕರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಷ್ಟಕ್ಕೆ ಸಮಾಧಾನಗೊಳ್ಳದ ಪ್ರತಿಭಟನಾ ನಿರತ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆಯಿಂದ ನಗರ ಠಾಣೆ ವರೆಗೆ ಕಾಲ್ನಡಿಗೆಯಲ್ಲೇ ತೆರಳಿ ಲಿಖಿತ ದೂರು ಸಲ್ಲಿಸಿದರು. ಆರೋಪಿಗಳನ್ನು ಬಂಧಿಸುವವರೆಗೆ ಸ್ಥಳದಲ್ಲೇ ಪ್ರತಿಘಟನೆ ನಡೆಸುವುದಾಗಿ ತಿಳಿಸಿದರು. ದೂರು ದಾಖಲಿಸಿಕೊಂಡ ಪೊಲೀಸರು ಸಂಜೆ ೫ ಗಂಟೆ ಒಳಗಾಗಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು. ೫ ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು.

ಸಂಘಟನೆಗಳ ಪ್ರತಿಭಟನೆ: ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ವಿವಿಧ ಸಂಘಟನೆ ಕಾರ್ಯಕರ್ತರು ನಗರ ಠಾಣೆ ಎದುರು ಪ್ರತಿಭಟನೆ ನಡೆಸಿ ಆರೋಪಿತ ಮಹಿಳೆ ಮತ್ತಿತರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಬಜರಂಗದಳ, ಆಟೋ ಚಾಲಕರ ಸಂಘ, ಕರವೇ ಸೇರಿಂದತೆ ಇತರೆ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆರೋಪಿಗಳನ್ನು ನ್ಯಾಯಾಂಗ ಬಂಧನ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕರ್ತವ್ಯ ನಿರತ ವೈದ್ಯ ಡಾಕ್ಟರ್ ವೆಂಕಟೇಶ್ ಮೇಲೆ ತಸ್ಲೀಮ್ ಚಪ್ಪಲಿಯಿಂದ ಥಳಿಸಿ ಕೊರಳು ಪಟ್ಟಿ ಹಿಡಿದು ಎಳೆದಾಡುವ ಮೂಲಕ ದೌರ್ಜನ್ಯ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಪ್ರಕರಣ ಸಂಬಂಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವೈದ್ಯ -ಸಿಬ್ಬಂದಿ ಮುಷ್ಕರ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದೂರನ್ನು ನೀಡಿತ್ತು.

ಪ್ರಕರಣದ ತೀವ್ರತೆ ಹಾಗೂ ಸಾರ್ವಜನಿಕ ವಲಯದಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ತಸ್ಲಿಮ ಹಾಗೂ ಇರ್ಫಾನ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳೀಬ್ಬರನ್ನು ಇದೇ ತಿಂಗಳ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶ ನೀಡಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

Assault by a woman on a doctor of a district hospital-accused arrested

About Author

Leave a Reply

Your email address will not be published. Required fields are marked *

You may have missed