September 19, 2024

ಸೆ.೧೪ಕ್ಕೆ ರಾಜ್ಯಗಳ ಅಸ್ಮಿತೆ ಹಕ್ಕು ರಕ್ಷಣೆಗಾಗಿ ಒಕ್ಕೂಟ ಉಳಿಸಿ ಆಂದೋಲನ

0
ಜನಶಕ್ತಿ ಸಂಘದ ರಾಜ್ಯ ಉಪಾಧ್ಯಕ್ಷ ಗೌಸ್ ಮೊಹಿದ್ದೀನ್ ಸುದ್ದಿಗೋಷ್ಠಿ

ಜನಶಕ್ತಿ ಸಂಘದ ರಾಜ್ಯ ಉಪಾಧ್ಯಕ್ಷ ಗೌಸ್ ಮೊಹಿದ್ದೀನ್ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಭಾರತದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನದ ವಿರುದ್ಧ ಧ್ವನಿ ಎತ್ತಲು ಒಕ್ಕೂಟ ಉಳಿಸಿ ಆಂದೋಲನ ನಡೆಯಲಿದೆ ಎಂದು ಜನಶಕ್ತಿ ಸಂಘದ ರಾಜ್ಯ ಉಪಾಧ್ಯಕ್ಷ ಗೌಸ್ ಮೊಯಿದ್ದೀನ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗೋಪಾಲ್‌ಗೌಡ ಅವರ ಅಧ್ಯಕ್ಷತೆಯಲ್ಲಿ ಸೆ.೧೪ ರಂದು ಶನಿವಾರ ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ಯುವಿಸಿಇ ಅಲುಮ್ನಿ ಹಾಲ್ ಮುಂಭಾಗದ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದರು.

ಈ ಸಂಬಂಧ ನಡೆಯುವ ವಿವಿಧ ಪ್ರತಿಭಟನಾ ಸಭೆಗಳು ಹಾಗೂ ಅರಿವಿನ ಆಂದೋಲನದಲ್ಲಿ ರಾಜ್ಯದ ಸಮಸ್ತ ಪ್ರಜಾತಂತ್ರವಾದಿಗಳು ಭಾಗವಹಿಸಬೇಕೆಂದು ಮನವಿ ಮಾಡಿದ ಅವರು ರಾಜ್ಯದ ಮತ್ತು ಹೊರ ರಾಜ್ಯದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ, ಪ್ರಜ್ಞಾವಂತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ರಾಜ್ಯಗಳ ಅಸ್ಮಿತೆ, ಹಕ್ಕು ಮತ್ತು ಪಾಲಿನ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನ ಆಯೋಜಿಸಲಾಗಿದೆ. ದೇಶದ ವಿವಿಧ ರಾಜ್ಯಗಳ ಸಾಂವಿಧಾನಿಕ, ಶಾಸನಾತ್ಮಕ, ವಿತ್ತೀಯ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಗಾಗಿ ಹೋರಾಟ ರೂಪಿಸಲಾಗಿದೆ ಎಂದರು.

ಪ್ರಜಾತಂತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯಗಳು ಒಕ್ಕೂಟ ಸರ್ಕಾರದ ಮದ್ಯೆ ಕೆಲವು ತಿಕ್ಕಾಟಗಳು ನಡೆಯುತ್ತಿದ್ದು, ಕಳೆದ ೧೦ ವರ್ಷಗಳಿಂದ ಈಚೆಗೆ ನಡೆಯುತ್ತಿರುವ ದಾಳಿಗಳು ಅತ್ಯಂತ ಅಪಾಯಕಾರಿಯಾಗಿದ್ದು, ಕೇಂದ್ರದ ದಾಳಿಯು ಒಕ್ಕೂಟ ವ್ಯವಸ್ಥೆಯನ್ನು ಮುಗಿಸುವ ನಿಟ್ಟಿನಲ್ಲಿ ಸಾಗಿದೆ ಎಂದು ಆರೋಪಿಸಿದರು.

ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ರಾಜಕೀಯ ವ್ಯವಸ್ಥೆಯು ಅದಕ್ಕೆ ತಡೆಯೊಡ್ಡಿ ನಿಲ್ಲುವ ಪ್ರಯತ್ನ ಮಾಡುತ್ತಾ ಬಂದಿದೆ. ಹೀಗಾಗಿ ದೇಶದ ವಿವಿಧ ರಾಜ್ಯದ ಪ್ರಾದೇಶಿಕ ನಾಯಕರ ವಿರುದ್ಧ ವಿವಿಧ ಆರೋಪಗಳನ್ನು ಹೊರಿಸಿ ಅವರನ್ನು ಗುರಿಮಾಡಿ ಧಮನ ಮಾಡುವ ಪ್ರಯತ್ನ ನಡೆಯುತ್ತಿರುವುದನ್ನು ಖಂಡಿಸಿದರು.

ಇಂದು ಸ್ವತಂತ್ರವೆಂದು ಭಾವಿಸಲಾದ ಎಲ್ಲಾ ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳ ಮೇಲೆ ಹೂಡಲಾದ ಬಾಣಗಳಂತೆ ಕೆಲಸ ಮಾಡುತ್ತಿವೆ. ರಾಜ್ಯಪಾಲರ ಕಚೇರಿಯನ್ನು ಕುತಂತ್ರದ ದಾಳಿಯ ಸ್ಥಳೀಯ ಕಚೇರಿಯಂತೆ ದುರುಪಯೋಗಪಡಿಸಲಾಗುತ್ತಿದ್ದು, ಇಂತಹ ಪ್ರಯತ್ನಗಳ ವಿರುದ್ಧ ೮೦ ರ ದಶಕದಲ್ಲಿಯೇ ದೊಡ್ಡ ಧ್ವನಿ ಎದ್ದಿದ್ದು ರಾಜ್ಯದಿಂದಲೇ ಎಂದು ಹೇಳಿದರು.

ನಂತರದಲ್ಲಿ ಸರ್ಕಾರ ಆಯೋಗವನ್ನು ರಚಿಸಿತು. ನಂತರ ನಿರ್ದಿಷ್ಟ ಸಾಂವಿಧಾನಿಕ ಕ್ರಮಗಳು ಆಗದಿದ್ದರೂ ಒಕ್ಕೂಟ ಸರ್ಕಾರದ ನಡವಳಿಕೆಯಲ್ಲಿ ಬದಲಾವಣೆಗಳಾದವು. ಈ ಎರಡು ದಶಕಗಳ ಸಮ್ಮಿಶ್ರ ಸರ್ಕಾರದ ಯುಗವಾಗಿದ್ದಿದ್ದು ಅದೇ ಕಾರಣಕ್ಕೆ ಎಂದು ತಿಳಿಸಿದರು.

ಆದರೆ ೨೦೧೪ ರಿಂದೀಚೆಗೆ ಒಕ್ಕೂಟ ಸರ್ಕಾರವು ರಾಜ್ಯಗಳ ಸ್ವಾಯತ್ತತೆಯ ಮೇಲೆ ಇದ್ದವನ್ನೇ ಹೂಡಿದಂತಿದೆ. ಹಲವು ಬಗೆಯಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವುದು ಮಾತ್ರವಲ್ಲದೆ ಗಟ್ಟಿಯಾದ ಬೇರುಗಳನ್ನುಳ್ಳ ನಾಯಕ-ನಾಯಕಿಯರನ್ನು ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಮೋಹನ್ ಕುಮಾರ್, ಎದ್ದೇಳು ಕರ್ನಾಟಕ ಸಂಚಾಲಕ ಸಂದೀಪ್, ಹಸನಬ್ಬ, ಗೀತಾ, ಅರುಣಾಕ್ಷಿ, ಗೋಪಾಲಗೌಡ, ಸುಧೀರ್, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

On 14th September the movement to save the union for the protection of the right to identity of the states

About Author

Leave a Reply

Your email address will not be published. Required fields are marked *

You may have missed