September 19, 2024

ಅಕ್ಟೋಬರ್ ೫ ರಿಂದ ೯ ರವರೆಗೆ ೪೪ನೇ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ

0
೪೪ನೇ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ ಆಚರಣೆಗೆ ಸಂಬಂಧಿಸಿದ ಪೂರ್ವ ಸಿದ್ಧತಾ ಸಭೆ

೪೪ನೇ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ ಆಚರಣೆಗೆ ಸಂಬಂಧಿಸಿದ ಪೂರ್ವ ಸಿದ್ಧತಾ ಸಭೆ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ೪೪ನೇ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವವನ್ನು ಅಕ್ಟೋಬರ್ ೫ ರಿಂದ ೯ ರವರೆಗೆ ಚಿಕ್ಕಮಗಳೂರು ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೆರಿ ಸಭಾಗಂಗಣದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ೪೪ನೇ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ ಆಚರಣೆಗೆ ಸಂಬಂಧಿಸಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಐದು ದಿನಗಳ ಶಿಬಿರದಲ್ಲಿ ೬ ರಿಂದ ೧೦ ವರ್ಷ ವಯೋಮಾನದ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು ೨೦೦೦ ಮಕ್ಕಳು ಭಾಗವಹಿಸುತ್ತಿದ್ದು, ಭಾಗವಹಿಸುವ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್. ಷಡಕ್ಷರಿ ಮಾತನಾಡಿ ಈ ಮೇಳದಲ್ಲಿ ೬ ರಿಂದ ೧೦ ವರ್ಷ ವಯೋಮಾನದ ಎಳೆಯರಿಗಾಗಿ ಸಾಹಸಮಯ ಚಟುವಟಿಕೆಗಳು, ಹೊರಸಂಚಾರ, ಶೈಕ್ಷಣೀಯ ಸ್ಥಳಗಳ ಸಂದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಜಿಲ್ಲೆಗಳ ವಿಶಿಷ್ಟ ಜಾನಪದ ಕಲೆಗಳು, ಕರಕುಶಲ ವಸ್ತುಗಳ ತಯಾರಿಕೆ, ಶಿಬಿರಾಗ್ನಿ, ಪ್ರಕೃತಿ ಅಧ್ಯಯನ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ೧೯೨೦ರಲ್ಲಿ ಮೊದಲನೇ ರಾಜ್ಯ ಜಾಂಬೂರಿ ನಡೆಸಿದ ಹೆಗ್ಗಳಿಕೆ ಇದೆ. ಇದು ೨ನೇ ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಕಾರ್ಯಕ್ರಮದ ಸಿದ್ಧತೆಗೆ ಸಹಕಾರ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಎ.ಎನ್. ಮಹೇಶ್, ಜಿಲ್ಲಾ ಆಯುಕ್ತ ಟಿ.ಕೆ. ಪಣಿರಾಜ್, ಜಿಲ್ಲಾ ಆಯುಕ್ತೆ ಗೈಡ್ಸ್ ಡಿ.ಎಸ್. ಮಮತ, ಸಹಾಯಕ ಕಾರ್ಯದರ್ಶಿ ಎಲ್.ಟಿ. ಲೋಕೇಶ್, ಜಿಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Pre-preparatory meeting for the 44th Cubs and Bulls festival celebration

About Author

Leave a Reply

Your email address will not be published. Required fields are marked *

You may have missed