September 19, 2024

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

0
ವಿದ್ಯಾರ್ಥಿಗಳು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

ವಿದ್ಯಾರ್ಥಿಗಳು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

ಚಿಕ್ಕಮಗಳೂರು: ತಾಲೂಕಿನ ಸಿದ್ದಾಪುರ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಆಗ್ರಹಿಸಿ ಆ ಶಾಲೆಯ ವಿದ್ಯಾರ್ಥಿಗಳು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಕುಗ್ರಾಮದಿಂದ ಸಮವಸ್ತ್ರದಲ್ಲೇ ಬಂದಿದ್ದ ಶಾಲಾ ಮಕ್ಕಳು ಬಿಇಓ ಕಚೇರಿ ಅಂಗಳದಲ್ಲಿ ಧರಣಿ ನಡೆಸಿ ಶಿಕ್ಷಕರನ್ನು ಶೀಘ್ರದಲ್ಲಿ ನಿಯೋಜಿಸುವಂತೆ ಆಗ್ರಹಿಸಿದರು.

ಈ ವೇಳೆ ರಮೇಶ್ ಮಾತನಾಡಿ, ಸಿದ್ದಾಪುರ ಶಾಲೆಯಲ್ಲಿ ೨೨ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿದ್ದರು. ಅಲ್ಲಿದ್ದ ಓರ್ವ ಶಿಕ್ಷಕ ವರ್ಗಾವಣೆಯಾಗಿದ್ದಾರೆ. ಈಗ ಮಕ್ಕಳಿಗೆ ಕಲಿಸಲು ಶಿಕ್ಷಕರಿಲ್ಲ. ಶಿಕ್ಷಕರ ನಿಯೋಜನೆ ಮಾಡುತ್ತೇನೆ ಎಂದು ಹೇಳಿದ್ದ ಬಿಇಓ ಇಲ್ಲಿಯವರೆಗೆ ಯಾರನ್ನೂ ನಿಯೋಜಿಸಿಲ್ಲ. ಹೀಗಾಗಿ ಕಾಯಂ ಶಿಕ್ಷಕರು ಬೇಕು ಎಂದು ಧರಣಿ ಕುಳಿತಿದ್ದೇವೆ, ಶಿಕ್ಷಕರ ನಿಯೋಜನೆ ಮಾಡುವವರೆಗೂ ಧರಣಿಯಿಂದ ಏಳುವುದಿಲ್ಲ ಎಂದು ಹೇಳಿದರು.

ಸಿದ್ದಾಪುರದ ಪಕ್ಕದ ಗಂಗೆ ಗಿರಿಯಲ್ಲಿ ೫-೬ ಮಕ್ಕಳಿದ್ದರೂ ಕೂಡ ಶಾಲೆ ಮುಚ್ಚಿದ್ದಾರೆ. ಮುಚ್ಚಿದ ನಂತರ ವೆಂಕಟೇಶ್ ಮೂರ್ತಿ ಎಂಬ ಶಿಕ್ಷಕರನ್ನು ಸಿದ್ದಾಪುರಕ್ಕೆ ತಾತ್ಕಾಲಿಕವಾಗಿ ನಿಯೋಜನೆ ಮಾಡಿದ್ದಾರೆ. ಆ ಶಿಕ್ಷಕ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ ಎಂದು ದೂರಿದರು.

ಬೇರೆ ಕ್ಲಸ್ಟರ್‌ನಿಂದಲೂ ಶಿಕ್ಷಕರನ್ನು ನಿಯೋಜಿಸುವುದಾಗಿ ಹೇಳಿದ್ದು ಯಾರೂ ಕೂಡ ಈವರೆಗೆ ಬಂದಿಲ್ಲ. ಹೀಗಾಗಿ ಸಿದ್ದಾಪುರ ಶಾಲೆಗೆ ಶಾಶ್ವತವಾಗಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಬಿಜೆಪಿ ಮುಖಂಡ ಜೆ.ಡಿ.ಲೋಕೇಶ್, ಸಿದ್ದಾಪುರ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Students’ protest in front of the field education officer’s office

About Author

Leave a Reply

Your email address will not be published. Required fields are marked *

You may have missed