September 19, 2024

ಸಂಗೀತದ ವೈವಿದ್ಯತೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಅಗತ್ಯ ಇದೆ

0
ತಾಲ್ಲೂಕು ಪ್ರೌಢ ಶಾಲೆಗಳ ಸಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ತಾಲ್ಲೂಕು ಪ್ರೌಢ ಶಾಲೆಗಳ ಸಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ಚಿಕ್ಕಮಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯೇತರ ಚಟುವಟಿಕೆಗಳು ಪಾಠದ ಒಂದು ಭಾಗ ಎಂದು ಹೇಳಲಾಗಿದೆ. ಆಟವನ್ನು ಕೂಡ ಪಾಠ ಎಂಬುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅಭಿಪ್ರಾಯಿಸಿದರು.

ಅವರು ಇಂದು ಗೃಹ ಮಂಡಳಿ ಬಡಾವಣೆಯ ಪ್ರೌಢಶಾಲೆಯೊಂದರಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ, ನಗರ-೦೩, ಸರ್ಕಾರಿ ಪ್ರೌಢ ಶಾಲೆ ಗೃಹ ಮಂಡಳಿ ಇವರುಗಳ ಸಂಯಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ತಾಲ್ಲೂಕು ಪ್ರೌಢ ಶಾಲೆಗಳ ಸಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಅದೆಷ್ಟೋ ಬಗೆಯ ಕಲಾ ಪ್ರಕಾರಗಳಿವೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ, ಸಂಗೀತದಲ್ಲೇ ನೂರೆಂಟು ಬಗೆಯ ಸಂಗೀತವಿದೆ. ಆ ವೈವಿದ್ಯತೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂಬ ಹಿನ್ನೆಲೆಯಲ್ಲಿ ಈಗಿರುವ ದಾವಂತದ ಬದುಕಿನಲ್ಲಿ ಕಳೆದುಹೋಗಬಾರದೆಂಬ ಎಚ್ಚರಿಕೆ ವಹಿಸಿ ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಿಸಲು ಮತ್ತು ವೇದಿಕೆ ಕಲ್ಪಿಸಲು ಈ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದರು.

ಯಾವುದೇ ಕಾಯಕ ಮಾಡಿದರೂ ಅದನ್ನು ಜನರ ಮನಮುಟ್ಟುವಂತೆ ಮಾಡಬೇಕು. ಆ ಮೂಲಕ ಅದರಲ್ಲಿ ಒಂದಾಗಿ ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಅಗತ್ಯ ಇದೆ ಎಂದು ವಿನಂತಿಸಿದರು.

ಹಿಂದೆ ಪ್ರತೀ ಹಳ್ಳಿಯಲ್ಲೂ ಹಾರ್ಮೋನಿಯಂ ನುಡಿಸುವವರು, ತಬಲ ಮೇಸ್ಟ್ರು ಇರುತ್ತಿದ್ದರು. ಇಂದು ಇವೆಲ್ಲ ಕಣ್ಮರೆಯಾಗಿವೆ. ವಿದ್ಯೆ ಕೇವಲ ಪುಸ್ತಕದಲ್ಲಿ ಎಂದು ಭಾವಿಸಬಾರದು, ಇವೆಲ್ಲವೂ ವಿದ್ಯೆಯ ಪ್ರಕಾರಗಳೇ ಆಗಿದ್ದು, ಕ್ರೀಡೆಯು ಸಹ ವಿದ್ಯೆಯ ಒಂದು ಭಾಗವಾಗಿದೆ ಎಂದು ವಿಶ್ಲೇಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ, ವಿದ್ಯಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದೆ ಎಂದು ಹೇಳಿದರು.

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಷ್ಟೇ ವೇಗವಾಗಿ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರ ಪ್ರತಿಭೆ ಹೊರತರುವಲ್ಲಿ ಶಿಕ್ಷಕರ ಶ್ರಮ ಅಭಿನಂದನೀಯ ಎಂದರು.

ವಿವಿಧತೆಯಲ್ಲಿ ಏಕತೆ ಸಾರುವಂತ ಕಾರ್ಯಕ್ರಮ ಇದಾಗಿದ್ದು, ಮಕ್ಕಳಲ್ಲಿ ಬೇದಭಾವ ಇಲ್ಲದೆ ಒಂದಾಗಿ ಕುಳಿತು ಕಲಿತು ಮುಂದಿನ ಸತ್ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.

ಸ್ಥಳೀಯ ಪ್ರತಿಭೆಗಳು, ಸ್ಥಳೀಯರು ಇಂತಹ ಕ್ರೀಡಾಕೂಟಗಳಲ್ಲಿ ಭಾಗಿಯಾದಾಗ ಮಾತ್ರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಸರ್ಕಾರದ ಅನುದಾನದಲ್ಲಿ ಕ್ರೀಡಾಕೂಟಗಳನ್ನು ನಡೆಸುವುದು ಕಷ್ಟಸಾಧ್ಯ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಕ್ರೀಡಾಕೂಟಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ನಗರಸಭೆ ಮಾಜಿ ಅಧ್ಯಕ್ಷೆ ಕವಿತಶೇಖರ್, ಎಸ್‌ಡಿಎಂಸಿ ಅಧ್ಯಕ್ಷೆ ಶಿಲ್ಪ, ಕೀರ್ತಿ ಶೇಟ್, ದೊಡ್ಡಮಲ್ಲಪ್ಪ, ಕೃಷ್ಣಮೂರ್ತಿ ರಾಜ್ ಅರಸ್, ಶ್ರೀನಿವಾಸ್, ಸಹದೇವ್, ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಮುಖ್ಯ ಶಿಕ್ಷಕಿ ಭಾರತಿ ಸ್ವಾಗತಿಸಿದರು.

Taluk High Schools C Zone Level Pratibha Karanji Kalotsava

About Author

Leave a Reply

Your email address will not be published. Required fields are marked *

You may have missed